ವರದಿಗೆ ಹೋಗುವಾಗ ಈ ತಪ್ಪುಗಳನ್ನು ಮಾಡ್ಲೇಬೇಡಿ! ಫೀಲ್ಡ್ ರಿಪೋರ್ಟರ್‌ಗಳ ಸೇಫ್ಟಿಗೆ ಪ್ರೆಸ್​​ ಕೌಂನ್ಸಿಲ್​​ ಹೊಸ ರೂಲ್ಸ್! Field Reporting

ದೆಹಲಿ ಪ್ರತಿಭಟನೆ ಬೆನ್ನಲ್ಲೇ ಫೀಲ್ಡ್ ರಿಪೋರ್ಟರ್‌ಗಳ ಸುರಕ್ಷತೆಗೆ PCI ಖಡಕ್ ಗೈಡ್‌ಲೈನ್ಸ್ ಬಿಡುಗಡೆ ಮಾಡಿದೆ. ಗ್ರೌಂಡ್ ರಿಪೋರ್ಟಿಂಗ್ ವೇಳೆ ಪಾಲಿಸಬೇಕಾದ ನಿಯಮಗಳು ಮತ್ತು ಎಮರ್ಜೆನ್ಸಿ ಕಿಟ್ ಮಾಹಿತಿ ಇಲ್ಲಿದೆ.
Press Council of India Journalist Safety Guidelines
ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಪತ್ರಕರ್ತರ ಸುರಕ್ಷತಾ ಮಾರ್ಗಸೂಚಿ
Published on: 

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಪ್ರತಿಭಟನೆಗಳು ಹಿಂಸಾತ್ಮಕ ರೂಪ ಪಡೆಯುತ್ತಿದ್ದು, ಗ್ರೌಂಡ್ ರಿಪೋರ್ಟಿಂಗ್ ಮಾಡೋದು ಕತ್ತಿ ಮೇಲಿನ ನಡಿಗೆಯಂತಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ, ದೆಹಲಿಯಲ್ಲಿ ನಡೆಯುತ್ತಿರುವ ಎಸ್​ಐಆರ್​​ ವಿರೋಧಿ ಪ್ರತಿಭಟನೆ ನೇರ ಸಾಕ್ಷಿಯಾಗಿದೆ. ಈ ಹಿನ್ನಲೆ ಭಾರತೀಯ ಪತ್ರಿಕಾ ಮಂಡಳಿ (ಪಿಸಿಐ) ಪತ್ರಕರ್ತರಿಗೆ ಮಹತ್ವದ ಮುನ್ನೆಚ್ಚರಿಕೆ ಹಾಗೂ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ದೆಹಲಿ ಪ್ರತಿಭಟನೆಯಲ್ಲಿ ಆಗಿದ್ದೇನು?

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಮತ್ತು ಮತದಾರರ ಪಟ್ಟಿಯ ಪರಿಷ್ಕರಣೆ (SIR) ವಿರೋಧಿಸಿ ದೆಹಲಿಯಲ್ಲಿ ಸಾವಿರಾರು ಜನ ಬೀದಿಗಿಳಿದಿದ್ದರು. ಪರಿಸ್ಥಿತಿ ತಾರಕಕ್ಕೇರಿದ ಹಿನ್ನಲೆ ಇಂಟರ್ನೆಟ್ ಸ್ಥಗಿತಗೊಳಿಸಲಾಗಿದ್ದು, ಮೆಟ್ರೋ ನಿಲ್ದಾಣಗಳನ್ನು ಬಂದ್​ ಮಾಡಲಾಗಿತ್ತು. ಸುಮಾರು 40 ಸಾವಿರ ಭದ್ರತಾ ಸಿಬ್ಬಂದಿ ಇಡೀ ದೆಹಲಿಯನ್ನು ಕೋಟೆಯಂತೆ ಸುತ್ತುವರಿದರು. ಈ ವೇಳೆ ವರದಿ ಮಾಡುತ್ತಿದ್ದ 12ಕ್ಕೂ ಹೆಚ್ಚು ಪತ್ರಕರ್ತರನ್ನು ಸಹ ಪೊಲೀಸರು ವಶಕ್ಕೆ ಪಡೆದಿದ್ದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಈ ಬೆಳವಣಿಗೆಯಿಂದ ಎಚ್ಚೆತ್ತ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ, ಫೀಲ್ಡ್‌ನಲ್ಲಿರೋ ರಿಪೋರ್ಟರ್‌ಗಳು ಮತ್ತು ಕ್ಯಾಮೆರಾಮ್ಯಾನ್‌ಗಳ ಸೇಫ್ಟಿಗಾಗಿ ಖಡಕ್ ರೂಲ್ಸ್‌ಗಳನ್ನು ಮುಂದಿಟ್ಟಿದೆ.

