ಸಿಂಗಾಪುರ ಎಂಬ ಹೆಸರು ಸಂಸ್ಕೃತದಿಂದ ಬಂದಿದೆ; ಮಾಜಿ ಉಪ ಪ್ರಧಾನಿ ಟಿಯೋ ಚೀ ಹೀನ್ | Singapore

ಸಿಂಗಾಪುರ ಮಾಜಿ ಉಪ ಪ್ರಧಾನಿ ಟಿಯೋ ಚೀ ಹೀನ್
ಸಿಂಗಾಪುರ ಮಾಜಿ ಉಪ ಪ್ರಧಾನಿ ಟಿಯೋ ಚೀ ಹೀನ್
Published on
ನವದೆಹಲಿ: ಸಿಂಗಾಪುರ(Singapore) ಎಂಬ ತಮ್ಮ ದೇಶದ ಹೆಸರು ಸಂಸ್ಕೃತದಿಂದ ಬಂದಿದೆ. ಭಾರತ ಮತ್ತು ಸಿಂಗಾಪುರದ ಸಂಬಂಧ ಇತಿಹಾಸದಲ್ಲಿ ಆಳವಾಗಿ ಬೇರೂರಿದೆ ಎಂದು ಮಾಜಿ ಉಪ ಪ್ರಧಾನಿ ಟಿಯೋ ಚೀ ಹೀನ್ ಹೇಳಿದ್ದಾರೆ.
ಸಿಂಗಾಪುರ ಮೂಲದ ಹೂಡಿಕೆ ಸಂಸ್ಥೆ ಟೆಮಾಸೆಕ್‌ನ ಅಧ್ಯಕ್ಷರಾಗಿರುವ ಮತ್ತು ಪ್ರಧಾನಿ ಲಾರೆನ್ಸ್ ವಾಂಗ್ ಅವರ ಹಿರಿಯ ಸಲಹೆಗಾರರಾಗಿರುವ ಹೀನ್, ಮಂಗಳವಾರ(ಡಿ. 09) ದೆಹಲಿಯಲ್ಲಿ ನಡೆದ 5ನೇ ಅಟಲ್ ಬಿಹಾರಿ ವಾಜಪೇಯಿ ಸ್ಮಾರಕ ಉಪನ್ಯಾಸದಲ್ಲಿ ಮಾತನಾಡಿದ್ದಾರೆ.
ಸಿಂಗಾಪುರ ಎಂಬ ಹೆಸರು ಸಂಸ್ಕೃತದಿಂದ ಬಂದಿರುವುದರಿಂದ ಎರಡೂ ರಾಷ್ಟ್ರಗಳ ನಡುವಿನ ಬಾಂಧವ್ಯವು ಇತಿಹಾಸದಲ್ಲಿ ಆಳವಾಗಿ ಬೇರೂರಿದೆ. ಇದು ಆಗ್ನೇಯ ಏಷ್ಯಾದಲ್ಲಿ ಭಾರತದ ಆರಂಭಿಕ ಪ್ರಭಾವವನ್ನು ಪ್ರತಿಬಿಂಬಿಸುತ್ತದೆ. ಆಧುನಿಕ ಸಿಂಗಾಪುರವನ್ನು 1819 ರಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಸ್ಥಾಪಿಸಿತು. 1867ರವರೆಗೆ ಅದನ್ನು ಕೋಲ್ಕತ್ತಾದಿಂದ ಆಡಳಿತ ಮಾಡಲಾಯಿತು ಎಂದು ತಿಳಿಸಿದ್ದಾರೆ.
ಸೆಪ್ಟೆಂಬರ್‌ನಲ್ಲಿ ಪ್ರಧಾನಿ ಮೋದಿ ಅವರು ಸಿಂಗಾಪುರಕ್ಕೆ ನೀಡಿದ ಕೊನೆಯ ಭೇಟಿಯ ಸಮಯದಲ್ಲಿ ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಚರ್ಚಿಸಲಾಗಿದೆ. ಇದು ಸಹಕಾರವನ್ನು ಹೆಚ್ಚಿಸುವ ಬದ್ಧತೆಯನ್ನು ಹೊಂದಿದೆ. ಸಿಂಗಾಪುರದಲ್ಲಿ ಅತಿದೊಡ್ಡ ವಲಸಿಗ ಸಮುದಾಯ ಅಂದ್ರೆ ಅದು ಭಾರತೀಯ ಸಮುದಾಯ. ನಮ್ಮ ಆರ್ಥಿಕತೆ, ಸಂಸ್ಕೃತಿ, ವೈವಿದ್ಯಮಯ ಸಾಮಾಜಿಕ ರಚನೆಯನ್ನು ರೂಪಿಸುತ್ತಿದ್ದಾರೆ ಎಂದು ಪ್ರತಿಪಾದಿಸಿದ್ದಾರೆ.
ಸುಸ್ಥಿರ ಅಭಿವೃದ್ಧಿಗಾಗಿ 'ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ' ಎಂಬ ಭಾರತದ ದೃಷ್ಟಿಕೋನವು ಛಿದ್ರಗೊಂಡ ಜಗತ್ತಿನಲ್ಲಿ ಪ್ರಬಲವಾದ ಒಟ್ಟುಗೂಡಿಸುವಿಕೆಯ ಕರೆಯಾಗಿದೆ. ಸಿಂಗಾಪುರ ಸ್ವಾತಂತ್ರ್ಯ ಪಡೆದ ಕೇವಲ ಹದಿನೈದು ದಿನಗಳ ನಂತರ, ಆಗಸ್ಟ್ 1965 ರಲ್ಲಿ ಎರಡೂ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಸಂಬಂಧಗಳು ಸ್ಥಾಪನೆಯಾದವು ಎಂದು ಹೇಳಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net