ಸೀರೆ ಉಟ್ಟು ಗರ್ಬಾ ಆಡುವ ಗಂಡಸರು! ಏನಿದು 210 ವರ್ಷಗಳ ಹಳೆಯ ವಿಶೇಷ ಸಂಪ್ರದಾಯ? | Men‘s Garba Dance

ಗುಜರಾತ್‌ನ ಅಹಮದಾಬಾದ್‌ನಲ್ಲಿ 210 ವರ್ಷಗಳ ಹಳೆಯ ಸಂಪ್ರದಾಯವೊಂದು ಇಂದಿಗೂ ಜೀವಂತವಾಗಿದೆ. ನವರಾತ್ರಿಯ ಅಷ್ಟಮಿಯಂದು ಪುರುಷರು ಸೀರೆ ಉಟ್ಟು ಗರ್ಬಾ ಆಡುತ್ತಾರೆ. ಸದು ಮಾತೆಯ ಮೇಲಿನ ಭಕ್ತಿ, ಹರಕೆ ಮತ್ತು ಈ ವಿಶಿಷ್ಟ ಆಚರಣೆಯ ಹಿಂದಿನ ಕಥೆ ಇಲ್ಲಿದೆ.
Men‘s Navaratri Garba Dance
ಹರಕೆ ತೀರಿಸಲು ಸೀರೆ ಉಟ್ಟು ಗರ್ಬಾ ನೃತ್ಯ ಮಾಡುವ ಪುರುಷರು
Published on: 

Ahmedabad Navratri: ನವರಾತ್ರಿ ಹಬ್ಬ ಅಂದ್ರೆ ದುರ್ಗಾದೇವಿಯ ಆರಾಧನೆ, ಗರ್ಬಾ ನೃತ್ಯ ಎಲ್ಲವೂ ನೆನಪಾಗುತ್ತೆ. ಆದ್ರೆ, ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ಒಂದು ಪ್ರದೇಶದಲ್ಲಿ ಪುರುಷರು ಸೀರೆ ಉಟ್ಟು, ಬಳೆ, ಬಿಂದಿ ಹಾಗೂ ಸಾಂಪ್ರದಾಯಿಕ ಆಭರಣಗಳನ್ನು ಧರಿಸಿ ಗರ್ಬಾ ಆಡುವ ವಿಶಿಷ್ಟ ಸಂಪ್ರದಾಯವಿದೆ. ಸುಮಾರು 210 ವರ್ಷಗಳ ಇತಿಹಾಸ ಹೊಂದಿರುವ ಈ ಆಚರಣೆ ಈಗಲೂ ಮುಂದುವರಿದಿದೆ.

ಅಹಮದಾಬಾದ್‌ನ ಶಾಹ್‌ಪುರ ಪ್ರದೇಶದಲ್ಲಿರುವ ಸದು ಮಾತಾ ನಿ ಪೋಲ್‌ನಲ್ಲಿ ನವರಾತ್ರಿಯ ಎಂಟನೇ ದಿನವಾದ ಅಷ್ಟಮಿಯಂದು ಈ ವಿಶೇಷ ಗರ್ಬಾ ನಡೆಯುತ್ತೆ. ಸ್ಥಳೀಯ ನಂಬಿಕೆಯ ಪ್ರಕಾರ, ಸದು ಮಾತೆಯ ಮೇಲಿನ ಭಕ್ತಿಯಿಂದ ಈ ಸಂಪ್ರದಾಯ ಶುರುವಾಗಿದೆ.

210 ವರ್ಷಗಳ ಹಳೆಯ ಸಂಪ್ರದಾಯ

ಸ್ಥಳೀಯರ ಪ್ರಕಾರ, ವಿಕ್ರಮ ಸಂವತ್ 1872ರಿಂದ ಈ ಆಚರಣೆ ನಡೆದುಕೊಂಡು ಬಂದಿದೆ. ಅಂದರೆ, ಸುಮಾರು 210 ವರ್ಷಗಳ ಇತಿಹಾಸವಿದೆ. ಬರೋಟ್ ಸಮುದಾಯದ ಪುರುಷರು ಐದು ವರ್ಷದ ಮಕ್ಕಳಿಂದ ಹಿಡಿದು 80 ವರ್ಷದ ಹಿರಿಯರವರೆಗೂ ಸೀರೆ ಉಟ್ಟು ಗರ್ಬಾ ನೃತ್ಯ ಮಾಡುತ್ತಾರೆ.