ವರದಿಗೆ ಹೋಗುವ ಮುನ್ನ ಈ ತಪ್ಪುಗಳನ್ನು ಮಾಡ್ಲೇಬೇಡಿ!

ಐಡಿ ಕಾರ್ಡ್ ಕಡ್ಡಾಯ: ಮಾಧ್ಯಮ ಸಂಸ್ಥೆ ನೀಡಿದ ಮಾನ್ಯತೆ ಪಡೆದ ಗುರುತಿನ ಚೀಟಿ ಅಥವಾ PIB/DIP ಕಾರ್ಡ್ ಕುತ್ತಿಗೆಯಲ್ಲಿರಬೇಕು.

ತಟಸ್ಥತೆ ಕಾಪಾಡಿ: ಪತ್ರಕರ್ತರು ವರದಿ ಮಾಡಲು ಹೋಗಿದ್ದಾರೆಯೇ ಹೊರತು ಹೋರಾಟ ಮಾಡಲಲ್ಲ. ಯಾವುದೇ ಕಾರಣಕ್ಕೂ ಘೋಷಣೆ ಕೂಗುವುದು, ಪ್ರತಿಭಟನಾಕಾರರ ಪರ ನಿಲ್ಲುವುದು ಅಥವಾ ಪೊಲೀಸರ ಜೊತೆ ಜಗಳಕ್ಕೆ ಇಳಿಯುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಪೊಲೀಸ್ ವಾಹನ, ಬ್ಯಾರಿಕೇಡ್‌ಗೆ ಕ್ಯಾಮೆರಾ ಕಟ್ಟಬೇಡಿ: ಟ್ರಾಫಿಕ್ ಸಮಸ್ಯೆ ತಂದೊಡ್ಡುವಂತೆ ಅಥವಾ ಕಾರ್ಯಾಚರಣೆಗೆ ಅಡ್ಡಿಪಡಿಸುವಂತೆ ಪೊಲೀಸ್ ವಾಹನ, ಬ್ಯಾರಿಕೇಡ್‌ಗಳಿಗೆ ಕ್ಯಾಮೆರಾ ಅಥವಾ ರೆಕಾರ್ಡಿಂಗ್ ಮೈಕ್ ಸಿಕ್ಕಿಸುವುದನ್ನು ತಪ್ಪಿಸಬೇಕು.

ಅಪಾಯಕಾರಿ ವಸ್ತುಗಳನ್ನು ಮುಟ್ಟಬೇಡಿ: ರಸ್ತೆಗೆ ಬಿದ್ದಿರೋ ಟಿಯರ್ ಗ್ಯಾಸ್, ಹೊಗೆ ಗ್ರೆನೇಡ್‌ಗಳನ್ನು ಕೈಯಿಂದ ಮುಟ್ಟುವ ಅಥವಾ ಕಾಲಿನಿಂದ ಒದೆಯುವ ದುಸ್ಸಾಹಸಕ್ಕೆ ಯಾರೂ ಕೈಹಾಕಬಾರದು.

Also Read
ನಾಯಕತ್ವ ಸಿಗದೆ ಕುಮಾರಸ್ವಾಮಿ ಹತಾಶರಾಗಿದ್ದಾರೆ: ಹೆಚ್​ಡಿಕೆ ವಿರುದ್ಧ ಹರಿಹಾಯ್ದ ಪ್ರಿಯಾಂಕ್​ ಖರ್ಗೆ! Priyank Kharge
Press Council of India Journalist Safety Guidelines

ಬ್ಯಾಗ್‌ನಲ್ಲಿ ಏನಿರಬೇಕು?

