

ಬೆಂಗಳೂರು: (Moderate rain) ರಾಜ್ಯದ ಹಲವೆಡೆ ನಾಲ್ಕೈದು ದಿನಗಳಿಂದ ಸುರಿಯುತ್ತಿದ್ದ ಮಳೆ, ಸೋಮವಾರದಿಂದ ಇಳಿಮುಖವಾಗಿದೆ. ಮುಂದಿನ 5 ದಿನ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.
ಕೊಡಗಿನಲ್ಲಿ ಅ.22ರಿಂದ ಮುಂದಿನ 3 ದಿನ, ಚಿಕ್ಕಮಗಳೂರಿನಲ್ಲಿ ಅ.23 ರಿಂದ ಅ.24ರವರೆಗೆ, ಚಾಮರಾಜನಗರ ಮತ್ತು ಮೈಸೂರಿನಲ್ಲಿ ಅ.22ರಂದು ಜೋರು ಮಳೆಯಾಗುವ ಸಂಭವ ಇರುವುದರಿಂದ ಯೆಲ್ಲೋ ಅಲರ್ಟ್ ಕೊಡಲಾಗಿದೆ.
ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಚಿಕ್ಕಬಳ್ಳಾಪುರ, ಹಾಸನ, ಕೋಲಾರ, ಮಂಡ್ಯ, ದಾವಣಗೆರೆಯಲ್ಲಿ ಅ.20ರಂದು ಸಾಧಾರಣ ಮಳೆ ಇರಲಿದೆ. ಉತ್ತರ ಕರ್ನಾಟದ ಬಹುತೇಕ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿದಿದೆ ಎಂದು ಇಲಾಖೆ ಮಾಹಿತಿ ಕೊಟ್ಟಿದೆ.
ಹಿರಿಯ ಹವಾಮಾನ ತಜ್ಞ ಡಾ.ಶ್ರೀನಿವಾಸರೆಡ್ಡಿ ಮಾತನಾಡಿ, ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಮತ್ತು ಬಂಗಾಳಕೊಲ್ಲಿಯ ನೈಋತ್ಯ ಭಾಗದಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿರುವ ಪರಿಣಾಮದಿಂದ ತಮಿಳುನಾಡು, ಪುದುಚೇರಿ, ಕಾರೈಕಲ್, ಲಕ್ಷದ್ವೀಪ, ಕೇರಳ ಮತ್ತು ಕರಾವಳಿಯ ಆಂಧ್ರಪ್ರದೇಶದಲ್ಲಿ ಅ.19ರಿಂದ ಅ.25ರವರೆಗೆ ಮಳೆ ಇರಲಿದೆ. ದಕ್ಷಿಣ ಕರ್ನಾಟಕದ ಕೆಲ ಭಾಗಗಳಲ್ಲಿ ಮಾತ್ರ ಬಿರುಸಾಗಿ ಮಳೆ ಸುರಿಯಲಿದ್ದು, ಉಳಿದೆಡೆ ಸಾಧಾರಣ ಇರಲಿದೆ ಎಂದರು.