ಆಡಳಿತದಲ್ಲಿ ಮಹಿಳೆಯರನ್ನು ಸಮಾನ ಪಾಲುದಾರರನ್ನಾಗಿ ಮಾಡುವ ಐತಿಹಾಸಿಕ ಹೆಜ್ಜೆ: ಎಲ್ಲಾ ಪಕ್ಷಗಳ ಬೆಂಬಲ ಕೋರಿದ ಅಮಿತ್ ಷಾ! | Amit Shah

Amit Shah |  ಗೃಹ ಸಚಿವ ಅಮಿತ್ ಷಾ
Amit Shah | ಗೃಹ ಸಚಿವ ಅಮಿತ್ ಷಾ
Published on: 

ನವದೆಹಲಿ: ಕೇಂದ್ರ ಸಚಿವ ಸಂಪುಟ ಈ ವಾರ ಅನುಮೋದನೆ ನೀಡಿರುವ ಸಂವಿಧಾನ (132ನೇ) ತಿದ್ದುಪಡಿ ಮಸೂದೆಯು ದೇಶಾದ್ಯಂತ ಮಹಿಳೆಯರ ದಶಕಗಳ ಕಾಯುವಿಕೆಗೆ ಅಂತ್ಯ ಹಾಡಲಿದ್ದು, ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಶೇ. 33ರಷ್ಟು ಮೀಸಲಾತಿ ಒದಗಿಸಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿದ್ದಾರೆ. ಕೇಂದ್ರ ಸರ್ಕಾರದ ಹೊಸ ಕ್ಷೇತ್ರ ಪುನರ್ವಿಂಗಡಣೆ ಮಸೂದೆಯನ್ನು ಎಲ್ಲಾ ವಿರೋಧ ಪಕ್ಷಗಳು ಬೆಂಬಲಿಸಬೇಕು ಎಂದು ಅವರು ಶನಿವಾರ ಮನವಿ ಮಾಡಿದ್ದಾರೆ.

ಮಹಿಳಾ ಸಬಲೀಕರಣಕ್ಕೆ ಮತ್ತು ಚುನಾಯಿತ ಪ್ರಾತಿನಿಧ್ಯದಲ್ಲಿ ಅವರ ಭಾಗವಹಿಸುವಿಕೆಯನ್ನು ಖಚಿತಪಡಿಸಲು ಮೋದಿ ಸರ್ಕಾರ ಬದ್ಧವಾಗಿದೆ ಎಂದಿರುವ ಅಮಿತ್ ಷಾ, ನೀತಿ ನಿರೂಪಣೆ, ಕಾನೂನು ರಚನೆ ಮತ್ತು ರಾಷ್ಟ್ರೀಯ ಆದ್ಯತೆಗಳ ನಿರ್ಧಾರದಲ್ಲಿ ಮಹಿಳೆಯರ ಹೆಚ್ಚಿನ ಪಾಲ್ಗೊಳ್ಳುವಿಕೆಯು ಹೊಸ ಆಯಾಮವನ್ನು ನೀಡಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಅಮಿತ್​ ಷಾ, ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಕನಿಷ್ಠ ಮೂರನೇ ಒಂದರಷ್ಟು ಪ್ರಾತಿನಿಧ್ಯವನ್ನು ಖಚಿತಪಡಿಸುವುದರಿಂದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ನೀತಿಗಳು ಹಾಗೂ ಯೋಜನೆಗಳು ಹೆಚ್ಚು ಒಳಗೊಳ್ಳುವಂತಾಗುತ್ತವೆ. ಆಡಳಿತದಲ್ಲಿ ಮಹಿಳೆಯರನ್ನು ಸಮಾನ ಮತ್ತು ಬಲಿಷ್ಠ ಪಾಲುದಾರರನ್ನಾಗಿ ಮಾಡುವ ಈ ಐತಿಹಾಸಿಕ ಉಪಕ್ರಮವನ್ನು ಎಲ್ಲಾ ರಾಜಕೀಯ ಪಕ್ಷಗಳು ಬೆಂಬಲಿಸಬೇಕು ಎಂದು ಕರೆ ನೀಡಿದ್ದಾರೆ.

Also Read
ನಾವು ಕೂಡ ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ಬೆಂಬಲ ನೀಡ್ತೀವಿ! ಶರದ್ ಪವಾರ್, ಸ್ಟಾಲಿನ್ ಬೆನ್ನಲ್ಲೇ ತೆಲಂಗಾಣದ ಬಿಆರ್‌ಎಸ್ ಮಹತ್ವದ ಘೋಷಣೆ! | KT Rama Rao
Amit Shah |  ಗೃಹ ಸಚಿವ ಅಮಿತ್ ಷಾ

