ಇದು ದಕ್ಷಿಣದ ರಾಜ್ಯಗಳ ಹೋರಾಟಕ್ಕೆ ಸಿಕ್ಕ ಐತಿಹಾಸಿಕ ಜಯ! ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಬಗ್ಗೆ ಸ್ಟಾಲಿನ್ ಮೊದಲ ಪ್ರತಿಕ್ರಿಯೆ | MK Stalin

ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಬಗ್ಗೆ ಸ್ಟಾಲಿನ್ ಮೊದಲ ಪ್ರತಿಕ್ರಿಯೆ
ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಬಗ್ಗೆ ಸ್ಟಾಲಿನ್ ಮೊದಲ ಪ್ರತಿಕ್ರಿಯೆ
Published on: 

ಚೆನ್ನೈ: ಕೇಂದ್ರ ಸರ್ಕಾರ ಮಂಡಿಸಲು ಉದ್ದೇಶಿಸಿರುವ ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ಬೆಂಬಲ ನೀಡುವುದಾಗಿ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಘೋಷಿಸಿದ್ದಾರೆ. ಕಳೆದ ಏಪ್ರಿಲ್‌ನಲ್ಲಿ ಈ ಮಸೂದೆಯನ್ನು ವಿರೋಧಿಸಲು ಕಾರಣವಾಗಿದ್ದ ತಮ್ಮ ಪಕ್ಷದ ಎರಡು ಪ್ರಮುಖ ಬೇಡಿಕೆಗಳನ್ನು ಕೇಂದ್ರ ಸರ್ಕಾರವು ಹೊಸ ಮಸೂದೆಯಲ್ಲಿ ಲಿಖಿತ ರೂಪದಲ್ಲಿ ಸೇರ್ಪಡೆಗೊಳಿಸಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಪಕ್ಷದ ಸಂಸದರ ಸಭೆಯ ಬಳಿಕ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಸ್ಟಾಲಿನ್, ಈ ಬೆಳವಣಿಗೆಯನ್ನು 2024ರಿಂದ ಡಿಎಂಕೆ ನಡೆಸಿದ ನಿರಂತರ ಹೋರಾಟಕ್ಕೆ ಹಾಗೂ ತಮಿಳುನಾಡು ಸೇರಿದಂತೆ ಎಲ್ಲಾ ದಕ್ಷಿಣ ಭಾರತದ ರಾಜ್ಯಗಳಿಗೆ ಸಿಕ್ಕ ಐತಿಹಾಸಿಕ ಜಯ ಎಂದು ಬಣ್ಣಿಸಿದ್ದಾರೆ.

ಕಳೆದ ಏಪ್ರಿಲ್‌ನಲ್ಲಿ ನಾವು ಯಾವ ಎರಡು ಬೇಡಿಕೆಗಳಿಗಾಗಿ ಕ್ಷೇತ್ರ ಪುನರ್ವಿಂಗಡಣೆ ಮಸೂದೆಯನ್ನು ವಿರೋಧಿಸಿದ್ದೆವೋ, ಅವುಗಳನ್ನು ಈಗ ಹೊಸ ಮಸೂದೆಯಲ್ಲಿ ಲಿಖಿತವಾಗಿ ಸೇರಿಸಲಾಗಿದೆ. ಈ ಎಲ್ಲಾ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರ, ಪ್ರಾಯೋಗಿಕವಾಗಿ ಕಾರ್ಯಸಾಧುವಾದ ಮತ್ತು ನಮಗೆ ಪ್ರಯೋಜನಕಾರಿಯಾದ ಈ ಸ್ವರೂಪದ ಕ್ಷೇತ್ರ ಪುನರ್ವಿಂಗಡಣೆಯನ್ನು ಬೆಂಬಲಿಸಲು ಡಿಎಂಕೆ ಸಂಸದರ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಸ್ಟಾಲಿನ್ ತಿಳಿಸಿದ್ದಾರೆ.

ಭಾವನಾತ್ಮಕವಾಗದೆ ಶಾಂತವಾಗಿ ಯೋಚಿಸಬೇಕು!

ಈ ವಿಷಯವನ್ನು ಭಾವನಾತ್ಮಕವಾಗಿ ನೋಡದೆ, ಶಾಂತವಾಗಿ ಮತ್ತು ವಾಸ್ತವಿಕವಾಗಿ ವಿಶ್ಲೇಷಿಸಬೇಕು ಎಂದು ಸ್ಟಾಲಿನ್ ಜನರಿಗೆ ಕರೆ ನೀಡಿದ್ದಾರೆ. 1971ರ ಜನಗಣತಿಯ ಆಧಾರದ ಮೇಲೆ ಎಲ್ಲಾ ರಾಜ್ಯಗಳಿಗೂ ಶೇ. 50ರಷ್ಟು ಕ್ಷೇತ್ರಗಳನ್ನು ಹೆಚ್ಚಿಸುವ ಈ ಪ್ರಸ್ತಾವನೆಯನ್ನು ತಿರಸ್ಕರಿಸಿದರೆ, ಒಂದು ಉತ್ತಮ ಅವಕಾಶವನ್ನು ಕಳೆದುಕೊಂಡಂತಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಪರಿಷ್ಕೃತ ಪ್ರಸ್ತಾವನೆಯ ಪ್ರಾಯೋಗಿಕ ಪರಿಣಾಮಗಳು ಮತ್ತು ರಾಜ್ಯದ ಹಿತಾಸಕ್ತಿ ರಕ್ಷಿಸಲು ಸೇರಿಸಲಾದ ಸುರಕ್ಷತಾ ಕ್ರಮಗಳನ್ನು ಅಳೆದು ತೂಗಿದ ಬಳಿಕವೇ ಈ ನಿರ್ಧಾರಕ್ಕೆ ಬರಲಾಗಿದೆ ಎಂದಿದ್ದಾರೆ.

