ಕ್ಷಮಿಸಿ, ಕ್ಷಮಿಸಿ, ಕ್ಷಮಿಸಿ... ಆ ಒಂದು ಭಯದಿಂದ ಕದ್ದ ಚಿನ್ನಾಭರಣವನ್ನು ಕ್ಷಮಾಪಣ ಪತ್ರದೊಂದಿಗೆ ಹಿಂತಿರುಗಿಸಿದ ಖದೀಮ! Thief Returns Stolen Ornaments

ಕ್ಷಮಿಸಿ, ಕ್ಷಮಿಸಿ, ಕ್ಷಮಿಸಿ... ಆ ಒಂದು ಭಯದಿಂದ ಕದ್ದ ಚಿನ್ನಾಭರಣವನ್ನು ಕ್ಷಮಾಪಣ ಪತ್ರದೊಂದಿಗೆ ಹಿಂತಿರುಗಿಸಿದ ಖದೀಮ! Thief Returns Stolen Ornaments
ಕ್ಷಮಿಸಿ, ಕ್ಷಮಿಸಿ, ಕ್ಷಮಿಸಿ... ಆ ಒಂದು ಭಯದಿಂದ ಕದ್ದ ಚಿನ್ನಾಭರಣವನ್ನು ಕ್ಷಮಾಪಣ ಪತ್ರದೊಂದಿಗೆ ಹಿಂತಿರುಗಿಸಿದ ಖದೀಮ! Thief Returns Stolen Ornaments
Published on

