

ನವದೆಹಲಿ: ವಿಶ್ವದಾದ್ಯಂತ ವೈದ್ಯಕೀಯ ಲೋಕವನ್ನೇ ಬೆರಗುಗೊಳಿಸುವಂಥ ಒಂದು ಅಪರೂಪದ ಹಾಗೂ ನಂಬಲಸಾಧ್ಯವಾದ ಘಟನೆ ಭಾರತದಲ್ಲಿ ಬೆಳಕಿಗೆ ಬಂದಿದೆ. ಇದುವರೆಗೂ ಎಲ್ಲಿಯೂ ವರದಿಯಾಗದ ಅತ್ಯಂತ ವಿಚಿತ್ರ ಪ್ರಕರಣವೊಂದರಲ್ಲಿ, 16 ವರ್ಷದ ಬಾಲಕನೊಬ್ಬನ ಕಣ್ಣಿನ ಕುಳಿಯ ಮೇಲ್ಭಾಗದಲ್ಲಿ ಹಲ್ಲು ಬೆಳೆದಿರುವುದು ವೈದ್ಯರನ್ನೇ ದಂಗುಬಡಿಸಿದೆ. ಅಷ್ಟಕ್ಕೂ ಹಲ್ಲು ಕಣ್ಣಿನ ಮೇಲ್ಭಾಗದಲ್ಲಿ ಬೆಳೆಯಲು ಕಾರಣವೇನು? ಏನೆಲ್ಲ ಸಮಸ್ಯೆಗಳಾಗುತ್ತೆ? ಈ ಬಗ್ಗೆ ವೈದ್ಯರು ಹೇಳಿದ್ದೇನು ಅನ್ನೋದನ್ನು ನಾವೀಗ ತಿಳಿದುಕೊಳ್ಳೋಣ.
ಈ ಭಾರತೀಯ ಬಾಲಕನು ತನ್ನ ಎಡಗಣ್ಣಿನ ಮೇಲ್ಭಾಗದಲ್ಲಿ, ಅಂದರೆ ಎಡಗಣ್ಣಿನ ರೆಪ್ಪೆ ಮತ್ತು ಹುಬ್ಬಿನ ನಡುವೆ ಸ್ವಲ್ಪ ದಿನಗಳಿಂದ ಸ್ವಲ್ಪವೂ ನೋವಿಲ್ಲದ ಒಂದು ವಿಚಿತ್ರ ಊತವನ್ನು ಅನುಭವಿಸುತ್ತಿದ್ದನು. ಆರಂಭದಲ್ಲಿ ಇದು ಕೇವಲ ಒಂದು ಸಣ್ಣ ಗಡ್ಡೆಯಂತೆ ತೋರಿದ್ದರೂ, ದಿನ ಕಳೆದಂತೆ ಅಲ್ಲಿ ಎರಡು ಗಡಸಾದ ಬಿಳಿ ಬಿಂದುಗಳು ಚರ್ಮವನ್ನು ಸೀಳಿಕೊಂಡು ಹೊರಬರಲು ಯತ್ನಿಸಿದವು. ಇದರಿಂದ ಕಂಗಾಲಾದ ಬಾಲಕನ ಪೋಷಕರು ವೈದ್ಯರನ್ನು ಸಂಪರ್ಕಿಸಿದ್ದು, ವೈದ್ಯರು ತಕ್ಷಣವೇ ಹಲವು ಪರೀಕ್ಷೆಗಳೊಂದಿಗೆ ಕಂಪ್ಯೂಟೆಡ್ ಟೊಮೊಗ್ರಫಿ (CT) ಸ್ಕಾನ್ ನಡೆಸಿದಾಗ ಕಣ್ಣಿನ ಕುಳಿಯ ಮೇಲ್ಭಾಗದಲ್ಲಿ (Superior Orbit) ಒಂದು ಸಂಪೂರ್ಣ ಹಲ್ಲು ರೂಪುಗೊಂಡಿರುವುದು ಸ್ಪಷ್ಟವಾಯಿತು.
