RSS ಹೊಗಳಿದ ಐಪಿಎಸ್ ಅಧಿಕಾರಿ ನಾಂಗ್ರೆ ಪಾಟೀಲ್: ಪೊಲೀಸ್ ಅಧಿಕಾರಿಗಳ ತಟಸ್ಥತೆ ಪ್ರಶ್ನಿಸಿ, ರಾಜಕೀಯಕ್ಕೆ ಬನ್ನಿ ಎಂದು ರಾಜ್ ಠಾಕ್ರೆ ಕಿಡಿ

ಐಪಿಎಸ್ ನಾಂಗ್ರೆ ಪಾಟೀಲ್ ಮತ್ತು ರಾಜ್​ ಠಾಕ್ರೆ
ಐಪಿಎಸ್ ನಾಂಗ್ರೆ ಪಾಟೀಲ್ ಮತ್ತು ರಾಜ್​ ಠಾಕ್ರೆ
Published on
ಮುಂಬೈ: ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು(RSS) ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಬಹಿರಂಗವಾಗಿ ಹೊಗಳಿದ ಹಿನ್ನೆಲೆ ಐಪಿಎಸ್​ ಅಧಿಕಾರಿ ಮತ್ತು ನಾಗ್ಪುರ ಪೊಲೀಸ್ ಆಯುಕ್ತ ವಿಶ್ವಾಸ್ ನಾಂಗ್ರೆ ಪಾಟೀಲ್ ವಿರುದ್ಧ ಮಹಾರಾಷ್ಟ್ರ ನವನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ ಶನಿವಾರ(ಜೂ. 27) ವಾಗ್ದಾಳಿ ನಡೆಸಿದ್ದು, ಪೊಲೀಸ್ ಅಧಿಕಾರಿಗಳ ತಟಸ್ಥ ನೀತಿಯನ್ನು ಪ್ರಶ್ನಿಸಿದ್ದಾರೆ.
ಈ ಕುರಿತು ಎಕ್ಸ್​​ನಲ್ಲಿ ಪೋಸ್ಟ್ ಮಾಡಿರುವ ಅವರು, ನಾಗ್ಪುರ ಪೊಲೀಸ್ ಆಯುಕ್ತ ವಿಶ್ವಾಸ್ ನಾಂಗ್ರೆ ಪಾಟೀಲ್ ಅವರು ಆರ್​ಎಸ್ಎಸ್​ ಅನ್ನು ಸಾರ್ವಜನಿಕವಾಗಿ ಹೊಗಳುವ ಮೂಲಕ ನಾಗರಿಕ ಸೇವೆಯ ತಟಸ್ಥತೆಯನ್ನು ರಾಜಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಮುಂದುವರೆದು ಬಲಪಂಥೀಯ ಸಂಘಟನೆಯ ಬಗ್ಗೆ ಆಳವಾದ ಪ್ರೀತಿ ಇದ್ದರೆ, ಅಖಿಲ ಭಾರತ ಸೇವೆಗೆ ರಾಜೀನಾಮೆ ನೀಡಿ ಔಪಚಾರಿಕವಾಗಿ ರಾಜಕೀಯಕ್ಕೆ ಪ್ರವೇಶಿಸಬೇಕು ಎಂದು ಕಿಡಿಕಾರಿದ್ದಾರೆ.
ನಾಂಗ್ರೆ ಪಾಟೀಲ್ ಭಾಗವಹಿಸಿದ ಸಭೆಗಖು ರಾಜ್ಯಾದ್ಯಂತ ನಡೆಯುತ್ತವೆ ಮತ್ತು ಅದರ ಸಂಘಟಕರು ಸಂಪೂರ್ಣವಾಗಿ ಅವು ಸಾಂಸ್ಕೃತಿಕ ಮತ್ತು ರಾಜಕೀಯೇತರ ಎಂದು ಹೇಳುತ್ತಾರೆ. ಆದರೆ ಸಂಘಟಕರು ಮತ್ತು ಅವರ ಉದ್ದೇಶಗಳನ್ನು ಸೂಕ್ಷ್ಮವಾಗಿ ಗಮನಿಸಿದ್ರೆ ಆಳವಾಗಿ ಬೇರೂರಿರುವ ರಾಜಕೀಯ ಬೆಂಬಲವನ್ನು ಬಹಿರಂಗಪಡಿಸುತ್ತದೆ ಎಂದು ಪ್ರತಿಪಾದಿಸಿದ್ದಾರೆ.
ಒಬ್ಬ ಪೊಲೀಸ್ ಅಧಿಕಾರಿಯ ನಿಷ್ಠೆ ಪೊಲೀಸ್ ಪಡೆಯ ಕರ್ತವ್ಯಗಳ ಮೇಲೆ ಮಾತ್ರ ಇರಬೇಕು. ನಂಗ್ರೆ ಪಾಟೀಲ್ ಅವರ ಸಮವಸ್ತ್ರದ ಖಾಕಿ ಬಣ್ಣವು ಪೊಲೀಸ್ ಇಲಾಖೆಯನ್ನು ಪ್ರತಿನಿಧಿಸುತ್ತದೆ ಎಂದು ನಾವೆಲ್ಲರೂ ಪ್ರೀತಿಯಿಂದ ನಂಬಿದ್ದೆವು. ಅವರ ಖಾಕಿ ಸಂಘದ ಹಳೆಯ ಸಮವಸ್ತ್ರವನ್ನು ಪ್ರತಿಬಿಂಬಿಸುತ್ತದೆ ಎಂದು ಈಗ ನಮಗೆ ಅರಿವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಘದ ಬಗ್ಗೆ ನಿಮಗೆ ಪ್ರೀತಿ ಇದ್ದರೆ, ಅದನ್ನು ನಿಮ್ಮ ಹೃದಯದಲ್ಲಿ ಇಟ್ಟುಕೊಳ್ಳಿ. ನೀವು ಅದರ ಬಗ್ಗೆ ಸಾರ್ವಜನಿಕವಾಗಿ ಮಾತನಾಡಲು ಬಯಸಿದರೆ, ಸೇವೆಗೆ ರಾಜೀನಾಮೆ ನೀಡಿ ಆರ್‌ಎಸ್‌ಎಸ್ ಅಥವಾ ಬಿಜೆಪಿಗೆ ಸೇರಿ. ಎಲ್ಲಾ ನಂತರ, ಅತೃಪ್ತ ಅಥವಾ ಅನುಕೂಲಕರ ಅಧಿಕಾರಿಗಳಿಗೆ ಪುನರ್ವಸತಿ ಖಾತರಿ ಯೋಜನೆಯು ವರ್ಷಗಳಿಂದ ನಡೆಯುತ್ತಿದೆ. ನಿಮ್ಮ ಪುನರ್ವಸತಿಯೂ ಸಹ ಆಗುತ್ತದೆ ಎಂದಿದ್ದಾರೆ.

