

ಜೈಪುರ: ರಾಜಕೀಯದಲ್ಲಿ ಏನು ಬೇಕಾದರೂ ನಡೆಯಬಹುದೆಂಬ ಮಾತನ್ನು ಆಗ್ಗಾಗೆ ಕೇಳಿರುತ್ತೇವೆ. ಆದರೆ ಇತ್ತೀಚಿಗೆ ರಾಜಸ್ಥಾನದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ನಡೆದೊಂದು ವಿಚಿತ್ರ ಘಟನೆ ಈಗ ದೇಶದಾದ್ಯಂತ ಸಾಕಷ್ಟು ಸದ್ದು ಮಾಡುತ್ತಿದೆ.
ಚುನಾವಣೆಯಲ್ಲಿ ಗೆಲ್ಲಲೇಬೇಕು ಎಂಬ ಹಠಕ್ಕೆ ಬಿದ್ದ ಮಹಿಳೆಯೊಬ್ಬರು, ಒಂದೇ ದಿನ ಮೂರು ಬಾರಿ ಬಟ್ಟೆ ಬದಲಿಸಿ, ಕಾಂಗ್ರೆಸ್, ಬಿಜೆಪಿ ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ಒಟ್ಟು ಮೂರು ನಾಮಪತ್ರಗಳನ್ನು ಸಲ್ಲಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
ವಾಟಿ ಕುಮಾರಿ ಎಂಬಾಕೆಯೇ ಈ 'ಮೂವರು ಅಭ್ಯರ್ಥಿಗಳ' ಆಟ ಆಡಿದ ಮಹಿಳೆ ಆಗಿದ್ದಾಳೆ. ಇತ್ತೀಚೆಗೆ ರಾಜಸ್ಥಾನದ ಹಳ್ಳಿಯೊಂದರಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಇವರು ಗೆಲುವು ಸಾಧಿಸಿದ ಬಳಿಕ ಈ ಇಂಟರೆಸ್ಟಿಂಗ್ ವಿಚಾರ ಬಯಲಾಗಿದೆ.
ಚುನಾವಣೆಗೆ ನಾಮಪತ್ರ ಸಲ್ಲಿಸುವ ದಿನ ವಾಟಿ ಕುಮಾರಿ ಭರ್ಜರಿ ಪ್ಲ್ಯಾನ್ ಮಾಡಿಕೊಂಡೇ ಬಂದಿದ್ದರು. ಮೊದಲು ಕೆಂಪು ಬಣ್ಣದ ಸೀರೆ ಉಟ್ಟು ಬಂದಿದ್ದ ಅವರು, ಮಾಜಿ ಶಾಸಕ ವಾಜಿಬ್ ಅಲಿ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಈ ವೇಳೆ ಯಾರಿಗೂ ಗುರುತು ಸಿಗಬಾರದೆಂದು ಸೀರೆಯ ಸೆರಗಿನಿಂದ ತಮ್ಮ ಮುಖವನ್ನು ಮುಚ್ಚಿಕೊಂಡಿದ್ದರು.
ಇದಾದ ಕೆಲವೇ ನಿಮಿಷಗಳಲ್ಲಿ ವಾಟಿ ಕುಮಾರಿ ಮತ್ತೆ ಪ್ರತ್ಯಕ್ಷರಾದರು! ಆದರೆ ಈ ಬಾರಿ ಅವರು ಹಸಿರು ಬಣ್ಣದ ಸಲ್ವಾರ್ ಸೂಟ್ ಧರಿಸಿದ್ದರು. ದುಪಟ್ಟಾದಿಂದ ಮುಖ ಮುಚ್ಚಿಕೊಂಡೇ ಶಾಸಕ ಜವಾಹರ್ ಸಿಂಗ್ ಬೆಧಮ್ ಅವರ ಜತೆ ಬಂದು ಬಿಜೆಪಿ ಅಭ್ಯರ್ಥಿಯಾಗಿ ಎರಡನೇ ನಾಮಪತ್ರ ಸಲ್ಲಿಸಿದರು. ಮೂರನೇ ಬಾರಿಗೆ ಹಳದಿ ಬಣ್ಣದ ಸೀರೆ ಉಟ್ಟು ಬಂದ ಕುಮಾರಿ, ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಆದರೆ, ಈ ಬಾರಿ ಅವರು ತಮ್ಮ ಮುಖವನ್ನು ಮುಚ್ಚಿಕೊಂಡಿರಲಿಲ್ಲ.
ಒಂದೇ ಪಕ್ಷದ ಟಿಕೆಟ್‌ನಿಂದ ಸ್ಪರ್ಧಿಸಿದರೆ ಗೆಲ್ಲುವ ಬಗ್ಗೆ ವಾಟಿ ಕುಮಾರಿ ಅವರಿಗೆ ಅಷ್ಟಾಗಿ ವಿಶ್ವಾಸವಿರಲಿಲ್ಲವಂತೆ. ಹೀಗಾಗಿ, ಯಾವುದಾದರೂ ಒಂದು ದಾರಿ ಕೈಹಿಡಿಯಲಿ ಎಂಬ ಲೆಕ್ಕಾಚಾರದಲ್ಲಿ ಅವರು ಮೂರು ನಾಮಪತ್ರಗಳನ್ನು ಸಲ್ಲಿಸಿದ್ದರು.
ಅಂತಿಮವಾಗಿ ಈ ವಾಟಿ ಕುಮಾರಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಭರ್ಜರಿ ಜಯ ಸಾಧಿಸಿದ್ದಾರೆ. ಇವರಿಗೆ ಬಿಜೆಪಿಯೂ ಬೆಂಬಲ ನೀಡಿತ್ತು ಎನ್ನಲಾಗಿದ್ದು, ಗೆಲುವಿನ ಪ್ರಮಾಣಪತ್ರವನ್ನೂ ಪಡೆದುಕೊಂಡಿದ್ದಾರೆ.
ಚುನಾವಣಾ ನಿಯಮಗಳ ಪ್ರಕಾರ, ಒಬ್ಬ ಅಭ್ಯರ್ಥಿ ಒಂದೇ ವಾರ್ಡ್ ಅಥವಾ ಕ್ಷೇತ್ರಕ್ಕೆ ಗರಿಷ್ಠ ನಾಲ್ಕು ನಾಮಪತ್ರಗಳನ್ನು ಸಲ್ಲಿಸಲು ಅವಕಾಶವಿದೆ. ಆದರೆ, ಅಂತಿಮವಾಗಿ ಕೇವಲ ಒಂದು ರಾಜಕೀಯ ಪಕ್ಷವನ್ನು ಮಾತ್ರ ಪ್ರತಿನಿಧಿಸಬಹುದು ಅಥವಾ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಬಹುದೆಂದು ನಿಯವಿದೆ. ಹೀಗಾಗಿ ವಾಟಿ ಕುಮಾರಿ ಗೆಲುವಿನಲ್ಲಿ ಏನೂ ಲೋಪ ಕಂಡುಬಂದಿಲ್ಲ. ಆದರೆ, ಈಗ ಉಪಯೋಗಿಸಿರುವ ತಂತ್ರ ಮಾತ್ರ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ, (ಏಜೆನ್ಸೀಸ್).