

ಲಖನೌ: ವರದಕ್ಷಿಣೆಗಾಗಿ ಪಟ್ಟುಹಿಡಿದ ವರನ ಕುಟುಂಬಕ್ಕೆ ವಧುವಿನ ಮನೆಯವರು ವಿನೂತನ ರೀತಿಯಲ್ಲಿ ಪಾಠ ಕಲಿಸಿರುವ ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದೆ. ಮದುವೆಯಲ್ಲಿ ಕಾರು ಕೊಡಲೇಬೇಕು ಎಂದು ಬೇಡಿಕೆಯಿಟ್ಟ ವರನ ತಂದೆಗೆ, ವಧುವಿನ ಕುಟುಂಬಸ್ಥರು ಪ್ಲಾಸ್ಟಿಕ್ ಆಟಿಕೆ ಕಾರೊಂದನ್ನು ( Dowry Toy Car ) ಕೈಗಿತ್ತು ಮದುವೆಯನ್ನೇ ರದ್ದುಗೊಳಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ವಧುವಿನ ಮನೆಯವರ ದಿಟ್ಟ ನಿರ್ಧಾರಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಮೀರತ್‌ನ ಜ್ಞಾನಪುರ ಗ್ರಾಮದಲ್ಲಿ ಈ ಘಟನೆ ವರದಿಯಾಗಿದೆ. ಸುಮಾರು ಐದು ತಿಂಗಳ ಹಿಂದೆ ಜ್ಞಾನಪುರ ನಿವಾಸಿ ಶಂಶೇರ್ ಎಂಬುವವರ ಪುತ್ರನಿಗೂ ಮತ್ತು ಸಲೋನಾ ಗ್ರಾಮದ ಯುವತಿಗೂ ಹಿರಿಯರ ಸಮ್ಮುಖದಲ್ಲಿ ನಿಶ್ಚಿತಾರ್ಥ ನೆರವೇರಿತ್ತು. ನಿಶ್ಚಿತಾರ್ಥದ ಸಂದರ್ಭದಲ್ಲಿ ವಧುವಿನ ಕಡೆಯವರು ಸಂಪ್ರದಾಯದಂತೆ ವರನ ಕುಟುಂಬಕ್ಕೆ ವಿವಿಧ ವಸ್ತುಗಳ ಜತೆಗೆ 1 ಲಕ್ಷ ರೂಪಾಯಿ ನಗದನ್ನೂ ನೀಡಿದ್ದರು. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಶನಿವಾರ ವಧುವಿನ ಮನೆಯಲ್ಲಿ 'ಲಾಲ್ ಖತ್' (ಮದುವೆಗೆ ಅಧಿಕೃತವಾಗಿ ಆಹ್ವಾನಿಸುವ ಸಾಂಪ್ರದಾಯಿಕ ವಿಧಿ) ಕಾರ್ಯಕ್ರಮ ನಡೆಯಬೇಕಿತ್ತು.
ಈ ವಿವಾಹ ಮುರಿಯಲು ವಧುವಿನ ಮನೆಯವರು ಮಾಡಿದ ಜಮೀನು ಮಾರಾಟವೇ ಮೂಲ ಕಾರಣವಾಗಿದೆ. ಕೆಲವು ದಿನಗಳ ಹಿಂದಷ್ಟೇ ವಧುವಿನ ಕುಟುಂಬದವರು ತಮ್ಮ ತುಂಡು ಭೂಮಿಯನ್ನು ಮಾರಾಟ ಮಾಡಿದ್ದರು. ಈ ವಿಷಯ ತಿಳಿಯುತ್ತಿದ್ದಂತೆಯೇ ವರನ ಮನೆಯವರ ದುರಾಸೆ ಹೆಚ್ಚಾಗಿದ್ದು, ವರದಕ್ಷಿಣೆಯಾಗಿ ತಮಗೆ ಕಾರು ಬೇಕೇ ಬೇಕು ಎಂದು ಬೇಡಿಕೆಯಿಟ್ಟಿದ್ದಾರೆ. ವಧುವಿನ ಮನೆಯವರು ಈ ಕುರಿತು ವರನ ಕುಟುಂಬದವರ ಮನವೊಲಿಸಲು ಸಾಕಷ್ಟು ಪ್ರಯತ್ನಿಸಿದರಾದರೂ, ಸಂಧಾನ ವಿಫಲವಾಗಿ ವರನ ಕಡೆಯವರು ತಮ್ಮ ಹಠ ಬಿಡಲಿಲ್ಲ.