Navaratri in Men's Sarees
ನವರಾತ್ರಿ ಅಷ್ಟಮಿಯಂದು ಪುರುಷರ ಸೀರೆ ಸಂಭ್ರಮ

ಸದುಬಾ ಎಂಬ ಮಹಿಳೆಯ ಜನಪದ ಕಥೆ

ಈ ಸಂಪ್ರದಾಯದ ಹಿಂದೆ ಸದುಬಾ ಎಂಬ ಮಹಿಳೆಗೆ ಸಂಬಂಧಿಸಿದ ಜನಪದ ಕಥೆಯಿದೆ. ಅಂದಿನ ಆಡಳಿತಗಾರನೊಬ್ಬ ಸದುಬಾಳ ಮೇಲೆ ಆಸೆಪಟ್ಟಿದ್ದರಿಂದ ಆಕೆಯ ಕುಟುಂಬ ಸಂಕಷ್ಟಕ್ಕೆ ಸಿಲುಕಿತು ಎನ್ನಲಾಗುತ್ತದೆ. ಸದುಬಾಳ ತ್ಯಾಗ ಮತ್ತು ಶಾಪದ ನೆನಪಿಗಾಗಿ ಬರೋಟ್ ಸಮುದಾಯದ ಪುರುಷರು ಸೀರೆ ಉಟ್ಟು ಗರ್ಬಾ ಆಡುವ ಸಂಪ್ರದಾಯ ಆರಂಭವಾಯಿತು ಎಂಬುದು ಸ್ಥಳೀಯರ ನಂಬಿಕೆ.

ಹರಕೆ ತೀರಿಸಲು ಸೀರೆ ಉಟ್ಟು ಗರ್ಬಾ

ಮಕ್ಕಳಾಗಬೇಕು, ಉದ್ಯೋಗದಲ್ಲಿ ಯಶಸ್ಸು ಸಿಗಬೇಕು, ವ್ಯಾಪಾರದಲ್ಲಿ ಪ್ರಗತಿಯಾಗಬೇಕು ಎಂಬ ಆಸೆ ಈಡೇರಲೆಂದು ಭಕ್ತರು ಸದು ಮಾತೆಗೆ ಹರಕೆ ಹೊರುತ್ತಾರೆ. ಬೇಡಿಕೆ ಈಡೇರಿದ ಬಳಿಕ ನವರಾತ್ರಿಯ ಅಷ್ಟಮಿಯಂದು ಸೀರೆ ಉಟ್ಟು ಗರ್ಬಾ ನೃತ್ಯ ಮಾಡುವ ಮೂಲಕ ಹರಕೆ ತೀರಿಸುತ್ತಾರೆ. ಬರೋಟ್ ಸಮುದಾಯದವರಷ್ಟೇ ಅಲ್ಲದೆ, ಮುಸ್ಲಿಮರು ಮತ್ತು ದೇವಿ ಪೂಜಕ್ ಸಮುದಾಯದವರೂ ಸದು ಮಾತೆಯ ಭಕ್ತರಾಗಿದ್ದಾರೆ ಎಂದು ಸ್ಥಳೀಯರು ಹೇಳುತ್ತಾರೆ.

ಹೊಸ ಪೀಳಿಗೆಗೂ ಮುಂದುವರಿದ ಸಂಪ್ರದಾಯ

ಬರೋಟ್ ಸಮುದಾಯದ ಸುಮಾರು 40ರಿಂದ 50 ಕುಟುಂಬಗಳು ಇಂದಿಗೂ ಈ ಸಂಪ್ರದಾಯವನ್ನು ಪಾಲಿಸಿಕೊಂಡು ಬರುತ್ತಿವೆ. ಚಿಕ್ಕ ವಯಸ್ಸಿನಿಂದಲೇ ಮಕ್ಕಳಿಗೆ ಇದರ ಮಹತ್ವ ತಿಳಿಸಿ, ಗರ್ಬಾದಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಲಾಗುತ್ತದೆ. ಸೀರೆ ಉಟ್ಟು ಗರ್ಬಾ ಮಾಡುವುದು ಕೇವಲ ಆಚರಣೆಯಲ್ಲ; ಅದು ಸದು ಮಾತೆಯ ಮೇಲಿನ ಭಕ್ತಿ ಮತ್ತು ಸಮುದಾಯದ ಸಾಂಸ್ಕೃತಿಕ ಗುರುತಿನ ಸಂಕೇತವಾಗಿದೆ.

ಇದನ್ನೂ ಓದಿ: ಹೆಣ್ಣು ಮಗು ಹುಟ್ಟಿದ್ದಕ್ಕೆ ಇಂಥ ಸಂಭ್ರಮ! ತಂದೆಯ ನಡೆಗೆ ನೆಟ್ಟಿಗರ ಮೆಚ್ಚುಗೆ | Father Donates Money

ನವರಾತ್ರಿ ಅಂದ್ರೆ ಕೇವಲ ನೃತ್ಯ, ಸಂಗೀತದ ಹಬ್ಬವಷ್ಟೇ ಅಲ್ಲ. ಭಕ್ತಿ, ನಂಬಿಕೆ ಮತ್ತು ತಲೆಮಾರುಗಳಿಂದ ನಡೆದುಕೊಂಡು ಬಂದ ಸಂಪ್ರದಾಯಗಳ ಸಂಭ್ರಮವೂ ಹೌದು. ಅಹಮದಾಬಾದ್‌ನ ಸದು ಮಾತಾ ನಿ ಪೋಲ್‌ನ ಈ ವಿಶಿಷ್ಟ ಆಚರಣೆ ಇದಕ್ಕೆ ಸಾಕ್ಷಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net