ದುಬೈನಲ್ಲಿ ಘೋರ ದುರಂತ: ನಿಂತಿದ್ದ ಟ್ರಕ್‌ಗೆ ಬಸ್ ಡಿಕ್ಕಿ; ಭಾರತೀಯರು ಸೇರಿ 13 ಮಂದಿ ದುರ್ಮರಣ; 14 ಜನರ ಸ್ಥಿತಿ ಗಂಭೀರ! UAE Accident

Representative image
ಸಾಂದರ್ಭಿಕ ಚಿತ್ರ
Published on: 

ದುಬೈ: ಮಂಗಳವಾರ (ನ.24) ರಾಸ್ ಅಲ್ ಖೈಮಾದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಭಾರತೀಯ ಪ್ರಜೆಗಳು ಸೇರಿದಂತೆ ಬರೋಬ್ಬರಿ 13 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ದುರ್ಘಟನೆಯಲ್ಲಿ 14 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರುವ ಆತಂಕ ಎದುರಾಗಿದೆ.

ಅಪಘಾತ ಸಂಭವಿಸಿದ್ದು ಹೇಗೆ?

ಯುಎಇ ಆಂತರಿಕ ಸಚಿವಾಲಯದ ಮಾಹಿತಿಯಂತೆ, ಮಂಗಳವಾರ ರಾಸ್ ಅಲ್ ಖೈಮಾದ ಅಲ್ ವತನ್ ರಸ್ತೆಯಲ್ಲಿ ಈ ಭಯಾನಕ ಅಪಘಾತ ನಡೆದಿದೆ. 41 ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಬಸ್, ತಾಂತ್ರಿಕ ದೋಷದಿಂದಾಗಿ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಟ್ರಕ್‌ಗೆ ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಬಸ್ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸ್ಥಳದಲ್ಲೇ 11 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಧಾವಿಸಿದ ರಕ್ಷಣಾ ತಂಡಗಳು ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದವು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮತ್ತಿಬ್ಬರು ಕೊನೆಯುಸಿರೆಳೆದಿದ್ದು, ಒಟ್ಟು ಸಾವಿನ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.

ಭಾರತೀಯರಿಗೆ ಸಹಾಯವಾಣಿ ಬಿಡುಗಡೆ!

ಈ ದುರ್ಘಟನೆಯಲ್ಲಿ ಭಾರತೀಯರು ಮೃತಪಟ್ಟಿರುವುದನ್ನು ದುಬೈನಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ಕಚೇರಿ ಖಚಿತಪಡಿಸಿದೆ. ರಾಸ್ ಅಲ್ ಖೈಮಾದಲ್ಲಿ ನಡೆದ ಭೀಕರ ಅಪಘಾತದಲ್ಲಿ ಭಾರತೀಯ ಪ್ರಜೆಗಳು ಸೇರಿದಂತೆ ಹಲವರು ಮೃತಪಟ್ಟಿರುವುದು ತೀವ್ರ ನೋವು ತಂದಿದೆ ಎಂದು ಕಾನ್ಸುಲೇಟ್ ಕಚೇರಿ ಎಕ್ಸ್​ನಲ್ಲಿ ಸಂತಾಪ ಸೂಚಿಸಿದೆ.

ಮೃತಪಟ್ಟವರಲ್ಲಿ ಎಷ್ಟು ಮಂದಿ ಭಾರತೀಯರಿದ್ದಾರೆ ಎಂಬ ನಿಖರ ಮಾಹಿತಿ ಇನ್ನೂ ಹೊರಬಿದ್ದಿಲ್ಲ. ಆದರೆ, ಸಂತ್ರಸ್ತರ ಕುಟುಂಬಸ್ಥರನ್ನು ಈಗಾಗಲೇ ಸಂಪರ್ಕಿಸಲಾಗಿದ್ದು, ಅಗತ್ಯ ನೆರವು ನೀಡಲು ಸ್ಥಳೀಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ತಿಳಿಸಿದೆ. ತುರ್ತು ಮಾಹಿತಿ ಹಾಗೂ ಸಹಾಯಕ್ಕಾಗಿ 800-46342 ಎಂಬ 24 ಗಂಟೆಗಳ ಉಚಿತ ಸಹಾಯವಾಣಿ ಸಂಖ್ಯೆಯನ್ನು ಕೂಡ ಬಿಡುಗಡೆ ಮಾಡಲಾಗಿದೆ.

Also Read
ರೆಕ್ಕೆಗಳೂ ಇಲ್ಲ, ರನ್‌ವೇ ಕೂಡ ಬೇಕಿಲ್ಲ; ನಿಂತ ಜಾಗದಿಂದಲೇ ಆಕಾಶಕ್ಕೆ ಹಾರಿದ 'ಚೀನಾ ಕಾರು' ವಿಡಿಯೋ ವೈರಲ್​! Flying Car
Representative image

ಒಂದೇ ತಿಂಗಳಲ್ಲಿ ಎರಡನೇ ಘೋರ ದುರಂತ!

ಯುಎಇ ರಸ್ತೆಗಳಲ್ಲಿ ಭಾರತೀಯರು ಬಲಿಯಾಗುತ್ತಿರುವುದು ಒಂದೇ ತಿಂಗಳಲ್ಲಿ ಇದು ಎರಡನೇ ಬಾರಿ. ಕಳೆದ ನವೆಂಬರ್ 13 ರಂದು ಯುಎಇಯ ಫುಜೈರಾದಲ್ಲಿ 23 ವಾಹನಗಳ ನಡುವೆ ನಡೆದ ಭೀಕರ ಸರಣಿ ಅಪಘಾತದಲ್ಲಿ 14 ಮಂದಿ ಮೃತಪಟ್ಟಿದ್ದರು. ಆ ದುರ್ಘಟನೆಯಲ್ಲೂ ನಾಲ್ವರು ಭಾರತೀಯರು ಪ್ರಾಣ ಕಳೆದುಕೊಂಡಿದ್ದರು ಮತ್ತು ಏಳು ಮಂದಿ ಗಾಯಗೊಂಡಿದ್ದರು. ಆ ಕಹಿ ಘಟನೆ ಮಾಸುವ ಮುನ್ನವೇ ಈಗ ರಾಸ್ ಅಲ್ ಖೈಮಾದಲ್ಲಿ ಮತ್ತೊಂದು ಬಸ್ ದುರಂತ ಸಂಭವಿಸಿರುವುದು ಅನಿವಾಸಿ ಭಾರತೀಯರಲ್ಲಿ ತೀವ್ರ ಆತಂಕ ಹಾಗೂ ದುಃಖವನ್ನುಂಟು ಮಾಡಿದೆ, (ಏಜೆನ್ಸೀಸ್​).