ಟ್ರಂಪ್​ ಸರ್ಕಾರದಿಂದ ಮತ್ತೊಂದು 'ಟಾರೀಫ್​ ಬಾಂಬ್': ಭಾರತ, ಚೀನಾ ಸೇರಿ 16 ದೇಶಗಳ ಮೇಲೆ ಬೀಳಲಿದೆ ಸುಂಕದ ಬರೆ! Trump Tariffs

The Donald Trump administration is preparing to impose new tariffs on 16 countries, including India and China.
ಭಾರತ ಮತ್ತು ಚೀನಾ ಸೇರಿದಂತೆ 16 ದೇಶಗಳ ಮೇಲೆ ಹೊಸ ಸುಂಕಗಳನ್ನು ವಿಧಿಸಲು ಡೊನಾಲ್ಡ್ ಟ್ರಂಪ್ ಆಡಳಿತ ಸಿದ್ಧತೆ ನಡೆಸಿದೆ.
Published on: 

ವಾಷಿಂಗ್ಟನ್: ಭಾರತ ಮತ್ತು ಚೀನಾ ಸೇರಿದಂತೆ ಹಲವು ಪ್ರಮುಖ ದೇಶಗಳಿಗೆ ಅಮೆರಿಕ ಭರ್ಜರಿ ಆರ್ಥಿಕ ಹೊಡೆತ ನೀಡಲು ಸಿದ್ಧತೆ ನಡೆಸಿದೆ. ಅಮೆರಿಕದ ತಯಾರಕರಿಗೆ ನಷ್ಟ ಉಂಟುಮಾಡುವ ರೀತಿಯಲ್ಲಿ ಆಯಾ ದೇಶಗಳು ತಮ್ಮ ದೇಶೀಯ ಕೈಗಾರಿಕೆಗಳಿಗೆ ಸಬ್ಸಿಡಿಗಳನ್ನು ನೀಡುತ್ತಿವೆ ಎಂದು ಆರೋಪಿಸಿ, ಅಮೆರಿಕ ಹೊಸದಾಗಿ ಹೆಚ್ಚಿನ ಸುಂಕಗಳನ್ನು ವಿಧಿಸಲು ಮುಂದಾಗಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.

ಡೊನಾಲ್ಡ್ ಟ್ರಂಪ್ ಆಡಳಿತದ ಈ ಹಠಾತ್ ನಿರ್ಧಾರದಿಂದಾಗಿ ಭಾರತ, ಚೀನಾ ಮತ್ತು ಯುರೋಪಿಯನ್ ಒಕ್ಕೂಟದ ದೇಶಗಳಿಂದ ಅಮೆರಿಕಕ್ಕೆ ರಫ್ತಾಗುವ ಹಲವು ವಸ್ತುಗಳ ಬೆಲೆ ಗಗನಕ್ಕೇರಲಿದ್ದು, ಜಾಗತಿಕ ವ್ಯಾಪಾರ ವಲಯದಲ್ಲಿ ತಲ್ಲಣ ಸೃಷ್ಟಿಯಾಗಿದೆ.

ಏನಿದು ವಿವಾದ? ಅಮೆರಿಕದ ಆರೋಪವೇನು?

ಅಮೆರಿಕದ ವ್ಯಾಪಾರ ಪ್ರತಿನಿಧಿ (USTR) ಜೇಮಿಸನ್ ಗ್ರೀರ್ ನೇತೃತ್ವದಲ್ಲಿ ಚೀನಾ, ಯುರೋಪಿಯನ್ ಒಕ್ಕೂಟ ಮತ್ತು ಇತರ 14 ದೇಶಗಳಲ್ಲಿನ ಕೈಗಾರಿಕಾ ಸಬ್ಸಿಡಿಗಳ ಕುರಿತು ತಿಂಗಳುಗಟ್ಟಲೆ ತನಿಖೆ ನಡೆಸಲಾಗಿತ್ತು. ಈ ತನಿಖೆಯ ವರದಿಯ ಪ್ರಕಾರ, ಭಾರತ, ಚೀನಾ, ಜಪಾನ್ ಮತ್ತು ದಕ್ಷಿಣ ಕೊರಿಯಾದಂತಹ ದೇಶಗಳು ತಮ್ಮ ದೇಶದ ಕಂಪನಿಗಳಿಗೆ ಅತಿಯಾದ ಸಬ್ಸಿಡಿಗಳನ್ನು ನೀಡುತ್ತಿವೆ. ಇದರಿಂದಾಗಿ ಅಮೆರಿಕದ ಸ್ಥಳೀಯ ಕೈಗಾರಿಕೆಗಳಿಗೆ ತೀವ್ರ ಹಾನಿಯಾಗುತ್ತಿದೆ ಎನ್ನುವುದು ಅಮೆರಿಕದ ವಾದವಾಗಿದೆ.

ಅನ್ಯಾಯದ ವ್ಯಾಪಾರ ಪದ್ಧತಿಗಳನ್ನು ತಡೆಯಲು ಅಮೆರಿಕದ ಅಧ್ಯಕ್ಷರಿಗೆ ಏಕಪಕ್ಷೀಯವಾಗಿ ಸುಂಕ ವಿಧಿಸುವ ಅಧಿಕಾರ ನೀಡುವ 1974ರ ವ್ಯಾಪಾರ ಕಾಯಿದೆಯ ಸೆಕ್ಷನ್ 301 ರ ಅಡಿಯಲ್ಲಿ ಈ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ.

