ಮಾಜಿ ಕೇಂದ್ರ ಗೃಹ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಶಿವರಾಜ್ ಪಾಟೀಲ್(90) ನಿಧನ | Shivraj Patil

ಮಾಜಿ ಕೇಂದ್ರ ಗೃಹಸಚಿವ ಶಿವರಾಜ್ ಪಾಟೀಲ್
ಮಾಜಿ ಕೇಂದ್ರ ಗೃಹಸಚಿವ ಶಿವರಾಜ್ ಪಾಟೀಲ್
Published on
ಮುಂಬೈ: ಮಾಜಿ ಕೇಂದ್ರ ಗೃಹಸಚಿವ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಶಿವರಾಜ್ ಪಾಟೀಲ್(Shivraj Patil) ಅವರು ಇಂದು(ಡಿ. 12) ಬೆಳಗ್ಗೆ ತಮ್ಮ ಹುಟ್ಟುರಾದ ಮಹಾರಾಷ್ಟ್ರದ ಲಾತೂರ್​ನಲ್ಲಿ ನಿಧನರಾಗಿದ್ದಾರೆ. 
90 ವರ್ಷದ ಪಾಟೀಲ್ ಅವರು ಕೆಲಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಇಂದು ಅವರ 'ದೇವಘರ್'ನ ತಮ್ಮ ನಿವಾಸದಲ್ಲಿ ನಿಧನರಾದರು ಎಂದು ಕುಟುಂಬ ಮೂಲಗಳು ತಿಳಿಸಿವೆ. ಅವರು ಮಗ ಶೈಲೇಶ್ ಪಾಟೀಲ್, ಸೊಸೆ ಬಿಜೆಪಿ ನಾಯಕಿ ಅರ್ಚನಾ ಹಾಗೂ ಇಬ್ಬರು ಮೊಮ್ಮಕ್ಕಳು ಇದ್ದರು.
1935 ಅಕ್ಟೋಬರ್ 12ರಂದು ಜನಿಸಿದ್ದ ಅವರು, ಲಾತೂರ್​​ನ ಪುರಸಭೆಯ ಮುಖ್ಯಸ್ಥರಾಗಿ ತಮ್ಮ ರಾಜಕೀಯ ಪ್ರಯಾಣವನ್ನು ಪ್ರಾರಂಭಿಸಿದ್ದರು. 70ರ ದಶಕದ ಆರಂಭದಲ್ಲಿ ಶಾಸಕರಾಗಿ ಆಯ್ಕೆಯಾದರು. ಬಳಿಕ 7 ಬಾರಿ ಲಾತೂರ್​ನಿಂದ ಸಂಸದರಾಗಿ ಆಯ್ಕೆಯಾಗಿದ್ದರು. 1991 ರಿಂದ 1996 ರವರೆಗೆ ಲೋಕಸಭೆಯ 10 ನೇ ಸ್ಪೀಕರ್ ಆಗಿದ್ದರು. 2004ರಲ್ಲಿ ಬಿಜೆಪಿಯ ರೂಪತೈ ​​ಪಾಟೀಲ್ ನೀಲಂಗೇಕರ್ ವಿರುದ್ಧ ಸೋತಿದ್ದರು.
ಬಳಿಕ ರಾಜ್ಯಸಭೆ ಸದಸ್ಯರಾಗಿ 2004 ರಿಂದ 2008 ರವರೆಗೆ ಕೇಂದ್ರ ಗೃಹ ಸಚಿವರಾಗಿದ್ದರು. ಅವರ ಅವಧಿಯಲ್ಲೇ ಮುಂಬೈ ಮೇಲೆ ಉಗ್ರರ ದಾಳಿಯಾಗಿತ್ತು. ಬಳಿಕ 2010 ರಿಂದ 2015 ರವರೆಗೆ ಪಂಜಾಬ್ ರಾಜ್ಯಪಾಲರಾಗಿದ್ದರು. ಜೊತೆಗೆ ಕೇಂದ್ರಾಡಳಿತ ಪ್ರದೇಶವಾದ ಚಂಡೀಗಢದ ಆಡಳಿತಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ (ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net