ಇಂಡಿಗೋ ವಿಮಾನಗಳ ಅವ್ಯವಸ್ಥೆ; ಟಿಕೆಟ್ ದರ ಏರಿಕೆ ಕುರಿತು ಕೇಂದ್ರ ಸರ್ಕಾರಕ್ಕೆ ದೆಹಲಿ ಹೈಕೋರ್ಟ್​ ತರಾಟೆ | Delhi High Court

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ನವದೆಹಲಿ: ಇಂಡಿಗೋ ವಿಮಾನಯಾನ ಸಂಸ್ಥೆಯ ವಿಮಾನಗಳ ಪ್ರಯಾಣದ ಅವ್ಯವಸ್ಥೆ, ಪ್ರಯಾಣಿಕ ಸಂಕಷ್ಟದ ಬಗ್ಗೆ ಬುಧವಾರ(ಡಿ. 10) ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ದೆಹಲಿ ಹೈಕೋರ್ಟ್(Delhi High Court) ತೀವ್ರ ತರಾಟೆಗೆ ತೆಗೆದುಕೊಂಡಿದೆ. ಅಂತಹ ಪರಿಸ್ಥಿತಿ ಏಕೆ ಉದ್ಭವವಾಯಿತು? ಪ್ರಯಾಣಿಕರಿಗೆ ಸಹಾಯ ಮಾಡಲು ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಪ್ರಶ್ನಿಸಿದೆ. 
ಇಂಡಿಗೋ ಅವ್ಯವಸ್ಥೆ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾ.ಗೆಡೆಲಾ, ಒಂದು ವಿಮಾನಯಾನ ಸಂಸ್ಥೆ ಬಿಕ್ಕಟ್ಟು ಇದ್ದಾಗ ಇತರೆ ಸಂಸ್ಥೆಗಳು ಅದರ ಲಾಭ ಪಡೆದು ತಮ್ಮ ಟಿಕೆಟ್ ದರವನ್ನು ಏರಿಸಲು ಹೇಗೆ ಸರ್ಕಾರ ಅನುಮತಿಸಿದೆ?, ಟಿಕೆಟ್ ದರ 35 ರಿಂದ 40 ಸಾವಿರ ರೂ.ಗೆ ಏರುವುದನ್ನು ತಡೆಯಲು ಸರ್ಕಾರ ಯಾಕೆ ವಿಫಲವಾಗಿದೆ, ಪ್ರಯಾಣಿಕರಿಗೆ ಸಹಾಯ ಮಾಡಲು ಏನು ಕ್ರಮ ತೆಗೆದುಕೊಂಡಿದೆ ಎಂದು ಕೇಂದ್ರವನ್ನು ತರಾಟೆಗೆ ತೆಗೆದುಕೊಂಡರು.
ಇದೇ ವೇಳೆ ಕೇಂದ್ರ ಸರ್ಕಾರ ತೆಗೆದುಕೊಂಡ ಕ್ರಮಗಳ ಪಟ್ಟಿಯನ್ನು ಹೆಚ್ಚುವರಿ ಸಾಲಿಸಿಟರ್ ಜನರಲ್ ಓದಿದರು. ಆದರೆ ನ್ಯಾಯಾಧೀಶರು, ಬಿಕ್ಕಟ್ಟು ಭುಗಿಲೆದ್ದ ನಂತರ ನೀವು ಅವೆಲ್ಲವನ್ನೂ ತೆಗೆದುಕೊಂಡಿದ್ದೀರಿ. ಪ್ರಶ್ನೆ ಇದಲ್ಲ. ಪರಿಸ್ಥಿತಿ ಏಕೆ ಉದ್ಭವಿಸಿದೆ? ಮತ್ತು ನೀವು ಏನು ಮಾಡುತ್ತಿದ್ದೀರಿ? ಎಂದು ಕೇಳಿದರು,
ಇಂಡಿಗೋ ಸಂಸ್ಥೆಗೆ ಈಗಾಗಲೇ ಕೇಂದ್ರ ವಿಮಾನಯಾನ ಸಚಿವಾಲಯದಿಂದ ಶೋ-ಕಾಸ್ ನೋಟಿಸ್ ನೀಡಲಾಗಿದೆ. ಜೊತೆಗೆ ಸಂಸ್ಥೆ ಬಹಿರಂಗವಾಗಿ ಕ್ಷಮೆಯಾಚನೆ ಮಾಡಿದೆ ಎಂದು ಸಾಲಿಸಿಟರ್ ಜನರಲ್ ನ್ಯಾಯಾಲಯಕ್ಕೆ ತಿಳಿಸಿದರು.
2024 ರಿಂದ FDTL ಯೋಜನೆಯ ಅನುಷ್ಠಾನವು ವಿಳಂಬವಾಗಿದೆ ಎಂಬುದನ್ನು ಗಮನಿಸಿದ ನ್ಯಾಯಾಧೀಶರು,  ವಿಮಾನ ನಿಲ್ದಾಣಗಳಲ್ಲಿ ಸಿಲುಕಿರುವ ಪ್ರಯಾಣಿಕರನ್ನು ನಿರ್ವಹಿಸಲು ಮತ್ತು ಕಿರುಕುಳವನ್ನು ತಡೆಗಟ್ಟಲು ಮಾಡಲಾದ ವ್ಯವಸ್ಥೆಗಳನ್ನು ವಿವರಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ (ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net