ಟಿವಿಕೆ ಸಚಿವ ಡಿ.ಶರತ್ ಕುಮಾರ್ ಡ್ರಗ್ಸ್​ ಸೇವಿಸಿದ ಆರೋಪ: ಐಪಿಎಲ್​ ಸಮಯದ ವಿಡಿಯೋ ವೈರಲ್: ಸಚಿವ ಹೇಳಿದ್ದೇನು? | D Sarath Kumar

ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಡಿ.ಶರತ್ ಕುಮಾರ್
ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಡಿ.ಶರತ್ ಕುಮಾರ್
Published on
ಚೆನ್ನೈ: ತಮಿಳುನಾಡಿನಲ್ಲಿ ಸಿಎಂ ಸಿ.ಜೋಸೆಫ್ ವಿಜಯ್ ನೇತೃತ್ವದ ಟಿವಿಕೆ ಸರ್ಕಾರ ಡ್ರಗ್ಸ್​ ವಿರುದ್ಧ ಅಭಿಯಾನ ನಡೆಸುತ್ತಿದ್ದರೆ, ಅದೇ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಡಿ.ಶರತ್ ಕುಮಾರ್(D Sarath Kumar) ವಿರುದ್ಧ ಡ್ರಗ್ಸ್ ಸೇವಿಸಿದ ಆರೋಪ ಕೇಳಿಬಂದಿದ್ದು, ಐಪಿಎಲ್ ಸಮಯದಲ್ಲಿ ಕ್ರೀಡಾಂಗಣದಲ್ಲಿರುವ ಅವರ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಶುಕ್ರವಾರ ಸಿಎಂ ವಿಜಯ್ ಡ್ರಗ್ಸ್ ವಿರುದ್ಧ ಅಭಿಯಾನ ನಡೆಸಿ ಸುಮಾರು 10 ಕಿಮೀ ಮ್ಯಾರಾಥಾನ್ ಓಟದಲ್ಲಿ ಭಾಗವಹಿಸಿದ್ದರು. ಮತ್ತು ಜನರು ಮಾದಕ ದ್ರವ್ಯಗಳಿಂದ ದೂರವಿರಿ ಮತ್ತು ಕ್ರೀಡೆಗಳನ್ನು ಅಳವಡಿಸಿಕೊಳ್ಳುವಂತೆ ಒತ್ತಾಯಿಸಿದ್ದರು. ಈ ವೇಳೆ ಸಚಿವ ಶರತ್ ಕುಮಾರ್ ಅವರ ಜೊತೆ ವೇದಿಕೆಯಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದ ಬಳಿಕ ಶರತ್ ಕುಮಾರ್ ಅವರ ಹಳೆಯ ವಿಡಿಯೋ ಬೆಳಕಿಗೆ ಬಂದಿದ್ದು, ಅದರಲ್ಲಿ ಐಪಿಎಲ್​ ಪಂದ್ಯದ ವೇಳೆ ಅವರು ಮೊಬೈಲ್​ ಸ್ಕ್ರೀನ್​ ಮೇಲೆ ಎಟಿಎಂ ಕಾರ್ಡ್ ಮತ್ತು 500 ರೂ. ನೋಟುಗಳ ಮೂಲಕ ಪುಡಿಯಂತಹ ವಸ್ತುವನ್ನು ಶೇಖರಿಸುತ್ತಿದ್ದಾರೆ. ಈ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ, ಸಚಿವರು ಡ್ರಗ್ಸ್​ ಸೇವಿಸಿದ್ದಾರೆ ಎಂದು ಆರೋಪಿಸಿ, ವಿಪಕ್ಷ ಡಿಎಂಕೆ ಅವರ ರಾಜೀನಾಮೆಗೆ ಒತ್ತಾಯಿಸಿತ್ತು.

ಸಚಿವ ಶರತ್ ಕುಮಾರ್ ಹೇಳಿದ್ದೇನು?

ಡ್ರಗ್ಸ್​ ಸೇವಿಸಿದ್ದಾರೆ ಎಂದು ಆರೋಪಿಸಲಾದ ವಿಡಿಯೋ ಬಗ್ಗೆ ಸಚಿವ ಶರತ್ ಕುಮಾರ್, ಪತ್ನಿ ಮತ್ತು ತಮ್ಮ ಚಿಕ್ಕಮಗಳೊಂದಿಗೆ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದು, ಡ್ರಗ್ಸ್​ ಸೇವನೆಯ ಆರೋಪವನ್ನು ತಳ್ಳಿಹಾಕಿದ್ದಾರೆ. 2 ವರ್ಷಗಳ ಹಳೆಯ ವೀಡಿಯೊದಲ್ಲಿ ಕಾಣುತ್ತಿರುವುದು ಮಾದಕ ದ್ರವ್ಯವಲ್ಲ. ಅದು ತಮ್ಮ ಮಗುವಿಗೆ ತಯಾರಿಸಿದ ಪುಡಿ ಮಾತ್ರೆ ಎಂದು ಹೇಳಿದ್ದಾರೆ.
ಆ ವೇಳೆ ನನ್ನ ಮಗಳಿಗೆ ಔಷಧಿ ತೆಗೆದುಕೊಳ್ಳಬೇಕಾಗಿತ್ತು. ಆದರೆ ಮಾತ್ರೆ ಹಾಗೆಯೇ ನುಂಗಲು ಸಾಧ್ಯವಾಗಲಿಲ್ಲ. ನನ್ನ ಹೆಂಡತಿ ಮಾತ್ರೆಯನ್ನು ನೀರಿನೊಂದಿಗೆ ಬೆರೆಸಿ ಕುಡಿಸಲು ಮಾತ್ರೆಯನ್ನು ಪುಡಿ ಮಾಡುವಂತೆ ಹೇಳಿದ್ದಳು. ಆಗ ನಾನು ಅದನ್ನು ಪುಡಿ ಮಾಡಿ ಕೊಟ್ಟಿದ್ದೆ. ಕ್ರೀಡಾಂಗಣದೊಳಗೆ ಬಿಗಿ ಪೊಲೀಸ್ ಭದ್ರತೆ, ಭಾರಿ ಜನಸಂದಣಿಯ ನಡುವೆ ಹಾಗೂ ಕುಟುಂಬದೊಂದಿಗೆ ಇದ್ದಾಗ ಡ್ರಗ್ಸ್​ ತೆಗೆದುಕೊಂಡಿದ್ದೆ ಎಂದು ಆರೋಪಿಸುವುದು ಸರಿಯಲ್ಲ ಎಂದು ತಿಳಿಸಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net