

ವಾಷಿಂಗ್ಟನ್: ಅಮೆರಿಕದ ದಕ್ಷಿಣ ಕ್ಯಾಲಿಫೋರ್ನಿಯಾ ಕರಾವಳಿಯಲ್ಲಿ ಅತ್ಯಂತ ವಿಷಕಾರಿಯಾದ ಮತ್ತು ಅಪರೂಪದ 'ಹಳದಿ ಹೊಟ್ಟೆಯ ಸಮುದ್ರದ ಹಾವು' ( Sea Snake ) ದಡಕ್ಕೆ ಕೊಚ್ಚಿಬಂದಿದ್ದು, ಸ್ಥಳೀಯರಲ್ಲಿ ತೀವ್ರ ಕುತೂಹಲ ಹಾಗೂ ಆತಂಕ ಮೂಡಿಸಿದೆ. ಈ ಪ್ರದೇಶದ ಇತಿಹಾಸದಲ್ಲಿ ಈ ಅಪರೂಪದ ವಿಷಪೂರಿತ ಹಾವು ಕಡಲತೀರದಲ್ಲಿ ಕಾಣಿಸಿಕೊಂಡಿರುವುದು ಇದು ಎಂಟನೇ ಬಾರಿಯಾಗಿದೆ.
ಈ ಘಟನೆಯ ಬೆನ್ನಲ್ಲೇ ಲಾಸ್ ಏಂಜಲೀಸ್ ಕೌಂಟಿಯ ನೈಸರ್ಗಿಕ ಇತಿಹಾಸ ವಸ್ತುಸಂಗ್ರಹಾಲಯವು ಸಾರ್ವಜನಿಕರಿಗೆ ತುರ್ತು ಎಚ್ಚರಿಕೆ ನೀಡಿದ್ದು, ಯಾವುದೇ ಕಾರಣಕ್ಕೂ ಈ ಹಾವಿನ ಸಮೀಪಕ್ಕೆ ಹೋಗದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ತೀರಾ ಅಪರೂಪವಾಗಿ ಕಂಡುಬರುವ ಈ ಸಮುದ್ರದ ಹಾವು ಈಗ ದಡಕ್ಕೆ ಬರಲು 'ಎಲ್ ನಿನೋ' ಹವಾಮಾನ ವೈಪರೀತ್ಯವೇ ಪ್ರಮುಖ ಕಾರಣ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ಎಲ್ ನಿನೋ ಪರಿಣಾಮದಿಂದಾಗಿ ಸಮುದ್ರದ ನೀರಿನ ತಾಪಮಾನ ಅಸಾಧಾರಣವಾಗಿ ಹೆಚ್ಚಾಗಿರುವುದರಿಂದ ಉಷ್ಣವಲಯದ ಈ ಜೀವಿಗಳು ಉತ್ತರದ ಕರಾವಳಿಯತ್ತ ಬರುತ್ತಿವೆ ಎಂದು ನಂಬಲಾಗಿದೆ.
ವಸ್ತುಸಂಗ್ರಹಾಲಯದ ದಾಖಲೆಗಳ ಪ್ರಕಾರ, ಕ್ಯಾಲಿಫೋರ್ನಿಯಾದಲ್ಲಿ ಮೊದಲ ಬಾರಿಗೆ 1972ರ ಥ್ಯಾಂಕ್ಸ್‌ಗಿವಿಂಗ್ ದಿನದಂದು ಸ್ಯಾನ್ ಕ್ಲೆಮೆಂಟೆ ಸ್ಟೇಟ್ ಬೀಚ್‌ನಲ್ಲಿ ಈ ಹಳದಿ ಹೊಟ್ಟೆಯ ಸಮುದ್ರದ ಹಾವು ಪತ್ತೆಯಾಗಿತ್ತು. ಈ ವರ್ಷವೂ ಅದೇ ತೀರದಲ್ಲಿ ಪ್ರಬಲ ಎಲ್ ನಿನೋ ಪ್ರಭಾವ ಕಂಡುಬಂದಿದೆ.
ಇನ್ನೊಂದೆಡೆ, ಈ ಸಮುದ್ರದ ಹಾವು ದಡಕ್ಕೆ ಕೊಚ್ಚಿಬಂದಿರುವುದಕ್ಕೂ ಮತ್ತು ಕ್ಯಾಲಿಫೋರ್ನಿಯಾದಲ್ಲಿ ನಿನ್ನೆ ಸಂಭವಿಸಿದ ಭೂಕಂಪಕ್ಕೂ ಏನಾದರೂ ಸಂಬಂಧವಿದೆಯೇ ಎಂಬ ಅನುಮಾನ ಅನೇಕರಲ್ಲಿ ಮೂಡಿದೆ. ಸಮುದ್ರ ಜೀವಿಗಳು ದಡಕ್ಕೆ ಬರುವುದು ಮುಂದೆ ಸಂಭವಿಸಲಿರುವ ಭೂಕಂಪಗಳು ಅಥವಾ ನೈಸರ್ಗಿಕ ವಿಕೋಪಗಳ ಮುನ್ಸೂಚನೆ ಎಂಬ ಹಳೆಯ ಕಾಲದ ನಂಬಿಕೆಯೇ ಇಂತಹ ಚರ್ಚೆಗಳಿಗೆ ಕಾರಣವಾಗಿದೆ. ಆದರೆ, ಸಮುದ್ರದ ಹಾವು ದಡಕ್ಕೆ ಬರುವುದಕ್ಕೂ ಭೂಕಂಪಕ್ಕೂ ಯಾವುದೇ ರೀತಿಯ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.
