

ಬೀಜಿಂಗ್: ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡಾಗ, "ಛೇ! ನಮ್ಮ ಕಾರಿಗೂ ರೆಕ್ಕೆಗಳಿದ್ದು ಹಾರುವಂತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು" ಎಂದು ನಾವೆಲ್ಲರೂ ಒಮ್ಮೆಯಾದರೂ ಅಂದುಕೊಂಡಿರುತ್ತೇವೆ. ಕೆಲ ದಿನಗಳ ಹಿಂದೆ ಎಲಾನ್ ಮಸ್ಕ್ ಒಡೆತನದ ಟೆಸ್ಲಾ ನಂತರ ಈದೀಗ ಚೀನಾ, ರನ್‌ವೇ ಕೂಡ ಬೇಕಿಲ್ಲದ ಅತ್ಯಾಧುನಿಕ 'ಹಾರುವ ಕಾರು'ನ್ನು ಯಶಸ್ವಿಯಾಗಿ ಪರೀಕ್ಷಿಸಿ ಜಗತ್ತನ್ನೇ ನಿಬ್ಬೆರಗಾಗಿಸಿದೆ.
ಚೀನಾದ ಚಾಂಗ್ಶಾ ನಗರದಲ್ಲಿ ಈ ದೇಶೀಯ ನಿರ್ಮಿತ ಹಾರುವ ಕಾರಿನ ಮೊದಲ ಪರೀಕ್ಷಾ ಹಾರಾಟ ಯಶಸ್ವಿಯಾಗಿ ನಡೆದಿದೆ. ನೋಡಲು ಸಣ್ಣ ಕಾಂಪ್ಯಾಕ್ಟ್ ಕಾರಿನಂತಿರುವ ಈ ವಾಹನವು, ನಿಂತ ಜಾಗದಿಂದಲೇ ನೇರವಾಗಿ ಆಕಾಶಕ್ಕೆ ಜಿಗಿದು, ಗಾಳಿಯಲ್ಲಿ ತೇಲಾಡಿ ಮತ್ತೆ ಸುರಕ್ಷಿತವಾಗಿ ಕೆಳಗಿಳಿದಿದೆ.
ಈ ರೋಚಕ ವಿಡಿಯೋವನ್ನು ಭಾರತದಲ್ಲಿರುವ ಚೀನಾ ರಾಯಭಾರಿ ಕ್ಸು ಫೀಹಾಂಗ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸದ್ಯ ಸೋಷಿಯಲ್ ಮೀಡಿಯಾನಲ್ಲಿ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
ಸಾಮಾನ್ಯವಾಗಿ ಹೆಲಿಕಾಪ್ಟರ್ ಅಥವಾ ಡ್ರೋನ್‌ಗಳಲ್ಲಿ ದೊಡ್ಡದಾದ ರೆಕ್ಕೆಗಳು ಹೊರಗಡೆ ತಿರುಗುತ್ತಿರುತ್ತವೆ. ಆದರೆ ಚೀನಾದ ಈ ಹಾರುವ ಕಾರಿನಲ್ಲಿ ಹೊರಗಡೆ ಯಾವುದೇ ರೆಕ್ಕೆಗಳು ಕಾಣಿಸುವುದಿಲ್ಲ. ಇದರಲ್ಲಿ ಡಕ್ಟೆಡ್ ಫ್ಯಾನ್ (Ducted Fan) ತಂತ್ರಜ್ಞಾನವನ್ನು ಬಳಸಲಾಗಿದೆ. ಅಂದರೆ, ಗಾಳಿಗೆ ಮೇಲಕ್ಕೆತ್ತುವ ಫ್ಯಾನ್‌ಗಳನ್ನು ಕಾರಿನ ಒಳಭಾಗದಲ್ಲೇ ಸುರಕ್ಷಿತವಾಗಿ ಮುಚ್ಚಿಡಲಾಗಿದೆ.
ಇದರಿಂದ ಏನು ಲಾಭ ಅಂದರೆ, ನಗರದ ಕಿರಿದಾದ ರಸ್ತೆಗಳಲ್ಲಿ ಅಥವಾ ಕಟ್ಟಡಗಳ ನಡುವೆ ಕಡಿಮೆ ಎತ್ತರದಲ್ಲಿ ಹಾರಾಡುವಾಗ ಹೊರಗಿನ ವಸ್ತುಗಳಿಗೆ ರೆಕ್ಕೆಗಳು ತಗುಲಿ ಅಪಘಾತವಾಗುವ ಭಯವಿರುವುದಿಲ್ಲ. ಸಿಟಿ ಟ್ರಾಫಿಕ್‌ನಲ್ಲಿ ಸುರಕ್ಷಿತವಾಗಿ ಹಾರಾಡಲು ಇದು ಸಹಾಯಕವಾಗುತ್ತದೆ.