ವಿಧಾನಸಭೆಗಳ ಗರಿಷ್ಠ ಸ್ಥಾನಗಳ ಮಿತಿ 650ಕ್ಕೆ ಏರಿಕೆ

ಸಂವಿಧಾನ (132ನೇ) ತಿದ್ದುಪಡಿ ಮಸೂದೆಯನ್ನು ಐತಿಹಾಸಿಕ ಎಂದು ಬಣ್ಣಿಸಿರುವ ಷಾ, ರಾಜ್ಯ ವಿಧಾನಸಭೆಗಳ ಗರಿಷ್ಠ ಸ್ಥಾನಗಳ ಮಿತಿಯನ್ನು 500ರಿಂದ ಸುಮಾರು 650ಕ್ಕೆ ಹೆಚ್ಚಿಸಲು ಸಂವಿಧಾನದ 170(1)ನೇ ವಿಧಿಗೆ ತಿದ್ದುಪಡಿ ತರಲು ಈ ಮಸೂದೆ ಪ್ರಸ್ತಾಪಿಸುತ್ತದೆ ಎಂದು ಒತ್ತಿ ಹೇಳಿದ್ದಾರೆ. ಮುಂದಿನ ವರ್ಷದ ಆರಂಭದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಉತ್ತರ ಪ್ರದೇಶದಲ್ಲಿ ಕೇಂದ್ರದ ಈ ಕ್ಷೇತ್ರ ಪುನರ್ವಿಂಗಡಣೆ ಕ್ರಮವು ಉತ್ತಮ ಆಡಳಿತ ಮತ್ತು ಸಾರ್ವಜನಿಕ ಭಾಗವಹಿಸುವಿಕೆಯನ್ನು ಮತ್ತಷ್ಟು ಬಲಪಡಿಸಲಿದೆ ಎಂದು ತಿಳಿಸಿದ್ದಾರೆ.

ಈ ನಿಬಂಧನೆಯು ಉತ್ತರ ಪ್ರದೇಶವನ್ನು ವಿಭಜಿಸದೆಯೇ ವಿಧಾನಸಭೆಯಲ್ಲಿ ತನ್ನ ಪ್ರಾತಿನಿಧ್ಯವನ್ನು ಹೆಚ್ಚಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಅದೇ ಸಮಯದಲ್ಲಿ, ಮಹಿಳೆಯರಿಗೆ ಮೂರನೇ ಒಂದರಷ್ಟು ಮೀಸಲಾತಿಯು ರಾಜ್ಯದ ಮಹಿಳೆಯರಿಗೆ ಇದುವರೆಗಿನ ಅತ್ಯುನ್ನತ ಮಟ್ಟದ ಪ್ರಾತಿನಿಧ್ಯವನ್ನು ನೀಡಲಿದೆ. ಹೆಚ್ಚಿನ ಸಂಖ್ಯೆಯ ಚುನಾಯಿತ ಪ್ರತಿನಿಧಿಗಳು ತಮ್ಮ ಕ್ಷೇತ್ರಗಳ ಆದ್ಯತೆಗಳು ಮತ್ತು ಸಮಸ್ಯೆಗಳನ್ನು ಸದನದಲ್ಲಿ ಎತ್ತಲು ಸಾಧ್ಯವಾಗುತ್ತದೆ. ಇದು ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ಯೋಜನೆಗಳನ್ನು ರೂಪಿಸಲು ಮತ್ತು ಅಭಿವೃದ್ಧಿಯನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ ಎಂದು ವಿವರಿಸಿದ್ದಾರೆ.

ಶುಕ್ರವಾರ ಕೇಂದ್ರ ಸಚಿವ ಸಂಪುಟ ಅನುಮೋದಿಸಿದ ಸಂವಿಧಾನ (132ನೇ) ತಿದ್ದುಪಡಿ ಮಸೂದೆಯು, ಕ್ಷೇತ್ರ ಪುನರ್ವಿಂಗಡಣೆಯ ಮೂಲಕ ಲೋಕಸಭೆಯ ಸದಸ್ಯ ಬಲವನ್ನು ಪ್ರಸ್ತುತ 543 ಸ್ಥಾನಗಳಿಂದ ಗರಿಷ್ಠ 850ಕ್ಕೆ ಹೆಚ್ಚಿಸಲು ಉದ್ದೇಶಿಸಿದೆ. ಈ ಕ್ರಮವು 2029ರ ಲೋಕಸಭಾ ಚುನಾವಣೆಗೂ ಮುನ್ನ ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿಯನ್ನು ಜಾರಿಗೆ ತರಲು ದಾರಿ ಮಾಡಿಕೊಡುವ ಸಾಧ್ಯತೆ ದಟ್ಟವಾಗಿದೆ. ಸಂಸತ್ತಿನ ಉಭಯ ಸದನಗಳಲ್ಲಿ ಈ ಸಾಂವಿಧಾನಿಕ ತಿದ್ದುಪಡಿ ಮಸೂದೆ ಅಂಗೀಕಾರವಾಗಲು ಮೂರನೇ ಎರಡರಷ್ಟು (2/3) ಬಹುಮತದ ಅಗತ್ಯವಿದೆ(ಏಜೆನ್ಸೀಸ್​).