ಮೊದಲು ನ್ಯಾಯಾಂಗವನ್ನು ಟೀಕಿಸೋದು, ಆಮೇಲೆ ನಮ್ಮ ಬಳಿಗೆ ಬರೋದು!...ನಿಖಿಲ್ ವಾಗ್ಲೆ ಮತ್ತು ರಾವುತ್‌ಗೆ ಸುಪ್ರೀಂ ನೋಟಿಸ್! | Contempt Of Court

ನವದೆಹಲಿ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಹಾಗೂ ನ್ಯಾಯಾಂಗ ವ್ಯವಸ್ಥೆಯ ವಿರುದ್ಧ ಸಾರ್ವಜನಿಕವಾಗಿ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ, ಹಿರಿಯ ಪತ್ರಕರ್ತ ನಿಖಿಲ್ ವಾಗ್ಲೆ ಹಾಗೂ ಶಿವಸೇನಾ ರಾಜ್ಯಸಭಾ ಸದಸ್ಯ ಸಂಜಯ್ ರಾವುತ್ ವಿರುದ್ಧ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ದಾಖಲಿಸಿರುವ ಕ್ರಿಮಿನಲ್ ನ್ಯಾಯಾಂಗ ನಿಂದನೆ (Contempt Of Court) ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡಿದೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿರುವ ನ್ಯಾಯಾಲಯವು ಇಬ್ಬರು ಪ್ರತಿವಾದಿಗಳಿಗೂ ನೋಟಿಸ್ ಜಾರಿ ಮಾಡಿದ್ದು, ವೈಯಕ್ತಿಕ ಹಾಜರಾತಿಯಿಂದ ವಿನಾಯತಿ ನೀಡಿದೆ.
ಮೊದಲು ನ್ಯಾಯಾಂಗವನ್ನು ಟೀಕಿಸೋದು, ಆಮೇಲೆ ನಮ್ಮ ಬಳಿಗೆ ಬರೋದು!...ನಿಖಿಲ್ ವಾಗ್ಲೆ ಮತ್ತು ರಾವುತ್‌ಗೆ ಸುಪ್ರೀಂ ನೋಟಿಸ್! | Contempt Of Court
Published on: 

ನವದೆಹಲಿ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಹಾಗೂ ನ್ಯಾಯಾಂಗ ವ್ಯವಸ್ಥೆಯ ವಿರುದ್ಧ ಸಾರ್ವಜನಿಕವಾಗಿ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ, ಹಿರಿಯ ಪತ್ರಕರ್ತ ನಿಖಿಲ್ ವಾಗ್ಲೆ ಹಾಗೂ ಶಿವಸೇನಾ ರಾಜ್ಯಸಭಾ ಸದಸ್ಯ ಸಂಜಯ್ ರಾವುತ್ ವಿರುದ್ಧ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ದಾಖಲಿಸಿರುವ ಕ್ರಿಮಿನಲ್ ನ್ಯಾಯಾಂಗ ನಿಂದನೆ (Contempt Of Court) ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡಿದೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿರುವ ನ್ಯಾಯಾಲಯವು ಇಬ್ಬರು ಪ್ರತಿವಾದಿಗಳಿಗೂ ನೋಟಿಸ್ ಜಾರಿ ಮಾಡಿದ್ದು, ವೈಯಕ್ತಿಕ ಹಾಜರಾತಿಯಿಂದ ವಿನಾಯತಿ ನೀಡಿದೆ.

ಏನಿದು ವಿವಾದ..?