ವಿಶ್ವಾಸ್ ನಾಂಗ್ರೆ ಪಾಟೀಲ್ ಹೇಳಿದ್ದೇನು?

1997ರ ಬ್ಯಾಚ್ ಅಧಿಕಾರಿಯಾಗಿರುವ ಐಪಿಎಸ್ ಅಧಿಕಾರಿ ವಿಶ್ವಾಸ್ ನಾಂಗ್ರೆ ಪಾಟೀಲ್, ಶುಕ್ರವಾರ ಸ್ಥಳೀಯ ಪ್ರಾದೇಶಿಕ ಹಿಂದೂ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ.
ನಾಂಗ್ರೆ ಪಾಟೀಲ್ ತಮ್ಮ ಭಾಷಣದಲ್ಲಿ, ಆರ್‌ಎಸ್‌ಎಸ್ ಮತ್ತು ಅದರ ಸಂಸ್ಥಾಪಕ ಡಾ. ಕೇಶವ್ ಬಲಿರಾಮ್ ಹೆಡ್ಗೇವಾರ್ ಅವರನ್ನು ಬಹಿರಂಗವಾಗಿ ಶ್ಲಾಘಿಸಿದರು, ಅವರನ್ನು ದೂರದೃಷ್ಟಿಯ ರಾಷ್ಟ್ರೀಯವಾದಿ ಎಂದು ಹೊಗಳಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net