ಸಂಸತ್ತಿನ ಉಭಯ ಸದನಗಳಲ್ಲಿ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಲು ಕೇಂದ್ರ ಸರ್ಕಾರಕ್ಕೆ ವಿಶೇಷ ಬಹುಮತದ ಅಗತ್ಯವಿದೆ. ಸಂವಿಧಾನದ 368ನೇ ವಿಧಿಯ ಪ್ರಕಾರ, ಪ್ರತಿ ಸದನದ ಒಟ್ಟು ಸದಸ್ಯರ ಬಹುಮತದ ಜೊತೆಗೆ ಹಾಜರಿದ್ದು ಮತ ಚಲಾಯಿಸುವ ಸದಸ್ಯರಲ್ಲಿ ಕನಿಷ್ಠ ಮೂರನೇ ಎರಡರಷ್ಟು (2/3) ಸದಸ್ಯರ ಬೆಂಬಲ ಬೇಕಾಗುತ್ತದೆ. ಲೋಕಸಭೆಯಲ್ಲಿ 22 ಮತ್ತು ರಾಜ್ಯಸಭೆಯಲ್ಲಿ 8 ಸಂಸದರನ್ನು ಹೊಂದಿರುವ ಡಿಎಂಕೆ ಪಕ್ಷದ ಬೆಂಬಲವು, ಎನ್‌ಡಿಎ ಸರ್ಕಾರದ ಸಂಖ್ಯಾಬಲದ ಲೆಕ್ಕಾಚಾರಕ್ಕೆ ದೊಡ್ಡ ಶಕ್ತಿ ನೀಡಲಿದೆ.

ಈಡೇರಿದ ಸ್ಟಾಲಿನ್ ಬೇಡಿಕೆಗಳೇನು?

ಕೇಂದ್ರ ಸರ್ಕಾರದ ಪರಿಷ್ಕೃತ ಸೂತ್ರದ ಪ್ರಕಾರ, ರಾಜ್ಯಗಳ ನಡುವಿನ ಪ್ರಸ್ತುತ ಪ್ರಾತಿನಿಧ್ಯದ ಅನುಪಾತವನ್ನು ಉಳಿಸಿಕೊಂಡು, ಪ್ರತಿ ರಾಜ್ಯಕ್ಕೂ ಲೋಕಸಭಾ ಸ್ಥಾನಗಳಲ್ಲಿ ಏಕರೂಪವಾಗಿ ಶೇ. 50ರಷ್ಟು ಹೆಚ್ಚಳ ಮಾಡಲು ಪ್ರಸ್ತಾಪಿಸಲಾಗಿದೆ. ಇದರಿಂದ ಲೋಕಸಭೆಯ ಗರಿಷ್ಠ ಸದಸ್ಯ ಬಲ 850ಕ್ಕೆ ಏರಿಕೆಯಾಗಲಿದ್ದು, ಪ್ರಸ್ತುತ ಇರುವ ಸ್ಥಾನಗಳ ಹಂಚಿಕೆ ವ್ಯವಸ್ಥೆಯನ್ನು ಮುಂದಿನ 25 ವರ್ಷಗಳವರೆಗೆ ಯಥಾಸ್ಥಿತಿಯಲ್ಲಿ ರಕ್ಷಿಸಲಾಗುತ್ತದೆ.

ಲೋಕಸಭೆಯ ವಿಸ್ತರಣೆಯ ಹೊರತಾಗಿಯೂ ತಮಿಳುನಾಡಿನ ಶೇ. 7.18ರಷ್ಟು ಸ್ಥಾನಗಳ ಪಾಲು ಕಡಿಮೆಯಾಗಬಾರದು ಮತ್ತು 1971ರ ಜನಗಣತಿ ಆಧಾರಿತ ಅಂತರ-ರಾಜ್ಯ ಸಂಸದೀಯ ಸ್ಥಾನಗಳ ಹಂಚಿಕೆಯನ್ನು ಮುಂದಿನ 25 ವರ್ಷಗಳವರೆಗೆ ಸ್ಥಗಿತಗೊಳಿಸಬೇಕು ಎಂದು ಸ್ಟಾಲಿನ್ ಈ ಹಿಂದೆ ಪಟ್ಟು ಹಿಡಿದಿದ್ದರು. ಈ ಎರಡೂ ಬೇಡಿಕೆಗಳನ್ನು ಪರಿಷ್ಕೃತ ಮಸೂದೆಯಲ್ಲಿ ಸೇರ್ಪಡೆಗೊಳಿಸಿರುವುದರಿಂದ, ಡಿಎಂಕೆ ಮಸೂದೆಗೆ ಬೆಂಬಲ ಸೂಚಿಸಲು ಮುಂದಾಗಿದೆ(ಏಜೆನ್ಸೀಸ್​).