

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ದೇಶವು ಎಷ್ಟರ ಮಟ್ಟಿಗೆ ಬದಲಾಗಿದೆ ಎಷ್ಟು ಮುನ್ನಡೆ ಸಾಧಿಸಿದೆ ಎಂಬುದಕ್ಕೆ ಏಷ್ಯಾ ಪವರ್ ಇಂಡೆಕ್ಸ್ ವರದಿಯೇ ಪ್ರತಿಬಿಂಬಿಸುತ್ತದೆ ಎಂದು ಸೋಮವಾರ(ನ. 23) ಕೇಂದ್ರ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.
ಈ ಕುರಿತು ದೆಹಲಿಯಲ್ಲಿ ಮಾತಮಾನಾಡಿರುವ ಅವರು, ಲೋವಿ ಮಾತ್ರವಲ್ಲ, ಹಲವಾರು ಜಾಗತಿಕ ರೇಟಿಂಗ್ ಏಜೆನ್ಸಿಗಳು ಭಾರತವನ್ನು ಆರ್ಥಿಕತೆ, ಮಿಲಿಟರಿ ಮತ್ತು ಹಣಕಾಸು ಕ್ಷೇತ್ರಗಳಲ್ಲಿ ಸಾಕಷ್ಟು ಉನ್ನತ ಸ್ಥಾನದಲ್ಲಿರಿಸಿವೆ. ಸುಮಾರು 12 ವರ್ಷಗಳ ಹಿಂದೆ ಭಾರತ ಜಾಗತಿಕ ಶ್ರೇಯಾಂಕದಲ್ಲಿ ತೀರಾ ಕೆಳಮಟ್ಟದಲ್ಲಿತ್ತು ಆದರೆ ನಂತರ ಗಣನೀಯ ಪ್ರಗತಿ ಸಾಧಿಸಿದೆ ಎಂದು ತಿಳಿಸಿದ್ದಾರೆ.
ಇಂದು ನಾವು ಅಗ್ರ ಮೂರು ಅಥವಾ ನಾಲ್ಕು ಸ್ಥಾನಗಳಲ್ಲಿ, ಅಂದ್ರೆ ಅತ್ಯುನ್ನತ ಸ್ಥಾನದಲ್ಲಿದ್ದೇವೆ. ಖಂಡಿತವಾಗಿಯೂ ನಾವು ಅಗ್ರ 10 ಮತ್ತು ಅಗ್ರ 5 ರಾಷ್ಟ್ರಗಳ ಪಟ್ಟಿಯಲ್ಲಿದ್ದೇವೆ. ಭಾರತ ಈಗ ಬದಲಾಗಿದೆ, ನಮ್ಮ ನಾಯಕತ್ವವು ಬಲಿಷ್ಠವಾಗಿದೆ ಎಂದಿದ್ದಾರೆ.
ವಿರೋಧ ಪಕ್ಷದ ಟೀಕೆಗಳಿಗೆ ಪ್ರತಿಕ್ರಿಯಿಸಿದ ರಿಜಿಜು, ರಾಜಕೀಯ ಪಕ್ಷಗಳು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅರ್ಹವಾಗಿವೆ ಆದರೆ ದೇಶದ ಪ್ರಗತಿಯನ್ನು ಗುರುತಿಸಬೇಕು. ಆದರೆ ವಿರೋಧ ಪಕ್ಷಗಳು ನಮ್ಮನ್ನು ಹೊಗಳದಿದ್ದರೆ, ಅವರು ಸರಿ ಎಂದು ಅರ್ಥವಲ್ಲ. ಅವರಿಗೆ ಮಾತನಾಡುವ ಹಕ್ಕಿದೆ, ಆದರೆ ದೇಶ ಬದಲಾಗಿದೆ. ಭಾರತ ಬಹಳ ಮುಂದೆ ಸಾಗಿದೆ ಎಂದು ಪ್ರತಿಪಾದಿಸಿದ್ದಾರೆ.
ಆರ್ಥಿಕತೆ ಏರಿಳಿತಗಳ ನಡುವೆಯೂ ಅಮೆರಿಕ ಮತ್ತು ಚೀನಾ ಬಳಿಕ ಭಾರತವು 40.5 ಅಂಕಗಳೊಂದಿಗೆ ಏಷ್ಯಾದ ಮೂರನೇ ಅತ್ಯಂತ ಶಕ್ತಿಶಾಲಿ ರಾಷ್ಟ್ರವಾಗಿ ತನ್ನ ನೆಲೆಯನ್ನು ಭದ್ರ ಪಡಿಸಿಕೊಂಡಿದೆ ಎಂದು ಆಸ್ಟ್ರೇಲಿಯಾ ಮೂಲದ ಲೋವಿ ಇನ್‌ಸ್ಟಿಟ್ಯೂಟ್‌ನ 'ಏಷ್ಯಾ ಪವರ್ ಇಂಡೆಕ್ಸ್' ವರದಿ ಮಾಡಿದೆ.
ವರದಿ ಪ್ರಕಾರ, ರಾಜತಾಂತ್ರಿಕ ಸ್ಥಾನಮಾನ, ರಕ್ಷಣಾ ವಲಯದ ಸಹಭಾಗಿತ್ವ, ಸಾಂಸ್ಕೃತಿಕ ಪ್ರಭಾವ ಮತ್ತು ಭವಿಷ್ಯದ ಸಂಪನ್ಮೂಲಗಳ ವಿಷಯದಲ್ಲಿನ ಸುಧಾರಣೆಗಳಿಂದಾಗಿ, ಈ ವರ್ಷ ಏಷ್ಯಾದಲ್ಲಿ ಭಾರತದ ಪ್ರಭಾವವು ಇನ್ನಷ್ಟು ಹೆಚ್ಚಾಗಿದೆ. ಅಮೆರಿಕ ಮತ್ತು ಚೀನಾ ಕ್ರಮವಾಗಿ ಮೊದಲ ಮತ್ತು ಎರಡನೇ ಸ್ಥಾನಗಳನ್ನು ಕಾಯ್ದುಕೊಂಡಿವೆ ಎಂದು ತಿಳಿಸಿದೆ (ಏಜೆನ್ಸೀಸ್).