ವೈದ್ಯಕೀಯ ಪರಿಭಾಷೆಯಲ್ಲಿ ಬಾಯಿಯ ಬದಲು ದೇಹದ ಬೇರೆ ಯಾವುದೇ ಭಾಗದಲ್ಲಿ ಹಲ್ಲು ಬೆಳೆಯುವುದನ್ನು 'ಎಕ್ಟೋಪಿಕ್ ಟೂತ್' (Ectopic Tooth) ಎಂದು ಕರೆಯಲಾಗುತ್ತದೆ. ಈ ಕುರಿತು ಅಧ್ಯಯನ ನಡೆಸಿರುವ ಸಹ-ಲೇಖಕಿ ಡಾ. ಮೇಘನಾ ತನ್ವಾರ್ ಅವರ ಪ್ರಕಾರ, ಕಣ್ಣಿನ ಕುಳಿಯ ಮೇಲ್ಭಾಗದಲ್ಲಿ ಈ ರೀತಿ ಹಲ್ಲು ಬೆಳೆದಿರುವುದು ಇತಿಹಾಸದಲ್ಲೇ ಇದು ಮೊದಲ ಮತ್ತು ಏಕೈಕ ಪ್ರಕರಣವಾಗಿದೆ. ಅಪರೂಪದ ಸಂದರ್ಭಗಳಲ್ಲಿ ಮೂಗಿನ ಒಳಭಾಗದಲ್ಲಿ ಅಥವಾ ಬಾಯಿಯ ಮೇಲ್ಚಾವಣಿಯಲ್ಲಿ ಹಲ್ಲುಗಳು ಕಾಣಿಸಿಕೊಳ್ಳುವುದುಂಟು, ಆದರೆ ಕಣ್ಣಿನ ಕುಳಿಯ ಒಳಗೆ ಹಲ್ಲು ಬೆಳೆದಿರುವುದು ಮಾತ್ರ ವೈದ್ಯಕೀಯ ಇತಿಹಾಸದಲ್ಲೇ ಇದುವರೆಗೆ ನಡೆದೇ ಇರಲಿಲ್ಲ.
ಈ ವಿಚಿತ್ರ ಘಟನೆಗೆ ನಿಖರವಾದ ಕಾರಣವೇನು ಎಂಬುದನ್ನು ಕಂಡುಹಿಡಿಯಲು ವೈದ್ಯರು ಮತ್ತು ಸಂಶೋಧಕರು ತೀವ್ರ ಪ್ರಯತ್ನ ನಡೆಸಿದ್ದಾರೆ. ಬಾಲಕನ ಹಿಂದಿನ ಆರೋಗ್ಯ ದಾಖಲೆಗಳನ್ನು ಪರಿಶೀಲಿಸಿದಾಗ ಯಾವುದೇ ರೀತಿಯ ಮುಖದ ಗಾಯಗಳು ಅಥವಾ ಆನುವಂಶಿಕ ಆರೋಗ್ಯ ಸಮಸ್ಯೆಗಳ ಇತಿಹಾಸವಿರಲಿಲ್ಲ. ಅಷ್ಟೇ ಅಲ್ಲದೆ, ತಲೆಯ ಕಪಾಲದ ಬೇರೆ ಯಾವುದೇ ಭಾಗದಲ್ಲೂ ಹೆಚ್ಚುವರಿ ಹಲ್ಲುಗಳಿಲ್ಲದಿರುವುದು ಸ್ಕಾನ್ ವರದಿಯಲ್ಲಿ ದೃಢಪಟ್ಟಿದ್ದು, ಇದು ಆಕಸ್ಮಿಕವಾಗಿ ಸಂಭವಿಸಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಬಾಲಕನ ಆರೋಗ್ಯಕ್ಕೆ ಯಾವುದೇ ಹೆಚ್ಚಿನ ತೊಂದರೆಯಾಗದಂತೆ ಎಚ್ಚರಿಕೆ ವಹಿಸಿದ ವೈದ್ಯರು, ಅತ್ಯಂತ ನಿಖರವಾದ ಶಸ್ತ್ರಚಿಕಿತ್ಸೆಯ ಮೂಲಕ ಆ ಅಪರೂಪದ ಹಲ್ಲನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ಈ ಶಸ್ತ್ರಚಿಕಿತ್ಸೆಯಿಂದ ಬಾಲಕನ ಕಣ್ಣಿನ ಮೇಲಿನ ಊತ ಸಂಪೂರ್ಣವಾಗಿ ಕಡಿಮೆಯಾಗಿದ್ದು, ಭವಿಷ್ಯದಲ್ಲಿ ಎದುರಾಗಬಹುದಿದ್ದ ದೊಡ್ಡ ಅಪಾಯದಿಂದ ಆತನನ್ನು ಪಾರು ಮಾಡಲಾಗಿದೆ. "ಇದು ನಮಗೆ ಮಾತ್ರವಲ್ಲ, ಇಡೀ ಜಗತ್ತಿಗೇ ಒಂದು ಅಚ್ಚರಿಯ ಸಂಗತಿಯಾಗಿದೆ" ಎಂದು ವೈದ್ಯರು ಈ ಅಪರೂಪದ ವಿಸ್ಮಯದ ಬಗ್ಗೆ ತಮ್ಮ ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ, (ಏಜೆನ್ಸೀಸ್).