ವಿರೋಧ ಪಕ್ಷಗಳ ನಿಯೋಗವೊಂದು ಸುಪ್ರೀಂ ಕೋರ್ಟ್‌ಗೆ ಮೆರವಣಿಗೆ ನಡೆಸುವ ಮುನ್ನ ಸಿಜೆಐ ಅವರನ್ನು ಭೇಟಿ ಮಾಡಲು ಕೋರಿದ್ದ ಮನವಿಯನ್ನು ಸಿಜೆಐ ತಿರಸ್ಕರಿಸಿ, ಸೂಕ್ತ ಅರ್ಜಿಯನ್ನು ನ್ಯಾಯಾಲಯದ ಮುಂದೆ ಸಲ್ಲಿಸುವಂತೆ ಸಲಹೆ ಮಾಡಿದ್ದರು. ಈ ಘಟನೆಯ ಬಳಿಕ ಈ ಇಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು. ಅಕ್ಟೋಬರ್ 11 ರಂದು ಪತ್ರಕರ್ತ ನಿಖಿಲ್ ವಾಗ್ಲೆ ಎಕ್ಸ್ ಖಾತೆಯಲ್ಲಿ ಸಿಜೆಐ ಅವರನ್ನು ಉದ್ದೇಶಿಸಿ ಆಕ್ಷೇಪಾರ್ಹ ಮತ್ತು ಅವಾಚ್ಯ ಶಬ್ದಗಳಿಂದ ಕೂಡಿದ ಪೋಸ್ಟ್ ಮಾಡಿದ್ದರು.

ಇದರ ಬೆನ್ನಲ್ಲೇ, ಅಕ್ಟೋಬರ್ 12 ರಂದು ಸಂಸದ ಸಂಜಯ್ ರಾವುತ್ ಅವರು, ನ್ಯಾಯಾಧೀಶರು ಬಿಜೆಪಿಯ ರಾಜಕೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ ಹಾಗೂ ಮುಖ್ಯಮಂತ್ರಿಗಳು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಗೆ ಔತಣಕೂಟಗಳನ್ನು ಆಯೋಜಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು. ಅಲ್ಲದೆ, ಲಂಡನ್‌ನಲ್ಲಿ ರಾಜಕೀಯ ನಾಯಕರೊಂದಿಗೆ ನ್ಯಾಯಾಧೀಶರು ಬ್ಯಾಡ್ಮಿಂಟನ್ ಆಡುತ್ತಿರುವ ಫೋಟೋಗಳನ್ನು ಅವರು ಪೋಸ್ಟ್​ ಮಾಡಿದ್ದರು.

ಇದನ್ನೂ ಓದಿ:ಸ್ಟಾಪ್ ಇಟ್, ಗೆಟ್ ಲಾಸ್ಟ್!...ನೇಹಾ ಬೋರಾ ಮಾತನಾಡುತ್ತಿದ್ದಂತೆ ಆಕ್ರೋಶ ಹೊರಹಾಕಿದ ಸಭಿಕರು! | Neha Bora

ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಈ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ಅಕ್ಟೋಬರ್ 15 ರಂದು ನ್ಯಾಯಾಂಗ ನಿಂದನೆಗೆ ಅರ್ಜಿ ಸಲ್ಲಿಸಿತು. ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರು ಕಂಟೆಂಪ್ಟ್ ಆಫ್ ಕೋರ್ಟ್ಸ್ ಆಕ್ಟ್, 1971 ರ ಸೆಕ್ಷನ್ 15(1)(b) ಅಡಿಯಲ್ಲಿ ಕ್ರಮ ಜರುಗಿಸಲು ಅದೇ ದಿನ ಒಪ್ಪಿಗೆ ನೀಡಿದರು. ವಾಗ್ಲೆ ಮತ್ತು ರಾವುತ್ ಅವರ ಹೇಳಿಕೆಗಳು ಮೇಲ್ನೋಟಕ್ಕೆ ಸುಪ್ರೀಂ ಕೋರ್ಟ್ ಹಾಗೂ ಸಿಜೆಐ ಘನತೆಯನ್ನು ಕುಗ್ಗಿಸುವ ದುರುದ್ದೇಶದಿಂದ ಕೂಡಿವೆ ಎಂದು ಅವರು ತಿಳಿಸಿದರು.

