ಗೋವಾ ಬೆನ್ನಲ್ಲೇ ಬಂಗಾಳದಲ್ಲೂ ಬಿಸ್ಲೆರಿಗೆ ಶಾಕ್: ಬಿಸ್ಲೆರಿ ನೀರಿನ ಬಾಟಲಿಯಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾ ಪತ್ತೆ; ಕಾನೂನು ಕ್ರಮಕ್ಕೆ FSSAI ಮುಂದು

ಗೋವಾ ಬೆನ್ನಲ್ಲೇ ಬಂಗಾಳದಲ್ಲೂ ಬಿಸ್ಲೆರಿಗೆ ಶಾಕ್: ಬಿಸ್ಲೆರಿ ನೀರಿನ ಬಾಟಲಿಯಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾ ಪತ್ತೆ; ಕಾನೂನು ಕ್ರಮಕ್ಕೆ FSSAI ಮುಂದು
Published on: 
  • ಪಶ್ಚಿಮ ಬಂಗಾಳದ ಜಲ್ಪೈಗುರಿ ಘಟಕದ ಬಿಸ್ಲೆರಿ ನೀರಿನ ಮಾದರಿಯಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾ ಪತ್ತೆ.

  • ಪ್ರಾಥಮಿಕ ಮತ್ತು ರೆಫರಲ್ ಆಹಾರ ಪ್ರಯೋಗಾಲಯಗಳೆರಡೂ ನೀರಿನಲ್ಲಿ ಬ್ಯಾಕ್ಟೀರಿಯಾ ಇರುವುದು ದೃಢಪಡಿಸಿವೆ.

  • ಕಳಪೆ ಗುಣಮಟ್ಟದ ಹಿನ್ನೆಲೆಯಲ್ಲಿ ಆಗಸ್ಟ್ 12ರಂದೇ 'PB 201' ಬ್ಯಾಚ್‌ನ ನೀರಿನ ಮಾರಾಟವನ್ನು ನಿಷೇಧಿಸಲಾಗಿತ್ತು ಎನ್ನಲಾಗಿದೆ.

ಕೋಲ್ಕತ್ತಾ: ದೇಶದ ಪ್ರಮುಖ ಪ್ಯಾಕೇಜ್ಡ್ ಕುಡಿಯುವ ನೀರಿನ ಬ್ರ್ಯಾಂಡ್ 'ಬಿಸ್ಲೆರಿ ಸಂಸ್ಥೆಗೆ ಸದ್ಯ ಮತ್ತೊಂದು ಸಂಕಷ್ಟ ಎದುರಾಗಿದೆ. ಹೌದು, ಪಶ್ಚಿಮ ಬಂಗಾಳದ ಘಟಕದಿಂದ ಸಂಗ್ರಹಿಸಲಾದ ಬಿಸ್ಲೆರಿ ನೀರಿನ ಮಾದರಿಯಲ್ಲಿ ಅಪಾಯಕಾರಿ 'ಕೋಲಿಫಾರ್ಮ್ ಬ್ಯಾಕ್ಟೀರಿಯಾ' ಪತ್ತೆಯಾಗಿದ್ದು, ಕಂಪನಿ ವಿರುದ್ಧ ಕಾನೂನು ಕ್ರಮ ಜರಿಗಿಸುವಂತೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್​​​ಎಸ್​ಎಸ್​​ಎಐ) ಅನುಮತಿ ಕೊಟ್ಟಿದೆ.

ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯ ತೆಲಿಪಾರಾ ಗ್ರಾಮದಲ್ಲಿರುವ ಬಿಸ್ಲೆರಿ ಉತ್ಪಾದನಾ ಘಟಕದಿಂದ ನೀರಿನ ಮಾದರಿ ಸಂಗ್ರಹಿಸಲಾಗಿತ್ತು. ಪ್ರಾಥಮಿಕ ಪ್ರಯೋಗಾಲಯ ಮತ್ತು ರೆಫರಲ್ ಆಹಾರ ಪ್ರಯೋಗಾಲಯಗಳೆರಡೂ ಈ ಮಾದರಿಯಲ್ಲಿ ಕೋಲಿಫಾರ್ಮ್ ಬ್ಯಾಕ್ಟೀರಿಯಾ ಇದೆ ಎನ್ನುವುದನ್ನು ದೃಢಪಡಿಸಿದೆ. ಒಳಚರಂಡಿ ಸೋರಿಕೆ ಅಥವಾ ಹಾನಿಗೊಳಗಾದ ಪೈಪ್‌ಗಳ ಮೂಲಕ ಈ ರೀತಿಯ ಬ್ಯಾಕ್ಟೀರಿಯಾಗಳು ನೀರಿನ ವ್ಯವಸ್ಥೆಯನ್ನು ಪ್ರವೇಶಿಸುವ ಸಾಧ್ಯತೆಯಿರುತ್ತದೆ ಎಂದು ಮೂಲಗಳು ಹೇಳಿವೆ.