ಸದ್ಯಕ್ಕೆ ಇದು ಒಬ್ಬರು ಮಾತ್ರ ಕುಳಿತುಕೊಳ್ಳಬಹುದಾದ ಮಾದರಿಯಾಗಿದೆ. ಟೇಕ್-ಆಫ್ ಆಗುವಾಗ ಈ ಕಾರು ಗರಿಷ್ಠ 280 ಕೆಜಿ ತೂಕ ಹೊಂದಿದ್ದು, ಬರೋಬ್ಬರಿ 120 ಕೆಜಿ ತೂಕದವರೆಗೆ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ವಿಮಾನ ನಿಲ್ದಾಣ ಅಥವಾ ದೊಡ್ಡ ರನ್‌ವೇ ಇಲ್ಲದ ಜಾಗದಲ್ಲೂ, ಕೇವಲ ಒಂದು ಸಣ್ಣ ಪಾರ್ಕಿಂಗ್ ಜಾಗದಿಂದಲೇ ಇದು ನೇರವಾಗಿ ಮೇಲೆ ಹಾರಬಲ್ಲದು ಮತ್ತು ಇಳಿಯಬಹುದಾಗಿದೆ.
ಹಾರುವ ಕಾರುಗಳ ರೇಸ್‌ನಲ್ಲಿ ಎಲಾನ್ ಮಸ್ಕ್ ಅವರ ಟೆಸ್ಲಾ ಕಂಪನಿ ಕೂಡ ಹಿಂದೆ ಬಿದ್ದಿಲ್ಲ. 2026ರ ಅಕ್ಟೋಬರ್‌ನಲ್ಲಿ ಟೆಸ್ಲಾ ತನ್ನ ಹೊಸ ರೋಡ್‌ಸ್ಟರ್ ಕಾರನ್ನು ಅನಾವರಣಗೊಳಿಸಿತ್ತು. ಸ್ಪೇಸ್‌ಎಕ್ಸ್ ತಂತ್ರಜ್ಞಾನದ ಕೋಲ್ಡ್-ಗ್ಯಾಸ್ ಥ್ರಸ್ಟರ್ಗಳನ್ನು ಬಳಸುವ ಟೆಸ್ಲಾ ಕಾರು, ಅತಿ ವೇಗದಲ್ಲಿ ಸಣ್ಣದಾಗಿ ಗಾಳಿಯಲ್ಲಿ ಜಿಗಿಯುವ ಸಾಮರ್ಥ್ಯ ಹೊಂದಿದೆ. ಆದರೆ ಚೀನಾದ ಈ ಕಾರು ಪಕ್ಕಾ ಹೆಲಿಕಾಪ್ಟರ್ ತರಹ ಗಾಳಿಯಲ್ಲಿ ನಿಂತು ಹಾರಾಡುವ ತಂತ್ರಜ್ಞಾನವನ್ನು ಹೊಂದಿದೆ.
ಸದ್ಯಕ್ಕೆ ಈ ಹಾರುವ ಕಾರು ಇನ್ನೂ ಪರೀಕ್ಷಾ ಹಂತದಲ್ಲಿದೆ. ತಕ್ಷಣಕ್ಕೆ ಇದು ಸಾಮಾನ್ಯ ಜನರ ಬಳಕೆಗೆ ಅಥವಾ ಟ್ಯಾಕ್ಸಿ ಸೇವೆಗೆ ರಸ್ತೆಗಿಳಿಯುವುದಿಲ್ಲ. ಆದರೂ, ಭವಿಷ್ಯದಲ್ಲಿ ರಸ್ತೆ ಟ್ರಾಫಿಕ್ ಕಿರಿಕಿರಿಯನ್ನು ತಪ್ಪಿಸಿ ಆಕಾಶದಲ್ಲೇ ಪ್ರಯಾಣಿಸುವ ದಿನಗಳು ದೂರವಿಲ್ಲ ಎಂಬುದನ್ನು ಚೀನಾದ ಈ ಪ್ರಯೋಗ ಸಾಬೀತುಪಡಿಸಿದೆ, (ಏಜೆನ್ಸೀಸ್).