ಪ್ರಮುಖ ಮುಖ್ಯಾಂಶಗಳು

  • ಸಿಕ್ಕಿಬೀಳುವ ಭೀತಿಯಿಂದ 8 ಪವನ್ ಆಭರಣಗಳನ್ನು ಕ್ಷಮಾಪಣಾ ಪತ್ರದೊಂದಿಗೆ ಮಾಲೀಕರ ಮನೆಗೆ ಮರಳಿಸಿದ ಕಳ್ಳ
  • ಈಗಾಗಲೇ 2 ಪವನ್ ಚಿನ್ನ ಮಾರಾಟ ಮಾಡಿರುವುದಾಗಿ ತಿಳಿಸಿರುವ ಕಳ್ಳ, ಕೇಸ್ ಹಿಂಪಡೆಯುವಂತೆ ಪತ್ರದಲ್ಲಿ ಮನವಿ
  • ಸಿಸಿಟಿವಿಯಲ್ಲಿ ಸೆರೆಯಾಗಿರುವ ತನ್ನ ಗುರುತು ಪತ್ತೆಯಾಗುವ ಭಯವೇ ಆಭರಣ ಮರಳಿಸಲು ಕಾರಣ
  • ಕಳೆದ ಗುರುವಾರ ನಡೆದ ಕಳ್ಳತನದ ವಿಷಯ, ಶನಿವಾರ ಮನೆಯವರು ಪ್ರವಾಸಕ್ಕೆ ಸಿದ್ಧತೆ ನಡೆಸುವಾಗ ಬೆಳಕಿಗೆ ಬಂದಿತ್ತು
ಗುರುವಾಯೂರು: ಅಚ್ಚರಿಯ ಘಟನೆಯೊಂದರಲ್ಲಿ, ಕೇರಳದ ಅರಿಯನ್ನೂರಿನಲ್ಲಿರುವ ಮನೆಯೊಂದರಿಂದ 10 ಪವನ್ ಚಿನ್ನಾಭರಣಗಳನ್ನು ಕದ್ದ ಕಳ್ಳನೊಬ್ಬ ಅದರಲ್ಲಿ ಎಂಟು ಪವನ್ ಚಿನ್ನಾಭರಣಗಳನ್ನು ಕ್ಷಮಾಪಣಾ ಪತ್ರದೊಂದಿಗೆ ( Thief Returns Stolen Ornaments ) ಹಿಂದಿರುಗಿಸಿದ್ದಾನೆ. ನಿನ್ನೆ (ಮೇ 12) ಬೆಳಗ್ಗೆ ಮನೆಯ ಹಿಂಬದಿಯಿದ್ದ ಚೀಲದಲ್ಲಿ ಬಿಳಿ ಕಾಗದದ ಮೇಲೆ ಬರೆದ ಟಿಪ್ಪಣಿಯೊಂದಿಗೆ ಚಿನ್ನ ಪತ್ತೆಯಾಗಿದೆ.
ಎರಡು ಪವನ್ ಚಿನ್ನವನ್ನು ಮಾರಾಟ ಮಾಡಿಬಿಟ್ಟಿದ್ದೇನೆ. ಉಳಿದ ಆಭರಣಗಳು ಇಲ್ಲಿವೆ. ದಯವಿಟ್ಟು ಈ ಪ್ರಕರಣವನ್ನು ಹಿಂಪಡೆಯಿರಿ. ಅಲ್ಲದೆ, ನನ್ನನ್ನು ಕ್ಷಮಿಸಿ, ಕ್ಷಮಿಸಿ, ಕ್ಷಮಿಸಿ ಎಂದು ಖದೀಮ ಪತ್ರದಲ್ಲಿ ಬರೆದಿದ್ದಾನೆ. ಆಭರಣ ಹಾಗೂ ಪತ್ರ ಪತ್ತೆಯಾದ ಬೆನ್ನಲ್ಲೇ, ಕುಟುಂಬವು ಪೊಲೀಸರಿಗೆ ಮಾಹಿತಿ ನೀಡಿತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಆಭರಣಗಳು ಮತ್ತು ಪತ್ರವನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ.
ಪ್ರಕರಣದ ವಿವರಣೆಗೆ ಬರುವುದಾದರೆ, ಪೊಕ್ಕಾಕ್ಕಿಲ್ಲತ್ ಕುನ್ಹು ಮುಹಮ್ಮದ್ ಅವರ ಮನೆಯಲ್ಲಿ ಕಳೆದ ಗುರುವಾರ ರಾತ್ರಿ ಈ ಕಳ್ಳತನ ನಡೆದಿದ್ದು, ಶನಿವಾರ ಬೆಳಗ್ಗೆಯಷ್ಟೇ ಈ ವಿಷಯ ಬೆಳಕಿಗೆ ಬಂದಿತು. ಕುನ್ಹು ಮುಹಮ್ಮದ್, ಅವರ ಪುತ್ರಿ ಡಾ. ಬುಶ್ರಾ, ಅಳಿಯ ಡಾ. ಅಬೂಬಕರ್ ರಾಫಿ ಮತ್ತು ಅವರ ಮಕ್ಕಳು ಮನೆಯಲ್ಲಿದ್ದರು. ವೀಕೆಂಡ್​ ಪ್ರವಾಸಕ್ಕೆಂದು ಶನಿವಾರ ಬೆಳಗ್ಗೆ ಸಿದ್ಧತೆ ನಡೆಸಲು ಬುಶ್ರಾ ಅವರು ಕಬೋರ್ಡ್ ತೆರೆದಾಗ ಒಡವೆಗಳು ನಾಪತ್ತೆಯಾಗಿರುವುದು ಕಂಡುಬಂದಿತು.
ಎರಡು ಸರಗಳು, ಎರಡು ಬಳೆಗಳು ಮತ್ತು ಮೂರು ಜೊತೆ ಕಿವಿಯೋಲೆಗಳು ಕಳ್ಳತನವಾಗಿದ್ದವು. ಆದರೆ, ಒಂದು ಸರ ಮತ್ತು ಒಂದು ಜೊತೆ ಕಿವಿಯೋಲೆಗಳನ್ನು ಹೊರತುಪಡಿಸಿ, ಉಳಿದೆಲ್ಲಾ ಆಭರಣಗಳನ್ನು ನಿನ್ನೆ ಹಿಂತಿರುಗಿಸಲಾಗಿದೆ. ಕಳ್ಳತನದ ಸಂಪೂರ್ಣ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಳ್ಳನು ಕೆಂಪು ಟೀ ಶರ್ಟ್ ಮತ್ತು ಪ್ಯಾಂಟ್ ಧರಿಸಿ, ಮುಖ ಮುಚ್ಚಿಕೊಳ್ಳದೆ ದರೋಡೆ ನಡೆಸುತ್ತಿರುವುದು ದೃಶ್ಯಗಳಲ್ಲಿ ಕಂಡುಬಂದಿದೆ.
ಸಿಕ್ಕಿಬೀಳುವ ಭೀತಿಯಿಂದ ಕಳ್ಳನು ಎಂಟು ಪವನ್ ಚಿನ್ನಾಭರಣಗಳನ್ನು ಮರಳಿ ಹಸ್ತಾಂತರಿಸಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಕಳ್ಳತನದ ನಂತರ ಸಿಸಿಟಿವಿ ದೃಶ್ಯಾವಳಿಗಳನ್ನು ಎಲ್ಲೆಡೆ ಹಂಚಲಾಗಿತ್ತು ಮತ್ತು ಈ ಸಂಬಂಧ ಅಧಿಕೃತ ದೂರು ಕೂಡ ದಾಖಲಾಗಿತ್ತು. ಕಳ್ಳನು ತನ್ನ ಮುಖವನ್ನು ಮರೆಮಾಚದ ಕಾರಣ, ಅವನು ಸ್ಥಳೀಯ ನಿವಾಸಿ ಅಥವಾ ಆ ಪ್ರದೇಶದ ಪರಿಚಯವಿರುವ ವ್ಯಕ್ತಿಯಾಗಿರಬಹುದು ಎಂದು ತನಿಖಾಧಿಕಾರಿಗಳು ನಂಬಿದ್ದಾರೆ. ಸಿಸಿಟಿವಿ ಮೂಲಕ ತನ್ನ ಗುರುತು ಪತ್ತೆಯಾಗುವುದು ಖಚಿತ ಎಂದು ತಿಳಿದ ಮೇಲೆ ಅವನು ಆಭರಣಗಳನ್ನು ಹಿಂತಿರುಗಿಸಿರುವ ಸಾಧ್ಯತೆಯಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net