

ವಿಶಾಖಪಟ್ಟಣಂ: ಚುನಾವಣಾ ಆಯುಕ್ತರ ನೇಮಕಾತಿಯಲ್ಲಿ ಸುಧಾರಣೆಗಳಿಗೆ ಕರೆ ನೀಡಿರುವ ವೈಎಸ್ಆರ್ಸಿಪಿ ಮುಖ್ಯಸ್ಥ ಮತ್ತು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ, ಭಾನುವಾರ(ಅ. 18) ಕೇಂದ್ರದ 2023ರ ಚುನಾವಣಾ ಆಯುಕ್ತರ ನೇಮಕಾತಿ ಕಾಯ್ದೆ ಬೆಂಬಲಿಸಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ.
ವಿಶಾಖಪಟ್ಟಣಂನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಅವರು, ಚುನಾವಣಾ ಆಯುಕ್ತರ ನೇಮಕಾತಿ ಪ್ರಕ್ರಿಯೆ ಅಧಿಕಾರದಲ್ಲಿರುವ ಸರ್ಕಾರದಿಂದ ಪ್ರತ್ಯೇಕವಾಗಿರಬೇಕು. ಮತ್ತು ಚುನಾವಣೆಗಳಲ್ಲಿ ಸಾರ್ವಜನಿಕರ ನಂಬಿಕೆಯನ್ನು ಖಚಿತಪಡಿಸಿಕೊಳ್ಳಲು ವ್ಯವಸ್ಥೆಯನ್ನು ಮರುಪರಿಶೀಲಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.
2023ರಲ್ಲಿ ತಮ್ಮ ಪಕ್ಷ ಚುನಾವಣಾ ಆಯುಕ್ತರ ನೇಮಕಾತಿ ಕಾನೂನಿಗೆ ಬೆಂಬಲ ನೀಡಿದ್ದನ್ನು ಒಪ್ಪಿಕೊಂಡ ಅವರು, ನಾನು ಈಗ ವಿಷಾದಿಸುತ್ತೇನೆ ಎಂದಿದ್ದಾರೆ. ಚುನಾವಣೆಗಳು ಮತ್ತು ಪರೀಕ್ಷೆಗಳ ನಡುವೆ ಹೋಲಿಕೆ ಮಾಡಿ ವಿದ್ಯಾರ್ಥಿಯಿಂದ ಪರೀಕ್ಷಕನನ್ನು ನೇಮಿಸಲು ಸಾಧ್ಯವಿಲ್ಲ. ತಟಸ್ಥವಲ್ಲದ ಪ್ರಕ್ರಿಯೆ ಮೂಲಕ ನೇಮಕಗೊಂಡರೆ ಪ್ರಾಮಾಣಿಕ ಚುನಾವಣಾ ಆಯುಕ್ತರೂ ಸಹ ನಿಷ್ಪಕ್ಷಪಾತದ ಬಗ್ಗೆ ಪ್ರಶ್ನೆಗಳನ್ನು ಎದುರಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಚುನಾವಣಾ ಆಯುಕ್ತರ ನೇಮಕದಲ್ಲಿ ಅಧಿಕಾರದಲ್ಲಿರುವ ಸರ್ಕಾರವು ಪಾತ್ರ ವಹಿಸುವ ಪ್ರಸ್ತುತ ವ್ಯವಸ್ಥೆಯು ರಚನಾತ್ಮಕ ದೋಷವಾಗಿದ್ದು, ಅದನ್ನು ಸರಿಪಡಿಸಬೇಕಾಗಿದೆ. ಆ ದೋಷವನ್ನು ಸರಿಪಡಿಸಿದ್ರೆ, ವ್ಯವಸ್ಥೆಯು ಉತ್ತಮವಾಗಿ ಕಾರ್ಯನಿರ್ವಹಿಸಬಹುದು ಎಂದು ಹೇಳಿದ್ದಾರೆ.
ರಾಜ್ಯ ಚುನಾವಣಾ ಆಯುಕ್ತರ ನೇಮಕಾತಿಯಲ್ಲೂ ಇದೇ ರೀತಿಯ ಸುಧಾರಣೆಯಾಗಬೇಕೆಂದಿರುವ ಅವರು, ಅವರನ್ನು ಮುಖ್ಯಮಂತ್ರಿ ನೇಮಕ ಮಾಡಬಾರದು, ಬದಲಾಗಿ ತಟಸ್ಥ ಕಾರ್ಯವಿಧಾನದ ಮೂಲಕ ನೇಮಿಸಬೇಕು ಎಂದು ಪ್ರತಿಪಾದಿಸಿದ್ದಾರೆ (ಏಜೆನ್ಸೀಸ್).