ಕಾನೂನು ಕ್ರಮಕ್ಕೆ FSSAI ಮುಂದು

ಜಲ್ಪೈಗುರಿಯ ತೇಲಿಪಾರಾ ಗ್ರಾಮದಲ್ಲಿರುವ ಘಟಕದಿಂದ ಸಂಗ್ರಹಿಸಲಾದ ಮಾದರಿಯಲ್ಲಿ ಕೋಲಿಫಾರ್ಮ್ ಬ್ಯಾಕ್ಟೀರಿಯಾ ಇರುವುದನ್ನು ಪ್ರಾಥಮಿಕ ಮತ್ತು ರೆಫರಲ್ ಪ್ರಯೋಗಾಲಯಗಳೆರಡೂ ದೃಢಪಡಿಸಿವೆ. ಈ ಹಿನ್ನೆಲೆಯಲ್ಲಿ, 2026 ಆಗಸ್ಟ್12 ರಂದು ಎಫ್‌ಎಸ್‌ಎಸ್‌ಎಐ ಕೇವಲ ಒಂದು ನಿರ್ದಿಷ್ಟ ಬ್ಯಾಚ್‌ನ (ಬ್ಯಾಚ್ ಸಂಖ್ಯೆ PB 201) ಮಾರಾಟವನ್ನು ನಿಷೇಧಿಸಿತ್ತು ಎಂದು ಮೂಲಗಳು ವಿವರಿಸಿವೆ.

Also Read
ನಮ್ಮ ಕುಡಿಯುವ ನೀರು ಸುರಕ್ಷಿತವಾಗಿದೆ, FSSAIಯಿಂದ ಇನ್ನು ಯಾವುದೇ ನೋಟಿಸ್ ಸಿಕ್ಕಿಲ್ಲ; ಬಿಸ್ಲೆರಿ ಸ್ಪಷ್ಟನೆ..Bisleri
ಗೋವಾ ಬೆನ್ನಲ್ಲೇ ಬಂಗಾಳದಲ್ಲೂ ಬಿಸ್ಲೆರಿಗೆ ಶಾಕ್: ಬಿಸ್ಲೆರಿ ನೀರಿನ ಬಾಟಲಿಯಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾ ಪತ್ತೆ; ಕಾನೂನು ಕ್ರಮಕ್ಕೆ FSSAI ಮುಂದು

ಗೋವಾ ಘಟಕದ ವಿರುದ್ಧವೂ ಕ್ರಮ

ಗೋವಾದಲ್ಲಿರುವ ಬಿಸ್ಲೆರಿ ಉತ್ಪಾದನಾ ಘಟಕದಿಂದ ಸಂಗ್ರಹಿಸಲಾದ ಪ್ಯಾಕೇಜ್ಡ್ ಕುಡಿಯುವ ನೀರಿನ ಮಾದರಿಗೆ ಸಂಬಂಧಿಸಿದ ಪ್ರತ್ಯೇಕ ಪ್ರಕರಣದಲ್ಲಿ ಕಂಪನಿ ವಿರುದ್ಧ ಕಾನೂನು ಕ್ರಮಕ್ಕೆ FSSAI ಅನುಮತಿ ನೀಡಿದ ಕೆಲವೇ ದಿನಗಳಲ್ಲಿ ಈ ಹೊಸ ಬೆಳವಣಿಗೆ ನಡೆದಿದೆ.

FSSAI ಪ್ರಕಾರ, ಗೋವಾ ಘಟಕದಿಂದ ಸಂಗ್ರಹಿಸಲಾದ ಮಾದರಿಯು ನಿಗದಿತ 'ಬ್ರೋಮೇಟ್' ಮಿತಿಯನ್ನು ಕಾಯ್ದುಕೊಳ್ಳುವಲ್ಲಿ ವಿಫಲವಾಗಿತ್ತು ಮತ್ತು ಆಹಾರ ಸುರಕ್ಷತೆ ಕಾಯ್ದೆಯಡಿ ಅದನ್ನು ಅಸುರಕ್ಷಿತ ಎಂದು ಘೋಷಿಸಲಾಗಿತ್ತು. ಕಂಪನಿಯ ಮೇಲ್ಮನವಿಯ ಮೇರೆಗೆ ಮಾದರಿಯನ್ನು ರೆಫರಲ್ ಪ್ರಯೋಗಾಲಯಕ್ಕೆ ಕಳುಹಿಸಿದಾಗ, ಅಲ್ಲಿ 'ಪಾಲಿನ್ಯೂಕ್ಲಿಯರ್ ಆರೊಮ್ಯಾಟಿಕ್ ಹೈಡ್ರೋಕಾರ್ಬನ್‌ಗಳು' ಪತ್ತೆಯಾದ ಕಾರಣ ಅದನ್ನು ಅಸುರಕ್ಷಿತ ಎಂದು ಘೋಷಿಸಲಾಯಿತು. ಇದರ ಆಧಾರದ ಮೇಲೆ ಕಂಪನಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲಾಗಿತ್ತು.

