ನವದೆಹಲಿ: ತಮಿಳುನಾಡಿನ ತಿರುಪ್ಪರಂಕುಂದ್ರಂ ಬೆಟ್ಟದ ಮೇಲಿರುವ ದೀಪತ್ತೂನ್ ಕಂಬದಲ್ಲಿ ನ್ಯಾಯಾಲಯದ ನಿರ್ದೇಶನದಂತೆ ದೀಪ ಬೆಳಗಿಸದಿರುವುದಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಮಧುರೈ ಜಿಲ್ಲಾಧಿಕಾರಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ.
ನ್ಯಾಯಾಂಗ ನಿಂದನೆ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರನ್ನೊಳಗೊಂಡ ಪೀಠವು, ನ್ಯಾಯಾಲಯದ ಆದೇಶವನ್ನು ಪಾಲಿಸುವುದು ಜಿಲ್ಲಾಧಿಕಾರಿಯ ಜವಾಬ್ದಾರಿಯಾಗಿತ್ತು ಎಂದು ಕಟುವಾಗಿ ನುಡಿದಿದೆ.
ಮಧುರೈ ಜಿಲ್ಲಾಧಿಕಾರಿ ಪರ ವಕೀಲರನ್ನು ಉದ್ದೇಶಿಸಿ ಮಾತನಾಡಿದ ಪೀಠವು, ನೀವು ಆ ಕಾರ್ಯವನ್ನು ನಿರ್ವಹಿಸಬೇಕಿತ್ತು, ನೀವು ಒಬ್ಬ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿದ್ದೀರಿ, ಇದೇನಿದು? ಎಂದು ಪ್ರಶ್ನಿಸಿತು. ಅಲ್ಲದೆ, ಯಾರೇ ಆಗಿರಲಿ, ನ್ಯಾಯಾಲಯದ ಆದೇಶಗಳನ್ನು ದುರ್ಬಲಗೊಳಿಸಲು ಯಾರಿಗೂ ಸಾಧ್ಯವಿಲ್ಲ. ಯಾರಾದರೂ ಸಾಂವಿಧಾನಿಕ ಅರಾಜಕತೆಯನ್ನು ಸೃಷ್ಟಿಸಲು ಪ್ರಯತ್ನಿಸಿದರೆ, ನಾವು ಅದನ್ನು ಸರಿಪಡಿಸುತ್ತೇವೆ ಎಂದು ನ್ಯಾಯಮೂರ್ತಿ ಅರವಿಂದ್ ಕುಮಾರ್ ಖಡಕ್ ಎಚ್ಚರಿಕೆ ನೀಡಿದರು. ಈ ವೇಳೆ ಜಿಲ್ಲಾಧಿಕಾರಿ ಪರ ಹಾಜರಿದ್ದ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ ಅವರು ವಸ್ತುಸ್ಥಿತಿ ವರದಿ ಸಲ್ಲಿಸಲು ಕಾಲಾವಕಾಶ ಕೋರಿದರು.
ವಿಚಾರಣೆಯ ವೇಳೆ ತಿರುಪ್ಪರಂಕುಂದ್ರಂ ದೇವಾಲಯದ ಟ್ರಸ್ಟಿಗಳ ಮಂಡಳಿಯು ತೀವ್ರ ಟೀಕೆಗೆ ಗುರಿಯಾಯಿತು. ಇದನ್ನು ನ್ಯಾಯಾಂಗ ನಿಂದನೆ ಎಂದು ಆರೋಪಿಸಿದ ಅರ್ಜಿದಾರರು ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಪರ ವಕೀಲರು, ನ್ಯಾಯಾಲಯದ ಆದೇಶ ಪಾಲಿಸಲು ವಿಫಲವಾದ ಟ್ರಸ್ಟಿಗಳನ್ನು ತಕ್ಷಣವೇ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
ಎಎಸ್‌ಐ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ನಿಗದಿಪಡಿಸಿದ ಕಂಬದ ಬಳಿ ದೀಪ ಬೆಳಗಿಸುವುದನ್ನು ರಾಜ್ಯ ಸರ್ಕಾರ ಖಚಿತಪಡಿಸಬೇಕು ಎಂದರು. ಈ ಪ್ರಕ್ರಿಯೆಯನ್ನು ಸ್ವತಂತ್ರ ಪ್ರಾಧಿಕಾರದಿಂದ ಮೇಲ್ವಿಚಾರಣೆ ಮಾಡಬೇಕು ಮತ್ತು ಯಾವುದೇ ಅಡ್ಡಿಯಾಗದಂತೆ ಸುಗಮವಾಗಿ ನಡೆಸಲು ಕೇಂದ್ರ ಪಡೆಗಳನ್ನು ನಿಯೋಜಿಸಬೇಕು ಎಂದು ಅವರು ಸಲಹೆ ನೀಡಿದರು. ನ್ಯಾಯಾಂಗ ನಿಂದನೆ ಆರೋಪ ಎದುರಿಸುತ್ತಿರುವವರ ವಾದವನ್ನು ಆಲಿಸುವ ಮೊದಲು, ನಿಗದಿತ ಸ್ಥಳದಲ್ಲಿ ದೀಪ ಬೆಳಗಿಸುವುದನ್ನು ಅವರು ಖಚಿತಪಡಿಸಬೇಕು ಎಂಬುದು ನನ್ನ ಮನವಿಯಾಗಿದೆ ಎಂದು ಮೆಹ್ತಾ ವಾದಿಸಿದರು.