ರಾವುತ್ ಉಲ್ಲೇಖಿಸಿದ ಬ್ಯಾಡ್ಮಿಂಟನ್ ಫೋಟೋಗಳ ಕುರಿತು ಪ್ರತಿಕ್ರಿಯಿಸಿದ ಅಟಾರ್ನಿ ಜನರಲ್, ಆ ಫೋಟೋಗಳು ಲಂಡನ್‌ನದ್ದಲ್ಲ, ಬದಲಾಗಿ ನವೆಂಬರ್‌ನಲ್ಲಿ ನವದೆಹಲಿಯ ತ್ಯಾಗರಾಜ್ ಸ್ಟೇಡಿಯಂನಲ್ಲಿ ನಡೆದ ಕಾರ್ಯಕ್ರಮದ್ದಾಗಿವೆ ಎಂದು ದೆಹಲಿ ಹೈಕೋರ್ಟ್ ಜೂನ್ 19 ರಂದೇ ಸ್ಪಷ್ಟಪಡಿಸಿದೆ ಎಂದರು. ಸಂಸದರಾದವರು ಇಂತಹ ಆರೋಪಗಳನ್ನು ಮಾಡುವ ಮುನ್ನ ವಾಸ್ತವ ಸಂಗತಿಗಳನ್ನು ಪರಿಶೀಲಿಸಬೇಕಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನ್ಯಾಯಾಲಯದ ನಿಲುವು ಮತ್ತು ಇತ್ತೀಚಿನ ಬೆಳವಣಿಗೆಗಳು!

ಜನರು ಸಾಮಾನ್ಯವಾಗಿ ನ್ಯಾಯಾಂಗವನ್ನು ಟೀಕಿಸುತ್ತಾರೆ ಆದರೆ ತಮ್ಮ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಹಕ್ಕುಗಳು ಅಪಾಯದಲ್ಲಿದ್ದಾಗ ನ್ಯಾಯಾಲಯದ ಮೊರೆ ಹೋಗುತ್ತಾರೆ ಎಂದು ಮುಖ್ಯ ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟರು. ಇಂತಹ ಹೇಳಿಕೆಗಳು ಸಮಾಜದಲ್ಲಿ ಕೆಟ್ಟ ಪ್ರಭಾವ ಬೀರುತ್ತವೆ ಎಂದ ಸಿಜೆಐ, ಉತ್ತಮ ಬುದ್ಧಿ ಎಲ್ಲರಲ್ಲೂ ನೆಲೆಸಲಿ ಎಂದು ಆಶಿಸಿದರು. ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ವ್ಯವಸ್ಥೆಯ ಮೇಲೆ ಒತ್ತಡ ಹೇರುವ ಉದ್ದೇಶದಿಂದಲೇ ಇಂತಹ ಹೇಳಿಕೆಗಳನ್ನು ಪ್ರಜ್ಞಾಪೂರ್ವಕವಾಗಿ ನೀಡಲಾಗುತ್ತಿದೆ ಎಂದು ಆರೋಪಿಸಿದರು.

ಈಗಾಗಾಲೇ ನಿಖಿಲ್ ವಾಗ್ಲೆ ಅವರು ತಮ್ಮ ವಿವಾದಾತ್ಮಕ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದು, ಸಿಜೆಐ ಹಾಗೂ ಸುಪ್ರೀಂ ಕೋರ್ಟ್‌ಗೆ ಬೇಷರತ್ ಕ್ಷಮೆ ಯಾಚಿಸಿ ಅಟಾರ್ನಿ ಜನರಲ್ ಅವರಿಗೆ ಪತ್ರ ಬರೆದಿದ್ದಾರೆ ಮತ್ತು ಪ್ರಕರಣವನ್ನು ಮುಂದುವರಿಸದಂತೆ ವಿನಂತಿಸಿದ್ದಾರೆ. ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಮುಂದುವರಿದಿದೆ(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net