ಬಿಸ್ಲೆರಿ ಕಂಪನಿಯ ಸ್ಪಷ್ಟನೆ ಏನು?

ನಮ್ಮ ಪ್ಯಾಕೇಜ್ಡ್ ಕುಡಿಯುವ ನೀರು ಸೇವನೆಗೆ ಸಂಪೂರ್ಣ ಸುರಕ್ಷಿತವಾಗಿದೆ. ಗೋವಾ ಘಟಕದಲ್ಲಿ 2025ರ ಸೆಪ್ಟೆಂಬರ್‌ನಲ್ಲಿ ತಯಾರಾದ ಒಂದೇ ಒಂದು ಬ್ಯಾಚ್‌ಗೆ ಮಾತ್ರ ಈ ಸಮಸ್ಯೆ ಸೀಮಿತವಾಗಿತ್ತು. 2025ರ ಸೆಪ್ಟೆಂಬರ್ 30ರಂದು FSSAI ಗೋವಾ ಘಟಕದಿಂದ ಆರು ಮಾದರಿಗಳನ್ನು ಸಂಗ್ರಹಿಸಿತ್ತು. ಆರಂಭಿಕ ಪರೀಕ್ಷೆಯಲ್ಲಿ ಐದು ಮಾದರಿಗಳು ಎಲ್ಲಾ ಮಾನದಂಡಗಳನ್ನು ಪೂರೈಸಿದ್ದರೆ, ಆರನೇ ಮಾದರಿಯಲ್ಲಿ ನಿಗದಿತ 10 ಮೈಕ್ರೋಗ್ರಾಂಗಳ ಮಿತಿಗೆ ಬದಲಾಗಿ ಪ್ರತಿ ಲೀಟರ್‌ಗೆ 12 ಮೈಕ್ರೋಗ್ರಾಂ ಬ್ರೋಮೇಟ್ ದಾಖಲಾಗಿತ್ತು ಎಂದು ಪ್ರಕಟಣೆಯಲ್ಲಿ ವಿವರಿಸಿತ್ತು.

ಮೇಲ್ಮನವಿಯ ನಂತರ ರೆಫರಲ್ ಪ್ರಯೋಗಾಲಯವು ಬ್ರೋಮೇಟ್ ಮಟ್ಟವು ನಿಗದಿತ ಮಿತಿಯಲ್ಲೇ ಇದೆ ಎಂದು ಕಂಡುಹಿಡಿದರೂ, ಪ್ರತ್ಯೇಕವಾಗಿ PAHs ಇರುವಿಕೆಯನ್ನು ಗುರುತಿಸಿತ್ತು. ತಮಗೆ FSSAI ನಿಂದ ಯಾವುದೇ ನೋಟಿಸ್ ಬಂದಿರಲಿಲ್ಲ ಮತ್ತು ತಾವು FSSAI-ಅನುಮೋದಿತ ಪ್ರಯೋಗಾಲಯದಲ್ಲಿ ಅದೇ ಮಾದರಿಯನ್ನು ಪರೀಕ್ಷಿಸಿದಾಗ ಬ್ರೋಮೇಟ್ ಮಟ್ಟವು ಅನುಮತಿಸಲಾದ ಮಿತಿಯಲ್ಲೇ ಇತ್ತು. ಈ ಸ್ವತಂತ್ರ ಪರೀಕ್ಷಾ ವರದಿಯನ್ನು 2026ರ ಫೆಬ್ರವರಿ 2ರಂದು FSSAI ನ ಪಶ್ಚಿಮ ಪ್ರಾದೇಶಿಕ ಕಚೇರಿಗೆ ಸಲ್ಲಿಸಲಾಗಿತ್ತು. ಆ ಬಳಿಕ ಯಾವುದೇ ಸಂವಹನ ಬಾರದ ಕಾರಣ ಪ್ರಕರಣ ಮುಕ್ತಾಯಗೊಂಡಿದೆ ಎಂದು ಭಾವಿಸಲಾಗಿತ್ತು ಎಂದು ಬಿಸ್ಲೆರಿ ತನ್ನ ಪ್ರಕಟಣೆಯಲ್ಲಿ ತಿಳಿಸಿತ್ತು, (ಏಜೆನ್ಸೀಸ್).