

ಲಖನೌ: ಕೃತಕ ಬುದ್ಧಿಮತ್ತೆ (AI) ಉದ್ಯೋಗಗಳನ್ನು ಕಸಿದುಕೊಳ್ಳಲಿದೆ ಎಂಬ ಆತಂಕ ಹೆಚ್ಚುತ್ತಿರುವ ನಡುವೆಯೇ, ಕೌಶಲ್ಯ ಹೊಂದಿರುವವರಿಗೆ ಜೀವನೋಪಾಯದ ಅವಕಾಶಗಳು ಸದಾ ಇರಲಿವೆ ಎಂದು ಶನಿವಾರ(ನ. 21) ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.
ಲಖನೌದ ಇಂದಿರಾ ಗಾಂಧಿ ಪ್ರತಿಷ್ಠಾನದಲ್ಲಿ ನಡೆದ 5ನೇ ರಾಷ್ಟ್ರೀಯ ಕೌಶಲ್ಯ ಘಟಿಕೋತ್ಸವ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿರುವ ಅವರು, ಕೇವಲ ಶೈಕ್ಷಣಿಕ ಪ್ರಮಾಣಪತ್ರಗಳನ್ನು ಹೊಂದಿರುವವರಿಗಿಂತ ಕೌಶಲ್ಯವಂತರಿಗೆ ಸಮಾಜದಲ್ಲಿ ಹೆಚ್ಚಿನ ಗೌರವ ಸಿಗಲಿದೆ ಎಂದು ಹೇಳಿದ್ದಾರೆ.
ಎಐ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಆದರೆ ಒಂದು ವಿಷಯ ನೆನಪಿಡಿ, ಕೌಶಲ್ಯ ಹೊಂದಿರುವ ವ್ಯಕ್ತಿಯ ಜೀವನೋಪಾಯವನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಕಾಲ ಬದಲಾಗುತ್ತಿದೆ. ಕೇವಲ ಸರ್ಟಿಫಿಕೇಟ್ ಹೊಂದಿರುವವರಿಗಿಂತ ಕೌಶಲ್ಯವಂತರಿಗೆ ಹೆಚ್ಚಿನ ಗೌರವ ದೊರೆಯಲಿದೆ. ಭಾರತವು ವಿಶ್ವದ ಕೌಶಲ್ಯ ರಾಜಧಾನಿಯಾಗುವತ್ತ ಸಾಗುತ್ತಿದೆ. ಸಾಂಪ್ರದಾಯಿಕ ಶೈಕ್ಷಣಿಕ ಕೋರ್ಸ್‌ಗಳಿಗೆ ನೀಡುವಷ್ಟೇ ಮಹತ್ವವನ್ನು ವೃತ್ತಿಪರ ಶಿಕ್ಷಣಕ್ಕೂ ನೀಡುವ ಅಗತ್ಯವಿದೆ ಎಂದಿದ್ದಾರೆ.
ಭಾರತೀಯ ತಂತ್ರಜ್ಞಾನ ಸಂಸ್ಥೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಸಿಗುವಷ್ಟೇ ಮನ್ನಣೆ ಕೈಗಾರಿಕಾ ತರಬೇತಿ ಸಂಸ್ಥೆಗಳ ವಿದ್ಯಾರ್ಥಿಗಳಿಗೂ ಸಿಗಬೇಕು. ಅದು ಐಐಟಿ ಇರಲಿ ಅಥವಾ ಐಟಿಐ ಇರಲಿ, ನನ್ನ ಪಾಲಿಗೆ ಎಲ್ಲಾ ವಿದ್ಯಾರ್ಥಿಗಳು ದೇಶದ ಸಂಪತ್ತು, ಶಕ್ತಿ ಮತ್ತು ಭವಿಷ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.
ವಿದೇಶಿ ಆಕ್ರಮಣಕಾರರು ಭಾರತಕ್ಕೆ ಬಂದಾಗ ನಮ್ಮ ರಾಷ್ಟ್ರವು ಜಗತ್ತಿಗೆ ಆಕರ್ಷಣೆಯ ಹಾಗೂ ಅಸೂಯೆಯ ಕೇಂದ್ರಬಿಂದುವಾಗಿತ್ತು. ಅವರು ಭಾರತಕ್ಕೆ ಬಂದಾಗ ಏನು ಮಾಡಿದರು? ಅವರು ನಮ್ಮ ಕರಕುಶಲತೆ ಮತ್ತು ಕೌಶಲಗಳ ಮೇಲೆ ಮೊದಲ ದಾಳಿ ನಡೆಸಿದರು. ಬಳಿಕ ಬ್ರಿಟಿಷರು ಬಂದರು. ಅವರು ಹೆಚ್ಚು ಚಾಣಾಕ್ಷರಾಗಿದ್ದರಿಂದ, ತಮ್ಮ ಕಾರ್ಯತಂತ್ರವನ್ನೇ ಬದಲಾಯಿಸಿಕೊಂಡರು.
ಮೆಕಾಲೆ ನಮ್ಮ ಭಾರತದ ಸಾಂಪ್ರದಾಯಿಕ ಕೌಶಲ್ಯ ಆಧಾರಿತ ಶಿಕ್ಷಣ ವ್ಯವಸ್ಥೆಯನ್ನು ದುರ್ಬಲಗೊಳಿಸಿ, ಕಾಗದ-ತುಂಬುವ ಗುಮಾಸ್ತರನ್ನು ಉತ್ಪಾದಿಸುವ ಮಟ್ಟಕ್ಕೆ ಸೀಮಿತಗೊಳಿಸಿದರು ಎಂದು ಪ್ರತಿಪಾದಿಸಿದ್ದಾರೆ (ಏಜೆನ್ಸೀಸ್).