Also Read
ದುಬೈನಲ್ಲಿ ಘೋರ ದುರಂತ: ನಿಂತಿದ್ದ ಟ್ರಕ್‌ಗೆ ಬಸ್ ಡಿಕ್ಕಿ; ಭಾರತೀಯರು ಸೇರಿ 13 ಮಂದಿ ದುರ್ಮರಣ; 14 ಜನರ ಸ್ಥಿತಿ ಗಂಭೀರ! UAE Accident
The Donald Trump administration is preparing to impose new tariffs on 16 countries, including India and China.

ಭಾರತದ ಮೇಲಾಗುವ ಪರಿಣಾಮಗಳೇನು?

ಈ ಸುಂಕ ಹೆಚ್ಚಳದ ಬಿಸಿ ಭಾರತದ ಮೇಲೂ ಬೀರಲಿದೆ. ಟ್ರಂಪ್ ಆಡಳಿತದೊಂದಿಗೆ ಭಾರತ ಮಾಡಿಕೊಂಡಿರುವ ವ್ಯಾಪಾರ ಒಪ್ಪಂದಗಳ ಷರತ್ತುಗಳನ್ನು ಆಧರಿಸಿ, ಭಾರತದ ಉತ್ಪನ್ನಗಳ ಮೇಲೂ ಭಾರಿ ಸುಂಕ ವಿಧಿಸುವ ಸಾಧ್ಯತೆಯಿದೆ.

ಆದರೆ, ಉಕ್ಕು, ಅಲ್ಯೂಮಿನಿಯಂ ಮತ್ತು ವಾಹನಗಳಂತಹ ಕೆಲವು ಕೈಗಾರಿಕಾ ಸರಕುಗಳನ್ನು ಸದ್ಯಕ್ಕೆ ಈ ಹೊಸ ಸುಂಕಗಳಿಂದ ಹೊರಗಿಡಬಹುದು ಎನ್ನಲಾಗಿದೆ. ಯುರೋಪಿಯನ್ ಒಕ್ಕೂಟ, ಜಪಾನ್ ಮತ್ತು ದಕ್ಷಿಣ ಕೊರಿಯಾ ದೇಶಗಳು ಶೇಕಡಾ 15 ಅಥವಾ ಅದಕ್ಕಿಂತ ಕಡಿಮೆ ಸುಂಕವನ್ನು ಎದುರಿಸಬಹುದು. ಆದರೆ, ಭಾರತ ಮತ್ತು ವಿಯೆಟ್ನಾಂನಂತಹ ದೇಶಗಳು ಇನ್ನೂ ಹೆಚ್ಚಿನ ದರಗಳನ್ನು ಎದುರಿಸಬೇಕಾಗಬಹುದು ಎಂದು ವರದಿಗಳು ಎಚ್ಚರಿಸಿವೆ.

ಸದ್ಯದಲ್ಲೇ ಅಧಿಕೃತ ಘೋಷಣೆ?

ಸುಪ್ರೀಂ ಕೋರ್ಟ್ ಈ ಹಿಂದೆ ರದ್ದುಗೊಳಿಸಿದ್ದ ಹಳೆಯ ಸುಂಕಗಳ ಜಾಗದಲ್ಲಿ ಹೊಸ ನಿಯಮಗಳನ್ನು ತರಲು ಟ್ರಂಪ್ ಆಡಳಿತ ಮುಂದಾಗಿದ್ದು, ಮಂಗಳವಾರದ ವೇಳೆಗೆ ಹೊಸ ಸುಂಕಗಳ ಅಧಿಕೃತ ಪಟ್ಟಿ ಹೊರಬೀಳುವ ಸಾಧ್ಯತೆಯಿದೆ.

ಆದಾಗ್ಯೂ, ಅಂತಿಮ ಸುಂಕದ ದರಗಳು ಎಷ್ಟು ಇರಲಿವೆ? ಯಾವೆಲ್ಲಾ ಉತ್ಪನ್ನಗಳು ಇದರ ವ್ಯಾಪ್ತಿಗೆ ಬರಲಿವೆ? ಮತ್ತು ಹೊಸ ಸುಂಕಗಳು ಯಾವಾಗ ಜಾರಿಗೆ ಬರಲಿವೆ? ಎಂಬುದು ಇನ್ನೂ ಅಂತಿಮವಾಗಿಲ್ಲ. ಈ ಸೂಕ್ಷ್ಮ ವಿಚಾರದ ಬಗ್ಗೆ ಅಮೆರಿಕದ ವ್ಯಾಪಾರ ಪ್ರತಿನಿಧಿಯ ಕಚೇರಿಯಾಗಲಿ ಅಥವಾ ಶ್ವೇತಭವನವಾಗಲಿ ಸದ್ಯಕ್ಕೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.

ಆದರೆ, ಟ್ರಂಪ್ ಆಡಳಿತದ ಈ ಸುಂಕದ ಅಸ್ತ್ರವು ಜಾಗತಿಕ ಮಾರುಕಟ್ಟೆಯಲ್ಲಿ ಭಾರತ ಹಾಗೂ ಇತರ ದೇಶಗಳ ವ್ಯಾಪಾರದ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ, (ಏಜೆನ್ಸೀಸ್​).