Laundry Folding: ಸಾಮಾನ್ಯವಾಗಿ ಕುಡಿದ ಮತ್ತಿನಲ್ಲಿರುವವರು ವಿಚಿತ್ರವಾಗಿ ವರ್ತಿಸುವುದನ್ನು ನೋಡಿರುತ್ತೇವೆ. ಆದರೆ ಇಲ್ಲೊಬ್ಬ ವ್ಯಕ್ತಿ ರಸ್ತೆಯಲ್ಲಿ ಹೋಗುತ್ತಿದ್ದಾಗ ಮನೆಗಳ ಹೊರಗೆ ಒಣಗಲು ಹಾಕಿದ್ದ ಬಟ್ಟೆಗಳನ್ನು ಒಂದೊಂದಾಗಿ ಮಡಚಿ ಅಚ್ಚುಕಟ್ಟಾಗಿ ಇಟ್ಟಿದ್ದಾರೆ. ಈ ವಿಚಿತ್ರ ಹಾಗೂ ತಮಾಷೆಯ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಥಾಯ್ಲೆಂಡ್‌ನ ಬ್ಯಾಂಕಾಕ್‌ನ ಬಾಂಗ್ ವೇಕ್ ಸೋಯಿ 2 ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬರು ರಸ್ತೆಯಲ್ಲಿ ಹೋಗುವಾಗ ಮನೆಗಳ ಹೊರಗೆ ಒಣಗಲು ಹಾಕಿದ್ದ ಬಟ್ಟೆಗಳನ್ನು ಗಮನಿಸಿದ್ದಾರೆ. ಬಳಿಕ ಒಂದೊಂದೇ ಬಟ್ಟೆಯನ್ನು ತೆಗೆದು ಅಚ್ಚುಕಟ್ಟಾಗಿ ಮಡಚಿಡಲು ಶುರು ಮಾಡಿದ್ದಾರೆ. ಅಷ್ಟಕ್ಕೇ ನಿಲ್ಲದೆ, ಅಕ್ಕಪಕ್ಕದ ಮನೆಗಳ ಹೊರಗೆ ಹಾಕಿದ್ದ ಬಟ್ಟೆಗಳನ್ನೂ ಮಡಚಿಟ್ಟಿದ್ದು, ಈ ವಿಚಿತ್ರ ವರ್ತನೆ ಕಂಡ ಸ್ಥಳೀಯರು ಅಚ್ಚರಿಗೊಂಡಿದ್ದಾರೆ.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ನೆಟ್ಟಿಗರು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ವ್ಯಕ್ತಿಯ ಕಾರ್ಯವನ್ನು ಕೆಲವರು ತಮಾಷೆಯಾಗಿ ಮೆಚ್ಚಿಕೊಂಡಿದ್ದಾರೆ.
'ಒಳ್ಳೆಯ ಮನಸ್ಸಿನ ವ್ಯಕ್ತಿ' ಎಂದು ಒಬ್ಬರು ಕಾಮೆಂಟ್ ಮಾಡಿದರೆ, ಮತ್ತೊಬ್ಬರು 'ಕುಡಿದಿದ್ದರೂ ಉಪಯುಕ್ತ ಕೆಲಸ ಮಾಡುತ್ತಿದ್ದಾರೆ' ಎಂದು ಬರೆದಿದ್ದಾರೆ. 'ನಮ್ಮ ಮನೆಯ ಬಳಿಗೂ ಬಂದು ಬಟ್ಟೆ ಮಡಚಿಕೊಡಲಿ' ಎಂದು ಇನ್ನೊಬ್ಬರು ತಮಾಷೆ ಮಾಡಿದ್ದಾರೆ.
ಇದನ್ನೂ ಓದಿ: ನಾಯಿಯ ಜೀವ ಉಳಿಸಲು ವಿದ್ಯುತ್ ಕಂಬ ಏರಿದ ವ್ಯಕ್ತಿ; ಮಾನವೀಯತೆಗೆ ನೆಟ್ಟಿಗರ ಸಲಾಂ! | Dog Rescue
ಇನ್ನು ಕೆಲವರು ವಿಡಿಯೋವನ್ನು ಗಮನಿಸಿ, ವ್ಯಕ್ತಿ ನಿಜವಾಗಿಯೂ ಕುಡಿದಿದ್ದಾರೆಯೇ ಅಥವಾ ಬಟ್ಟೆಗಳು ಅವರದ್ದೇ ಆಗಿರಬಹುದೇ ಎಂಬ ಅನುಮಾನವನ್ನೂ ವ್ಯಕ್ತಪಡಿಸಿದ್ದಾರೆ. ಆದರೆ ವ್ಯಕ್ತಿಯ ಗುರುತು ಮತ್ತು ಅವರು ಯಾವ ದೇಶದವರು ಎಂಬ ಮಾಹಿತಿ ಇನ್ನೂ ತಿಳಿದುಬಂದಿಲ್ಲ.