ಪರಿಸ್ಥಿತಿ ಕೈಮೀರಿದಾಗ ಬರೀ ಮೈಕ್ ಹಿಡಿದುಕೊಂಡಿದ್ದರೆ ಸಾಲದು. ಪತ್ರಕರ್ತರ ಬ್ಯಾಗ್‌ನಲ್ಲಿ ಪ್ರಾಥಮಿಕ ಚಿಕಿತ್ಸಾ ಬಾಕ್ಸ್, ಕುಡಿಯುವ ನೀರು, ಪ್ರೋಟೀನ್ ಸ್ನ್ಯಾಕ್ಸ್, ಟಾರ್ಚ್, ಕಣ್ಣಿಗೆ ಪ್ರೊಟೆಕ್ಟಿವ್ ಗ್ಲಾಸ್ ಮತ್ತು ಮುಖ ತೊಳೆಯಲು ಟವೆಲ್ ಇಟ್ಟುಕೊಳ್ಳಲೇಬೇಕು. ಕಲ್ಲು ತೂರಾಟ, ಲಾಠಿಚಾರ್ಜ್ ನಡೀತಿರೋ ಜಾಗದಲ್ಲಿದ್ದರೆ ಹೆಲ್ಮೆಟ್ ಮತ್ತು ಜಾಕೆಟ್ ಧರಿಸುವುದು ಕಡ್ಡಾಯ ಎಂದಿದ್ದಾರೆ.

ಓಡಿಹೋಗಲು ದಾರಿ ಹುಡುಕಿ ಇಟ್ಕೊಳ್ಳಿ!

ಪ್ರತಿಭಟನೆಯ ಮಧ್ಯೆ ಸಿಲುಕಿಕೊಳ್ಳುವ ಮುನ್ನವೇ ಅಲ್ಲಿಂದ ಹೊರಬರಲು ಇರುವ ಪರ್ಯಾಯ ರಸ್ತೆಗಳು, ಓಣಿಗಳು ಮತ್ತು ಸುರಕ್ಷಿತ ಜಾಗಗಳನ್ನು ಮೊದಲೇ ನೋಡಿಟ್ಟುಕೊಳ್ಳಬೇಕು. ಗುಂಪಿನ ನಡವಳಿಕೆ ಬದಲಾಗುತ್ತಿದ್ದಂತೆ ತಕ್ಷಣವೇ ಸುರಕ್ಷಿತ ಅಂತರ ಕಾಪಾಡಿಕೊಳ್ಳಬೇಕು ಎಂದು ಪಿಸಿಐ ಸ್ಪಷ್ಟವಾಗಿ ಹೇಳಿದೆ.

ನ್ಯೂಸ್ ರೂಮ್‌ಗಳಿಗೂ ಖಡಕ್ ವಾರ್ನಿಂಗ್!

ಕೇವಲ ಫೀಲ್ಡ್ ರಿಪೋರ್ಟರ್‌ಗಳಷ್ಟೇ ಅಲ್ಲ, ಆಫೀಸ್‌ನಲ್ಲಿ ಕೂರುವ ಸುದ್ದಿ ಸಂಸ್ಥೆಗಳೂ ಜವಾಬ್ದಾರಿಯಿಂದ ವರ್ತಿಸಬೇಕು. ಗ್ರೌಂಡ್‌ಗೆ ಕಳುಹಿಸಿದ ಪತ್ರಕರ್ತರು ಎಲ್ಲಿ ಹೋಗುತ್ತಿದ್ದಾರೆ, ಯಾವಾಗ ವಾಪಸ್ ಬರುತ್ತಾರೆ ಎಂಬುದನ್ನು ಟ್ರ್ಯಾಕ್ ಮಾಡಲು ಪ್ರತ್ಯೇಕ ಅಧಿಕಾರಿಯನ್ನು ನೇಮಿಸಬೇಕು. ಫ್ರೀಲ್ಯಾನ್ಸ್ ಪತ್ರಕರ್ತರು ಕೂಡ ತಮ್ಮ ಲೊಕೇಶನ್ ಅನ್ನು ಸಂಪಾದಕರಿಗೆ ಅಪ್ಡೇಟ್ ಮಾಡುತ್ತಿರಬೇಕು ಎಂದು ತಿಳಿಸಲಾಗಿದೆ.

ಯಾವುದೇ ದೃಶ್ಯ ಸಿಕ್ಕಿತು ಎಂದು ಲೈವ್‌ನಲ್ಲಿ ಪೊಲೀಸರ ರಹಸ್ಯ ಚಲನವಲನಗಳನ್ನು ತೋರಿಸುವುದು, ಗಾಯಗೊಂಡವರು ಅಥವಾ ಅಪ್ರಾಪ್ತರ ಗುರುತು ಬಹಿರಂಗಪಡಿಸುವುದನ್ನು ನಿಲ್ಲಿಸಿ, ಸತ್ಯಾಸತ್ಯತೆಯನ್ನು ಪರಿಶೀಲಿಸಿದ ಮೇಲೆಯೇ ಸುದ್ದಿ ಪ್ರಸಾರ ಮಾಡಬೇಕೆಂದು ಪಿಸಿಐ ಎಚ್ಚರಿಕೆ ನೀಡಿದೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net