ಮಹಿಳಾ ಮೀಸಲಾತಿಗೆ ಮಾಯಾವತಿ ಬೆಂಬಲ, SC-ST ಮಹಿಳೆಯರಿಗೆ ಪ್ರತ್ಯೇಕ ಕೋಟಾ ಬೇಡಿಕೆ | Mayawati

 Mayawati
ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ
Published on: 

Mayawati: ಮಹಿಳೆಯರಿಗೆ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಶೇ.33 ಮೀಸಲಾತಿ ನೀಡುವ ಕೇಂದ್ರದ ಪ್ರಸ್ತಾವಕ್ಕೆ ಬಹುಜನ ಸಮಾಜ ಪಕ್ಷದ (BSP) ಮುಖ್ಯಸ್ಥೆ ಮಾಯಾವತಿ ಸ್ವಾಗತಿಸಿದ್ದಾರೆ. ಆದರೆ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡದ (ST) ಮಹಿಳೆಯರಿಗೆ ಪ್ರತ್ಯೇಕ ಉಪಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಇದರಿಂದ ಸಮಾನ ಹಾಗೂ ಪರಿಣಾಮಕಾರಿ ರಾಜಕೀಯ ಪ್ರಾತಿನಿಧ್ಯ ಸಿಗಲಿದೆ ಎಂದು ಹೇಳಿದ್ದಾರೆ.

ನವೆಂಬರ್ 30ರಿಂದ ಆರಂಭವಾಗಲಿರುವ ಸಂಸತ್‌ನ ವಿಶೇಷ ಅಧಿವೇಶನಕ್ಕೂ ಮುನ್ನ ಮಾತನಾಡಿರುವ ಮಾಯಾವತಿ, ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳ ಸ್ಥಾನಗಳನ್ನು ಶೇ.50ರಷ್ಟು ಹೆಚ್ಚಿಸುವ ಪ್ರಸ್ತಾವ ಹಾಗೂ ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಯ ಹಿಂದಿನ ರಾಜಕೀಯ ಉದ್ದೇಶಗಳ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಆಡಳಿತ ಪಕ್ಷಗಳು ತಮ್ಮ ರಾಜಕೀಯ ಲಾಭಕ್ಕಾಗಿ ಚುನಾವಣಾ ವ್ಯವಸ್ಥೆ ಬಳಸಿಕೊಳ್ಳುತ್ತವೆ ಎಂದು ಆರೋಪಿಸಿದ್ದಾರೆ.

ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಬಿಎಸ್‌ಪಿ ಮಹಿಳಾ ಮೀಸಲಾತಿಯನ್ನು ನಿರಂತರವಾಗಿ ಬೆಂಬಲಿಸುತ್ತಿದ್ದು, ಶೀಘ್ರ ಜಾರಿಗೆ ಒತ್ತಾಯಿಸಿದೆ. ಆದರೆ ಶೋಷಿತ ಮತ್ತು ಅಂಚಿನಲ್ಲಿರುವ ಸಮುದಾಯಗಳ ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಇರಬೇಕು ಎಂದು ಹೇಳಿದ್ದಾರೆ. ಎಸ್‌ಸಿ, ಎಸ್‌ಟಿ ಮಹಿಳೆಯರಿಗೆ ಪ್ರತ್ಯೇಕ ಮೀಸಲಾತಿ ನೀಡಿದ್ದರೆ ಐತಿಹಾಸಿಕ ಹೆಜ್ಜೆಯಾಗುತ್ತಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

ಮಹಿಳಾ ಮೀಸಲಾತಿ ಜಾರಿಗೆ ತರಲು ಕೇಂದ್ರ ಸಚಿವ ಸಂಪುಟ ಕ್ಷೇತ್ರ ಮರುವಿಂಗಡಣೆ ಆಧಾರಿತ ಶಾಸನಗಳ ಪ್ಯಾಕೇಜ್‌ಗೆ ಅನುಮೋದನೆ ನೀಡಿದೆ. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳ ಸದಸ್ಯರ ಸಂಖ್ಯೆಯನ್ನು ಶೇ.50ರಷ್ಟು ಹೆಚ್ಚಿಸುವ ಪ್ರಸ್ತಾವ ಇದರಲ್ಲಿ ಸೇರಿದೆ. ಸಂವಿಧಾನ (132ನೇ ತಿದ್ದುಪಡಿ) ಮಸೂದೆ, 2026, ಕ್ಷೇತ್ರ ಮರುವಿಂಗಡಣೆ (ಎರಡನೇ) ಮಸೂದೆ, 2026 ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದ ಶಾಸನಗಳು ಪ್ಯಾಕೇಜ್‌ನ ಭಾಗವಾಗಿವೆ.