ವರನ ಕಡೆಯವರ ವರದಕ್ಷಿಣೆ ದಾಹದಿಂದ ಬೇಸತ್ತ ವಧುವಿನ ಕುಟುಂಬಸ್ಥರು ಅವರಿಗೆ ತಕ್ಕ ಪಾಠ ಕಲಿಸಲು ನಿರ್ಧರಿಸಿದರು. ಅದರಂತೆ ಶನಿವಾರ ವಧುವಿನ ಮನೆಯಲ್ಲಿ ಆಯೋಜಿಸಲಾಗಿದ್ದ 'ಲಾಲ್ ಖತ್' ಕಾರ್ಯಕ್ರಮಕ್ಕೆ ವರನ ಕುಟುಂಬಸ್ಥರನ್ನು ಆಹ್ವಾನಿಸಲಾಯಿತು. ಬೆಳಗ್ಗೆಯೇ ವಧುವಿನ ಮನೆಗೆ ಬಂದಿಳಿದ ವರನ ಕಡೆಯವರನ್ನು ರಾತ್ರಿ ಸುಮಾರು 10 ಗಂಟೆಯವರೆಗೂ ಕಾಯಿಸಲಾಯಿತು. ಬಳಿಕ ಎಲ್ಲರ ಸಮ್ಮುಖದಲ್ಲಿ ವರನ ತಂದೆಯ ಕೈಗೆ ಪ್ಲಾಸ್ಟಿಕ್ ಆಟಿಕೆ ಕಾರನ್ನು ನೀಡಿ, ಈ ಸಂಬಂಧವನ್ನು ಮುರಿದುಕೊಂಡಿರುವುದಾಗಿ ವಧುವಿನ ಮನೆಯವರು ಘೋಷಿಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ, ಕುರ್ಚಿಯ ಮೇಲೆ ಕುಳಿತಿರುವ ವ್ಯಕ್ತಿಯೊಬ್ಬರಿಗೆ ವಧುವಿನ ಕುಟುಂಬಸ್ಥರು ಆಟಿಕೆ ಕಾರನ್ನು ನೀಡುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಈ ವೇಳೆ ವಧುವಿನ ಮನೆಯ ಸದಸ್ಯರೊಬ್ಬರು, "ನಿಮಗೆ ಮನುಷ್ಯರು ಬೇಕಾಗಿರಲಿಲ್ಲ, ನಿಮಗೆ ಬೇಕಾಗಿದ್ದು ಕಾರು. ನೀವು ಕೇಳಿದ ಸ್ಕಾರ್ಪಿಯೋ ಕಾರನ್ನು ನಾವು ಈಗ ಕೊಟ್ಟಿದ್ದೇವೆ, ಇನ್ನು ಇದನ್ನೇ ಓಡಿಸಿಕೊಂಡು ಹೋಗಿ" ಎಂದು ಹೇಳುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಅಷ್ಟೇ ಅಲ್ಲದೆ, "ನೀವು ಬೆಳಗ್ಗೆಯೇ ಬಂದಿದ್ದೀರಿ, ಈಗ ರಾತ್ರಿ 10 ಗಂಟೆಯಾಗಿದೆ. ನೀವು ಬೇಡಿಕೆಯಿಟ್ಟಿದ್ದ ಕಾರನ್ನು ನಿಮಗೆ ನೀಡಲಾಗಿದೆ. ನಾವು ನಿಶ್ಚಿತಾರ್ಥವನ್ನು ವಾಪಸ್ ಪಡೆದಿದ್ದೇವೆ ಮತ್ತು ಈ ಮದುವೆಯನ್ನು ರದ್ದುಗೊಳಿಸಿದ್ದೇವೆ" ಎಂದು ವಧುವಿನ ಕಡೆಯವರು ಖಡಕ್ ಆಗಿ ಹೇಳಿದ್ದಾರೆ.
ಸದ್ಯ ಈ ವಿಡಿಯೋ ಅಂತರ್ಜಾಲದಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದ್ದು, ವರದಕ್ಷಿಣೆ ಪಿಡುಗಿನ ವಿರುದ್ಧ ವಧುವಿನ ಮನೆಯವರು ತೆಗೆದುಕೊಂಡ ಈ ಕ್ರಮಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಆದಾಗ್ಯೂ ಈ ವಿಡಿಯೋದ ಸತ್ಯಾಸತ್ಯತೆಯನ್ನು ಇನ್ನಷ್ಟೇ ಅಧಿಕೃತವಾಗಿ ದೃಢಪಡಿಸಬೇಕಿದೆ, (ಏಜೆನ್ಸೀಸ್).