

ನವದೆಹಲಿ: ಬೆಳಗಿನ ವ್ಯಾಯಾಮದ ನಡಿಗೆ ಮುಗಿಸಿ ನೆಮ್ಮದಿಯಾಗಿ ಮನೆಗೆ ಮರಳುತ್ತಿದ್ದ ಹಿರಿಯ ದಂಪತಿ ಮೇಲೆ ಅತಿವೇಗದಲ್ಲಿ ಕಾರೊಂದು ಅಪ್ಪಳಿಸಿರುವ ಭಯಾನಕ ಘಟನೆ ಪಶ್ಚಿಮ ದೆಹಲಿಯ ಕೀರ್ತಿ ನಗರದಲ್ಲಿ ನಡೆದಿದೆ. ಇಬ್ಬರು ಹಿರಿಯ ಜೀವಗಳು ರಸ್ತೆಯಲ್ಲಿ ಗಾಳಿಯಲ್ಲಿ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ಮೂಡಿಸಿದೆ.
ಪೊಲೀಸ್ ಮೂಲಗಳ ಮಾಹಿತಿಯ ಪ್ರಕಾರ, ದಯಾನಂದ್ ಟಂಗ್ರಾ (79) ಹಾಗೂ ಅವರ ಧರ್ಮಪತ್ನಿ ಕುಸುಮ್ ಟಂಗ್ರಾ (71) ಗಾಯಗೊಂಡ ದಂಪತಿಗಳಾಗಿದ್ದಾರೆ. ಇವರು ಕೀರ್ತಿ ನಗರದ ಆರ್ಯ ಸಮಾಜ ಮಂದಿರದ ಬಳಿ ಎಂದಿನಂತೆ ತಮ್ಮ ಬೆಳಗಿನ ನಡಿಗೆಯನ್ನು ಮುಗಿಸಿ ಬೆಳಿಗ್ಗೆ 9:30ರ ಸುಮಾರಿಗೆ ಮನೆಗೆ ಹಿಂತಿರುಗುತ್ತಿದ್ದರು.
ಆಗ ಅದೇ ರಸ್ತೆಯಲ್ಲಿ ಬಂದ ಬಿಳಿ ಬಣ್ಣದ ಹ್ಯುಂಡೈ ಕ್ರೆಟಾ ಕಾರು, ಇವರಿಬ್ಬರಿಗೂ ಹಿಂದಿನಿಂದ ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ. ಈ ಡಿಕ್ಕಿಯ ರಭಸ ಎಷ್ಟು ಭೀಕರವಾಗಿತ್ತೆಂದರೆ, ದಂಪತಿ ಇಬ್ಬರೂ ಗಾಳಿಯಲ್ಲಿ ಹಾರಿ ದೂರಕ್ಕೆ ಬಿದ್ದಿದ್ದಾರೆ. ಪತ್ನಿ ಕುಸುಮ್ ವಿದ್ಯುತ್ ಕಂಬದ ಬಳಿ ಬಿದ್ದರೆ, ಪತಿ ದಯಾನಂದ್ ರಸ್ತೆಯ ಮತ್ತೊಂದು ಕಡೆಗೆ ಬಿಸಾಡಲ್ಪಟ್ಟಿದ್ದಾರೆ.
ಅಪಘಾತದ ನಂತರ ಕಾರು ನಿಂತಿದ್ದು, ಚಾಲಕಿಯ ವಿಕೃತಿ ಸಿಸಿಟಿವಿಯಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ. ರಸ್ತೆಯಲ್ಲಿ ವೃದ್ಧ ದಂಪತಿ ರಕ್ತದ ಮಡುವಿನಲ್ಲಿ ನರಳುತ್ತಿದ್ದರೂ, ಕಾರಿನಿಂದ ಹೊರಬಂದು ಸಹಾಯ ಮಾಡದ ಮಹಿಳೆ, ಕೆಲ ಕಾಲ ಅಲ್ಲಿಯೇ ನಿಂತು, ನಂತರ ಕಾರನ್ನು ಹತ್ತಿ ಸ್ಥಳದಿಂದ ಎಸ್ಕೇಪ್ ಆಗಿದ್ದಾಳೆ. ಸ್ಥಳೀಯರು ಧಾವಿಸಿ ಬಂದು ಗಾಯಾಳುಗಳನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಘಟನೆಯ ಕುರಿತು ಮಾತನಾಡಿದ ಪಶ್ಚಿಮ ವಲಯದ ಪೊಲೀಸ್ ಉಪ ಆಯುಕ್ತ ಹರೇಶ್ವರ್ ವಿ. ಸ್ವಾಮಿ, ಚಾಲಕಿ ನವ್ಲೀನ್ ಕೌರ್ (49) ಎಂಬ ಗೃಹಿಣಿಯನ್ನು ಗುರುತಿಸಿ ಈಗಾಗಲೇ ಬಂಧಿಸಲಾಗಿದೆ. ಅಪಘಾತಕ್ಕೆ ಬಳಸಿದ ಕ್ರೆಟಾ ಕಾರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ. ಕೀರ್ತಿ ನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 281ರ ಅಡಿಯಲ್ಲಿ ಅಜಾಗರೂಕ ಚಾಲನೆ ಮತ್ತು ಜೀವಕ್ಕೆ ಅಪಾಯ ತಂದಿಟ್ಟ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಲಾಗಿದೆ.
ಈ ಸಂಪೂರ್ಣ ಅಪಘಾತದ ದೃಶ್ಯಾವಳಿಗಳು ರಸ್ತೆ ಬದಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಾಟ್ಸಾಪ್ ಮತ್ತು ಎಕ್ಸ್ ಸೇರಿದಂತೆ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ರಸ್ತೆಗಳಲ್ಲಿ ವಾಹನ ಚಾಲನೆ ಮಾಡುವಾಗ ಈ ರೀತಿಯ ಬೇಜವಾಬ್ದಾರಿತನ ಮತ್ತು ನಿರ್ಲಕ್ಷ್ಯತನದಿಂದಾಗಿ ಅಮಾಯಕ ಹಿರಿಯ ನಾಗರಿಕರ ಪ್ರಾಣಕ್ಕೆ ಕುತ್ತು ಬರುತ್ತಿರುವುದಕ್ಕೆ ನೆಟ್ಟಿಗರು ಕಮೆಂಟ್‌ಗಳ ಮೂಲಕ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ, (ಏಜೆನ್ಸೀಸ್).