ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆಗೆ ಷರತ್ತುಬದ್ಧ ಜಾಮೀನು: ಜೈಲಿನಿಂದ ಹೊರಬಂದ ಬಳಿಕ ತಮಾಷೆಯ ಪೋಸ್ಟ್ ವೈರಲ್! | Abhijeet Dipke release

ನವದೆಹಲಿ: ನಿನ್ನೆ ಬಂಧನವಾಗಿದ್ದ ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜಿತ್ ದೀಪ್ಕೆಗೆ (Abhijeet Dipke release) ದೆಹಲಿ ನ್ಯಾಯಾಲಯವು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಕನ್ನಾಟ್ ಪ್ಲೇಸ್‌ನಲ್ಲಿ ಲೆಹರಾ ದೋ ತಿರಂಗಾ ಪ್ರತಿಭಟನಾ ಮೆರವಣಿಗೆಗೆ ತೆರಳಲು ಸಿದ್ಧತೆ ನಡೆಸುತ್ತಿದ್ದ ವೇಳೆ ವಶಕ್ಕೆ ಪಡೆದು, ನಂತರ ಬಂಧಿಸಲಾಗಿದ್ದ ದೀಪ್ಕೆಯನ್ನು ಶನಿವಾರ ನ್ಯಾಯಾಲಯದ ಆದೇಶದ ಮೇರೆಗೆ ಬಿಡುಗಡೆ ಮಾಡಲಾಗಿದೆ.
ಅಭಿಜಿತ್ ದೀಪ್ಕೆಗೆ ಷರತ್ತುಬದ್ಧ ಜಾಮೀನು
ಅಭಿಜಿತ್ ದೀಪ್ಕೆಗೆ ಷರತ್ತುಬದ್ಧ ಜಾಮೀನು
Published on: 

ನವದೆಹಲಿ: ನಿನ್ನೆ ಬಂಧನವಾಗಿದ್ದ ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜಿತ್ ದೀಪ್ಕೆಗೆ (Abhijeet Dipke release) ದೆಹಲಿ ನ್ಯಾಯಾಲಯವು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಕನ್ನಾಟ್ ಪ್ಲೇಸ್‌ನಲ್ಲಿ ಲೆಹರಾ ದೋ ತಿರಂಗಾ ಪ್ರತಿಭಟನಾ ಮೆರವಣಿಗೆಗೆ ತೆರಳಲು ಸಿದ್ಧತೆ ನಡೆಸುತ್ತಿದ್ದ ವೇಳೆ ವಶಕ್ಕೆ ಪಡೆದು, ನಂತರ ಬಂಧಿಸಲಾಗಿದ್ದ ದೀಪ್ಕೆಯನ್ನು ಶನಿವಾರ ನ್ಯಾಯಾಲಯದ ಆದೇಶದ ಮೇರೆಗೆ ಬಿಡುಗಡೆ ಮಾಡಲಾಗಿದೆ.

ಅಭಿಜಿತ್ ದೀಪ್ಕೆಯನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದ್ದು, ವಿಚಾರಣೆಯ ಬಳಿಕ ನ್ಯಾಯಾಲಯವು 50,000 ಬಾಂಡ್ ಹಾಗೂ ಯಾವುದೇ ರೀತಿಯ ಶಾಂತಿಭಂಗ ಉಂಟುಮಾಡುವುದಿಲ್ಲ ಎಂಬ ಮುಚ್ಚಳಿಕೆಯ ಮೇಲೆ ಅವರ ಬಿಡುಗಡೆಗೆ ಆದೇಶಿಸಿದೆ ಎನ್ನಲಾಗಿದ್ದು, ಅವರು ದೆಹಲಿಯ ಮಂದಿರ್ ಮಾರ್ಗ್ ಪೊಲೀಸ್ ಠಾಣೆಯಿಂದ ಅವರು ಹೊರಬಂದಿದ್ದಾರೆ.