ಮುಂಬರುವ ದಿನಗಳಲ್ಲಿ ಕಡಲತೀರದಲ್ಲಿ ಇಂತಹ ಇನ್ನಷ್ಟು ಜೀವಿಗಳು ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎಂದು ವಸ್ತುಸಂಗ್ರಹಾಲಯ ಅಂದಾಜಿಸಿದೆ. ವಿಶೇಷವಾಗಿ ಡಿಸೆಂಬರ್ 4 ರಿಂದ 11 ರವರೆಗೆ ಮತ್ತು ಡಿಸೆಂಬರ್ 20 ರಿಂದ 27 ರವರೆಗಿನ ಅವಧಿಯಲ್ಲಿ ಸಮುದ್ರದ ಹಾವುಗಳು ಹಾಗೂ ಅಪರೂಪದ ಕಡಲಾಮೆಗಳ ಮೊಟ್ಟೆಗಳು ದಡದಲ್ಲಿ ಪತ್ತೆಯಾಗುವ ಸಂಭವ ಹೆಚ್ಚಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.
ಕಡಲತೀರಕ್ಕೆ ವಿಹಾರಕ್ಕೆ ಬರುವ ಸಾರ್ವಜನಿಕರು ಅತ್ಯಂತ ಜಾಗರೂಕರಾಗಿರುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಒಂದು ವೇಳೆ ಕಡಲತೀರದಲ್ಲಿ ಇಂತಹ ಹಾವುಗಳು ಅಥವಾ ಕಡಲಾಮೆ ಮೊಟ್ಟೆಗಳು ಕಂಡುಬಂದರೆ, ಅವುಗಳನ್ನು ಮುಟ್ಟಲು ಅಥವಾ ಹಿಡಿಯಲು ಪ್ರಯತ್ನಿಸದೆ ತಕ್ಷಣವೇ ಸಂಬಂಧಪಟ್ಟ ವನ್ಯಜೀವಿ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಎಚ್ಚರಿಕೆ ನೀಡಲಾಗಿದೆ. ಏಕೆಂದರೆ ಈ ಹಾವುಗಳು ನೋಡಲು ನಿಶ್ಯಕ್ತವಾಗಿ ಕಂಡರೂ ಅತ್ಯಂತ ಪ್ರಾಣಾಂತಿಕ ವಿಷವನ್ನು ಹೊಂದಿರುತ್ತವೆ.
ಹಳದಿ ಹೊಟ್ಟೆಯ ಸಮುದ್ರದ ಹಾವು ಅತ್ಯಂತ ಪ್ರಬಲವಾದ 'ನ್ಯೂರೋಟಾಕ್ಸಿಕ್' (Neurotoxic) ಮತ್ತು 'ಮಯೋಟಾಕ್ಸಿಕ್' (Myotoxic) ವಿಷವನ್ನು ಹೊಂದಿದ್ದು, ಇದು ನೇರವಾಗಿ ಮನುಷ್ಯನ ನರಮಂಡಲ ಮತ್ತು ಸ್ನಾಯುಗಳ ಮೇಲೆ ದಾಳಿ ಮಾಡುತ್ತದೆ. ಈ ಹಾವು ಕಚ್ಚಿದಾಗ ಆರಂಭದಲ್ಲಿ ಹೆಚ್ಚಿನ ನೋವು ಕಾಣಿಸಿಕೊಳ್ಳದಿದ್ದರೂ, ಕೆಲವೇ ಗಂಟೆಗಳಲ್ಲಿ ಸ್ನಾಯುಗಳ ಸೆಳೆತ, ದೇಹದ ದೌರ್ಬಲ್ಯ, ಕಣ್ಣುರೆಪ್ಪೆಗಳು ಜೋಲು ಬೀಳುವುದು, ಮಾತನಾಡಲು ಹಾಗೂ ನುಂಗಲು ಕಷ್ಟವಾಗುವಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ವಿಷದ ತೀವ್ರತೆ ಹೆಚ್ಚಾದಂತೆ ಸ್ನಾಯುಗಳು ಕರಗಲಾರಂಭಿಸಿ ಮೂತ್ರಪಿಂಡಗಳು ವಿಫಲವಾಗುವ ಅಪಾಯವಿರುತ್ತದೆ; ಅಂತಿಮವಾಗಿ ಉಸಿರಾಟದ ಸ್ನಾಯುಗಳು ಪಾರ್ಶ್ವವಾಯುವಿಗೆ ಒಳಗಾಗಿ ಉಸಿರಾಟ ನಿಂತು ಸಾವು ಸಂಭವಿಸುವ ಸಾಧ್ಯತೆ ಇರುತ್ತದೆ. ಆದ್ದರಿಂದ, ಈ ಹಾವು ಕಚ್ಚಿದ ತಕ್ಷಣವೇ ತುರ್ತು ವೈದ್ಯಕೀಯ ಚಿಕಿತ್ಸೆ ಮತ್ತು ಆ್ಯಂಟಿ-ವೆನಮ್ ನೀಡುವುದು ಅತ್ಯಗತ್ಯವಾಗಿದೆ, (ಏಜೆನ್ಸೀಸ್).