ನವೆಂಬರ್ 24ರಂದು ನಡೆದ ವಾರ್ಷಿಕ ಕಾರ್ತಿಕ ದೀಪೋತ್ಸವದ ಸಂದರ್ಭದಲ್ಲಿ, ಸುಪ್ರೀಂ ಕೋರ್ಟ್ ಅನುಮತಿ ನೀಡಿದ್ದರೂ ಸಹ ಬೆಟ್ಟದ ಮೇಲಿನ ಕಲ್ಲಿನ ಕಂಬದ ಬದಲಾಗಿ ಸಾಂಪ್ರದಾಯಿಕ ಸ್ಥಳವಾದ ಉಚ್ಚಿಪಿಳ್ಳೈಯಾರ್ ಮಂಟಪದಲ್ಲಿ ಮಾತ್ರ ದೀಪ ಬೆಳಗಿಸಲಾಗಿತ್ತು. ಈ ಲೋಪಕ್ಕಾಗಿ ತಮಿಳುನಾಡು ಸರ್ಕಾರ ಬುಧವಾರವಷ್ಟೇ ಸುಪ್ರೀಂ ಕೋರ್ಟ್‌ಗೆ ಕ್ಷಮೆಯಾಚಿಸಿ, ಅರುಳ್ಮಿಗು ಸುಬ್ರಹ್ಮಣ್ಯಸ್ವಾಮಿ ದೇವಾಲಯದ ಅಧಿಕಾರಿಗಳ ಮೇಲೆ ಹೊಣೆ ಹೊರಿಸಿತ್ತು.
ದೇವಾಲಯದ ಮಂಡಳಿಯ ಸದಸ್ಯರನ್ನು ನಾಸ್ತಿಕರು ಎಂದು ಟೀಕಿಸಿದ ತುಷಾರ್ ಮೆಹ್ತಾ ಅವರು, ಜವಾಬ್ದಾರಿ ವಹಿಸಿಕೊಂಡಿದ್ದ ಟ್ರಸ್ಟಿಗಳ ಮಂಡಳಿಯು ಸರ್ಕಾರದಿಂದ ನೇಮಕಗೊಂಡವರಾಗಿದ್ದು, ಅವರು ಭಕ್ತರಲ್ಲ ಎಂಬುದು ಈಗ ಸ್ಪಷ್ಟವಾಗಿದೆ ಎಂದರು. ನವೆಂಬರ್ 24ರಂದು ಸಂಜೆ 6 ಗಂಟೆಗೆ ದೀಪ ಬೆಳಗಿಸಲು ನಿಗದಿಯಾಗಿದ್ದರೂ, ಭಾರೀ ಪೊಲೀಸ್ ಬಂದೋಬಸ್ತ್ ನಡುವೆ ಇಡೀ ಪ್ರದೇಶವನ್ನು ಸುತ್ತುವರಿದು ರಾತ್ರಿ 7.30ಕ್ಕೆ ದೇವಾಲಯದ ಮಂಡಳಿಯು ದೀಪ ಬೆಳಗಿಸದಿರಲು ನಿರ್ಧರಿಸಿತು ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ವಿವರಿಸಿದರು. 11 ದಿನಗಳ ಕಾಲ ನಡೆಯುವ ಈ ಉತ್ಸವದಲ್ಲಿ ನ್ಯಾಯಾಲಯದ ಆದೇಶ ಪಾಲನೆಯಾಗುವಂತೆ ತಕ್ಷಣ ನಿರ್ದೇಶನ ನೀಡಬೇಕೆಂದು ಸಾಲಿಸಿಟರ್ ಜನರಲ್ ಮತ್ತು ಅರ್ಜಿದಾರರು ನ್ಯಾಯಾಲಯವನ್ನು ಕೋರಿದ್ದಾರೆ(ಏಜೆನ್ಸೀಸ್).