ಇದನ್ನೂ ಓದಿ:ಲೆಹರಾ ದೋ ತಿರಂಗಾ ಯಾತ್ರೆಗೂ ಮುನ್ನವೇ ಅಭಿಜಿತ್ ದೀಪ್ಕೆ ಪೊಲೀಸರ ವಶಕ್ಕೆ! | Abhijeet Dipke Detained

ಬಿಡುಗಡೆಯಾದ ಬಳಿಕ ಎಕ್ಸ್ ಖಾತೆಯ ಮೂಲಕ ಪ್ರತಿಕ್ರಿಯೆ ನೀಡಿರುವ ದೀಪ್ಕೆ, 2004 ರ ವೀರ್-ಜಾರಾ ಚಿತ್ರದಲ್ಲಿ ಪಾಕಿಸ್ತಾನದ ಜೈಲಿನಿಂದ 22 ವರ್ಷಗಳ ಬಳಿಕ ಬಿಡುಗಡೆಯಾದ ಶಾರುಖ್ ಖಾನ್ ಪಾತ್ರವು ಕಣ್ಣೀರು ಹಾಕುವ ಫೋಟೋವನ್ನು ಶೇರ್ ಮಾಡಿದ್ದಾರೆ. ಅದಕ್ಕೆ ವೈಫೈ ಮತ್ತು ಫೋನ್ ಇಲ್ಲದೆ 24 ಗಂಟೆಗಳ ಕಾಲ ಜೈಲಿನಿಂದ ಹೊರಬರುವ ಅನುಭವ ಹೇಗಿರುತ್ತದೆ ಎಂದು ತಮಾಷೆಯಾಗಿ ಕ್ಯಾಪ್ಷನ್ ಬರೆದುಕೊಂಡಿದ್ದಾರೆ.

ನೇಹಾ ಬೋರಾ ಬಿಡುಗಡೆ

ಅಭಿಜಿತ್ ದೀಪ್ಕೆ ಅವರಲ್ಲದೆ, ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ (AISA) ಅಧ್ಯಕ್ಷೆ ನೇಹಾ ಬೋರಾ ಕೂಡ ಶುಕ್ರವಾರ ವಶಕ್ಕೆ ಪಡೆಯಲಾದ ಪ್ರಮುಖ ಯುವ ನಾಯಕಿಯಾಗಿದ್ದಾರೆ. ಶನಿವಾರ ಮುಂಜಾನೆ ನೇಹಾ ಬೋರಾ ಅವರನ್ನು ಬಿಡುಗಡೆ ಮಾಡಲಾಗಿದೆ. ಆದರೆ ಮತ್ತೊಂದೆಡೆ, ಸಿಜೆಪಿ ನಾಯಕರಾದ ಅಶೋತ್ ರಾಂಕಾ ಮತ್ತು ಸೌರವ್ ದಾಸ್ ಅವರು ಜಂತರ್ ಮಂತರ್‌ನಲ್ಲಿ ನಿಷೇಧಿತ ಪ್ರದೇಶ ಪ್ರವೇಶಿಸಿದ ಆರೋಪದ ಮೇಲೆ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಬಿಡುಗಡೆಯಾದ ಬಳಿಕ ಮಾತನಾಡಿದ ಎಐಎಸ್‌ಎ ಅಧ್ಯಕ್ಷೆ ನೇಹಾ ಬೋರಾ, ದೆಹಲಿ ಪೊಲೀಸ್ ಮತ್ತು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಈ ಬಂಧನಗಳು ಸಂಪೂರ್ಣವಾಗಿ ಕಾನೂನುಬಾಹಿರ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ವಿವಾದಾತ್ಮಕ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆಯನ್ನು ತಕ್ಷಣ ನಿಲ್ಲಿಸಬೇಕು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್​ ಕುಮಾರ್ ಅವರು ರಾಜೀನಾಮೆ ನೀಡಿ ಜೈಲಿಗೆ ಹೋಗಬೇಕು ಎಂದು ಕಟುವಾಗಿ ಟೀಕಿಸಿದರು. ನನ್ನನ್ನು ಮಂಡಿ ಹೌಸ್‌ನಲ್ಲಿ ವಶಕ್ಕೆ ಪಡೆದು ಬೆಳಗಿನ 5 ಗಂಟೆಯವರೆಗೆ ಪೊಲೀಸ್ ಠಾಣೆಯಲ್ಲೇ ಕೂರಿಸಿದ್ದರು. ಪೊಲೀಸರು ಏಕೆ ಇಂತಹ ಕಾನೂನುಬಾಹಿರ ಬಂಧನಗಳನ್ನು ಮಾಡುತ್ತಿದ್ದಾರೆ ಎಂದು ಬೋರಾ ಪ್ರಶ್ನಿಸಿದರು.

ಪೊಲೀಸರ ಮುನ್ನೆಚ್ಚರಿಕೆ ಕ್ರಮ!

