

ನವದೆಹಲಿ: ಭಾರತ ಫ್ರಾನ್ಸ್ ಅಥವಾ ಬಾಂಗ್ಲಾದೇಶವಲ್ಲ ಎಂದಿರುವ ಕೇಂದ್ರ ಸಚಿವ ಕಿರಣ್ ರಿಜಿಜು, ದೇಶದಲ್ಲಿ ಎಸ್ಐಆರ್ ವಿರೋಧಿ ಪ್ರತಿಭಟನೆಗಳ ಸಮಯದಲ್ಲಿ ವಿಪಕ್ಷಗಳು ಆ ದೇಶಗಳಲ್ಲಿ ನಡೆದ ರೀತಿಯಲ್ಲಿಯೇ ಹಿಂಸಾಚಾರ ನಡೆಸಲು ಪಿತೂರಿ ನಡೆಸಿವೆ ಎಂದು ಭಾನುವಾರ(ಅ. 18) ಆರೋಪಿಸಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಎಐಎಸ್ಎ ಅಧ್ಯಕ್ಷೆ ನೇಹಾ ಬೋರಾ ಮತ್ತು ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು ಆಡಳಿತ ಬದಲಾವಣೆಯನ್ನು ಪ್ರತಿಪಾದಿಸುವ ವೀಡಿಯೊವನ್ನು ಹಂಚಿಕೊಂಡು ಪೋಸ್ಟ್ ಹಾಕಿರುವ ಅವರು, ಬಾಂಗ್ಲಾದೇಶದಲ್ಲಿ ನಡೆದ ಹಿಂಸಾತ್ಮಕ ಘಟನೆ ಮತ್ತು ಫ್ರಾನ್ಸ್ನಲ್ಲಿ ನಡೆಯುತ್ತಿರುವ ಗಲಭೆಗಳು, ಬೆಂಕಿ ಹಚ್ಚುವಿಕೆ ಮತ್ತು ಲೂಟಿ. ಭಾರತದಲ್ಲೂ ಇದೇ ರೀತಿ ನಡೆಸಲು ಪಿತೂರಿ ರೂಪಿಸಲಾಗಿತ್ತು ಎಂದು ಆರೋಪಿಸಿದ್ದಾರೆ.
ಭಾರತ ವಿರೋಧಿ ಗ್ಯಾಂಗ್ಗಳು ಮತ್ತು ಕೆಲವು ರಾಜಕಾರಣಿಗಳು ಯುವಕರನ್ನು ಪ್ರಚೋದಿಸಿ ಬೀದಿಗಳಲ್ಲಿ ಹಿಂಸಾಚಾರ ನಡೆಸಲು ಒಪ್ಪಂದ ಮಾಡಿಕೊಂಡಿದ್ದರು. ಆದರೆ ಈ ಪಿತೂರಿಯನ್ನು ರೂಪಿಸಿದವರು ಭಾರತ ಬಾಂಗ್ಲಾದೇಶ ಅಥವಾ ಫ್ರಾನ್ಸ್ ಅಲ್ಲ ಎಂಬುದನ್ನು ಮರೆತಿದ್ದರು. ಭಾರತದಲ್ಲಿ ಆಡಳಿತ ಬದಲಾವಣೆ ಖಂಡಿತವಾಗಿಯೂ ಸಾಧ್ಯ. ಆದರೆ ಅದು ಕೇವಲ ಚುನಾವಣೆಗಳ ಮೂಲಕವೇ ಹೊರತು, ಸೊರೊಸ್ ಅವರ ಮೂಲಕ ಅಲ್ಲ ಎಂದು ಕುಟುಕಿದ್ದಾರೆ.
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ (ಎಸ್ಐಆರ್) ಅಕ್ರಮಗಳು ನಡೆದಿವೆ ಎಂಬ ಆರೋಪದ ಮೇಲೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ಇತ್ತೀಚೆಗೆ ವಿರೋಧ ಪಕ್ಷಗಳು ಮತ್ತು ಸಿಜೆಪಿ ಪಕ್ಷ ಸರಣಿ ಪ್ರತಿಭಟನೆಗಳನ್ನು ನಡೆಸಿದ್ದರು.
ಸಿಜೆಪಿ ಸುದ್ದಿಗೋಷ್ಠಿ ವೇಳೆ ಮಾತನಾಡಿದ್ದ ಹಿರಿಯ ವಕೀಲ ಪ್ರಶಾಂತ್ ಭೂಷಣ್, ಎಸ್ಐಆರ್ ಮತ್ತು ಜ್ಞಾನೇಶ್ ಕುಮಾರ್ ಅವರ ವಿರುದ್ಧದ ಪ್ರತಿಭಟನೆಗಳನ್ನು ಕೇಂದ್ರ ಸರ್ಕಾರ ಆಡಳಿತ ಬದಲಾವಣೆ ಮಾಡಲು ವಿಪಕ್ಷಗಳು ರೂಪಿಸಿದ ಸಂಚು ಎಂದು ಹೇಳುತ್ತಿದ್ದಾರೆ. ದೇಶದಲ್ಲಿ ಚುನಾವಣಾ ಪ್ರಜಾಪ್ರಭುತ್ವವನ್ನು ಉಳಿಸಲು ಮಾತ್ರ ಹೋರಾಡುತ್ತಿದ್ದೇವೆ. ಪ್ರತಿಭಟನೆ ಹತ್ತಿಕ್ಕುವ, ಬಂಧನದಂತಹ ಅನಾಗರಿಕತೆ ಮುಂದುವರಿದರೆ, ಖಂಡಿತವಾಗಿಯೂ ಆಡಳಿತ ಬದಲಾವಣೆಯಾಗುತ್ತದೆ. ನಾವೆಲ್ಲರೂ ಆಡಳಿತ ಬದಲಾವಣೆಯನ್ನು ಬಯಸುತ್ತೇವೆ. ಅದರಲ್ಲಿ ಯಾವುದೇ ತಪ್ಪಿಲ್ಲ ಎಂದಿದ್ದರು (ಏಜೆನ್ಸೀಸ್).