2029ರ ಲೋಕಸಭೆ ಚುನಾವಣೆಗೆ ಮುನ್ನ ಮಹಿಳೆಯರಿಗೆ ಶೇ.33 ಮೀಸಲಾತಿ ಕಲ್ಪಿಸುವುದು ಈ ಪ್ರಸ್ತಾವದ ಉದ್ದೇಶವಾಗಿದೆ. 2011ರ ಜನಗಣತಿ ಆಧರಿಸಿ ಕ್ಷೇತ್ರಗಳ ಗಡಿ ಮರುನಿರ್ಧರಿಸುವ ಪ್ರಸ್ತಾವವಿದ್ದು, ರಾಜ್ಯಗಳ ನಡುವಿನ ಪ್ರಾತಿನಿಧ್ಯದ ಅನುಪಾತವನ್ನು 1971ರ ಜನಗಣತಿ ಆಧಾರದ ಮೇಲೆ 2051ರವರೆಗೆ ಮುಂದುವರಿಸಲು ಉದ್ದೇಶಿಸಲಾಗಿದೆ.

ಕ್ಷೇತ್ರ ಮರುವಿಂಗಡಣೆ ಮೂಲಕ ಕೇಂದ್ರದ ಆಡಳಿತ ಪಕ್ಷ ಚುನಾವಣಾ ಲಾಭ ಪಡೆಯಬಹುದು ಎಂದು ಮಾಯಾವತಿ ಆರೋಪಿಸಿದ್ದಾರೆ. 2027ರ ಉತ್ತರ ಪ್ರದೇಶ ಚುನಾವಣೆ ಹಿನ್ನೆಲೆಯಲ್ಲಿ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಮತದಾರರು ಜಾತಿ, ಧರ್ಮ, ಪ್ರಾದೇಶಿಕತೆ ಮೀರಿ ಪ್ರಾಮಾಣಿಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದ ಅವರು, ಬಿಎಸ್‌ಪಿ ಸಂವಿಧಾನದ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ತತ್ವಗಳಿಗೆ ಬದ್ಧವಾಗಿದೆ ಎಂದಿದ್ದಾರೆ.

ಇದನ್ನೂ ಓದಿ: ಕುಡಿದ ಮತ್ತಿನಲ್ಲೂ ಪುಣ್ಯದ ಕೆಲಸ! ಅಪರಿಚಿತರ ಬಟ್ಟೆ ಮಡಚಿಟ್ಟ ವ್ಯಕ್ತಿ | Laundry Folding

ಪ್ರಸ್ತಾವಿತ ವ್ಯವಸ್ಥೆಯಲ್ಲಿ ಎಸ್‌ಸಿ ಮತ್ತು ಎಸ್‌ಟಿ ಮಹಿಳೆಯರಿಗೆ ಈಗಾಗಲೇ ಮೀಸಲಾದ ಕ್ಷೇತ್ರಗಳೊಳಗೆ ಮಹಿಳಾ ಮೀಸಲಾತಿ ಅನ್ವಯವಾಗಲಿದ್ದು, ಕ್ಷೇತ್ರಗಳನ್ನು ರೋಟೇಷನ್ ಮೂಲಕ ಬದಲಾಯಿಸಲಾಗುತ್ತದೆ. ಆದರೆ ಈ ಸಮುದಾಯಗಳ ಮಹಿಳೆಯರಿಗೆ ಸ್ಪಷ್ಟ ಪ್ರತ್ಯೇಕ ಉಪಮೀಸಲಾತಿ ನೀಡಬೇಕು ಎಂಬುದು ಮಾಯಾವತಿಯವರ ಬೇಡಿಕೆಯಾಗಿದೆ. ಕೇಂದ್ರದ ಪ್ರಸ್ತಾವಗಳಿಗೆ ಸಂಸತ್ತಿನ ಅನುಮೋದನೆ ಇನ್ನೂ ಸಿಕ್ಕಿಲ್ಲ.