ಕಾಂಗ್ರೆಸ್, ವಿರೋಧ ಪಕ್ಷಗಳು ಮತ್ತು ವಿದ್ಯಾರ್ಥಿ ಸಂಘಟನೆಗಳು ನಡೆಸುತ್ತಿರುವ ಈ ಪ್ರತಿಭಟನೆಗಳು ವಿದೇಶಿ ಧನಸಹಾಯ ಪಡೆದವು ಮತ್ತು ಅರಾಜಕತೆ ಸೃಷ್ಟಿಸುವ ಯತ್ನ ಎಂದು ಬಿಜೆಪಿ ಆರೋಪಿಸುತ್ತಲೇ ಇದೆ. ಮತ್ತೊಂದೆಡೆ, ಚುನಾವಣಾ ಆಯೋಗವು ಎಲ್ಲಾ ನಿರ್ಧಾರಗಳನ್ನು ಸುಪ್ರೀಂ ಕೋರ್ಟ್ ಒಪ್ಪಿಗೆಯೊಂದಿಗೆಯೇ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದೆ.

ಕನ್ನಾಟ್​ ಪ್ಲೇಸ್‌ನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಹಾಗೂ ಸುಗಮ ವಾಹನ ಸಂಚಾರ ಖಚಿತಪಡಿಸಲು ಪೊಲೀಸರು ಸುಮಾರು 150 ಜನರನ್ನು ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ಪಡೆದಿದ್ದರು. ಸೆಂಟ್ರಲ್ ಪಾರ್ಕ್ ಸುತ್ತಲೂ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ರ‍್ಯಾಪಿಡ್ ಆಕ್ಷನ್ ಫೋರ್ಸ್ (RAF) ಪಡೆಗಳನ್ನು ಕೂಡ ಸ್ಥಳದಲ್ಲಿ ಜಮಾವಣೆ ಮಾಡಲಾಗಿತ್ತು. ಕಠಿಣ ಭದ್ರತೆಯ ನಡುವೆಯೂ ವಿದ್ಯಾರ್ಥಿಗಳು ಮತ್ತು ಕಾರ್ಯಕರ್ತರು ರಾಷ್ಟ್ರಧ್ವಜವನ್ನು ಹಿಡಿದು ಸಣ್ಣಪುಟ್ಟ ಮೆರವಣಿಗೆಗಳನ್ನು ನಡೆಸಿದರು.

ಎಚ್​​​ಡಿಕೆ ಆರೋಪ ಒಪ್ಪಿಕೊಂಡ ಹರಿಪ್ರಸಾದ್​

ದೇಶ್ಯಾದ್ಯಂತ ನಡೆಯುತ್ತಿರುವ ವಿವಿಧ ಪ್ರತಿಭಟನೆಗಳಿಗೆ ರಾಜ್ಯ ಸರ್ಕಾರವು ಹಣಕಾಸಿನ ನೆರವು ನೀಡುತ್ತಿದೆ ಎಂಬ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರ ಗಂಭೀರ ಆರೋಪಕ್ಕೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಪ್ರತಿಕ್ರಿಯೆ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ವಿರುದ್ಧ ಹಾಗೂ ಸಂವಿಧಾನ ಹಾಗೂ ಪ್ರಜಾಪ್ರಭುತ್ವವನ್ನು ರಕ್ಷಿಸಲು ನಡೆಯುವ ಯಾವುದೇ ಹೋರಾಟಗಳಿಗೆ ಧನಸಹಾಯ ಮಾಡುವುದು ನಮ್ಮ ಹಕ್ಕು ಎಂದು ಸಮರ್ಥಿಸಿಕೊಂಡಿದ್ದಾರೆ.

ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತನು ಸಂವಿಧಾನವನ್ನು ಮತ್ತು ಪ್ರಜಾಪ್ರಭುತ್ವವನ್ನು ಉಳಿಸಲು ಬಯಸುತ್ತಾನೆ. ಪ್ರಧಾನಿ ಮೋದಿ ಹಾಗೂ ಅವರ ಸರ್ಕಾರದ ವಿರುದ್ಧ ಧ್ವನಿ ಎತ್ತುವ ಯಾವುದೇ ಪ್ರತಿಭಟನೆ ಅಥವಾ ಆಂದೋಲನಕ್ಕೆ ಅಗತ್ಯವಿರುವ ಕೊಡುಗೆಯನ್ನು ನೀಡಲು ನಾವು ಸಿದ್ಧರಿದ್ದೇವೆ ಮತ್ತು ನಾವು ಅದನ್ನು ಖಂಡಿತವಾಗಿ ಬೆಂಬಲಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net