

ಬೆಂಗಳೂರು: ಕರೊನಾ ಮಟ್ಟಹಾಕುವ ಜತೆಯಲ್ಲೇ ಜನಸಾಮಾನ್ಯರ ಜತೆಗೆ ವಿವಿಧ ಕ್ಷೇತ್ರಗಳ ಮೇಲೆ ಬಿದ್ದಿರುವ ನಷ್ಟದ ಹೊರೆ ತಗ್ಗಿಸುವತ್ತ ಗಮನ ಕೇಂದ್ರೀಕರಿಸಿರುವ ರಾಜ್ಯ ಸರ್ಕಾರ ಏ.30ರವರೆಗಿನ ಲಾಕ್ಡೌನ್ ಮುಂದುವರಿಕೆ ಅವಧಿಯಲ್ಲಿ ಕೈಗೊಳ್ಳಬೇಕಾದ ಅತ್ಯಗತ್ಯ ಕ್ರಮಗಳ ಯೋಜನೆ ಸಿದ್ಧಪಡಿಸಿದೆ. ಸಂಕಷ್ಟದಲ್ಲಿರುವವರಿಗೆ ಪರಿಹಾರ ನೀಡಿಕೆ, ಹೊಸ ನೀತಿಗಳ ರಚನೆಗಾಗಿ ಸಿಎಂ ನೇತೃತ್ವದ ಆಂತರಿಕ ವಿಶೇಷ ಆರ್ಥಿಕ ಸಮಿತಿ ರಚನೆಯಂತಹ ಹತ್ತಾರು ಪ್ಯಾಕೇಜ್ಗಳನ್ನು ಯೋಜನೆ ಒಳಗೊಂಡಿದ್ದು, ಒಂದೆರಡು ದಿನದಲ್ಲಿ ಅಧಿಕೃತವಾಗಿ ಘೋಷಿಸಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಪ್ರಧಾನಿ ನರೇಂದ್ರ ಮೋದಿ ಲಾಕ್ಡೌನ್ ವಿಸ್ತರಣೆ ವಿಚಾರವನ್ನು ಸೋಮವಾರ ಘೋಷಿಸುವ ಸಾಧ್ಯತೆ ಇದೆ. ರಾಜ್ಯದ ಯೋಜನೆ ಪ್ರಕಾರ ಕರೊನಾ ಹಾಟ್ಸ್ಪಾಟ್ಗಳಾದ ಬೆಂಗಳೂರು, ಮೈಸೂರು (ನಂಜನಗೂಡು), ಬೀದರ್, ಗೌರಿಬಿದನೂರಿನಲ್ಲಿ ಮಾಸಾಂತ್ಯದವರೆಗೂ ಲಾಕ್ಡೌನ್ ನಿಯಮದಲ್ಲಿ ಯಾವುದೇ ಸಡಿಲಿಕೆ ಇರುವುದಿಲ್ಲ. ಆದರೆ ಹಾಟ್ ಸ್ಪಾಟ್ ಅಲ್ಲದ ಜಿಲ್ಲೆಗಳಲ್ಲಿ ಆಟೊ-ಟ್ಯಾಕ್ಸಿ, ಆಟೊಮೇಟೆಡ್ ಕೈಗಾರಿಕೆಗಳಿಗೆ ಅವಕಾಶ ನೀಡಿಕೆ ಸೇರಿ ಅನೇಕ ಕ್ರಮ ಪ್ರಸ್ತಾಪಿಸಲಾಗಿದೆ.
ಬಂದ್ ಮುಂದುವರಿಕೆ: ಹಾಟ್ಸ್ಪಾಟ್ ಜಿಲ್ಲೆಗಳಲ್ಲಿ ಮಾಲ್, ಮಲ್ಟಿಪ್ಲೆಕ್ಸ್ ಸೇರಿದಂತೆ ಕೇಂದ್ರೀಕೃತ ಹವಾನಿಯಂತ್ರಣ ವ್ಯವಸ್ಥೆ ಹೊಂದಿರುವ ಎಲ್ಲ ಉದ್ಯಮ, ಚಟುವಟಿಕೆ ಬಂದ್ ಮುಂದುವರಿಯಲಿದೆ. ಈಗಿನಂತೆ ಮದುವೆ, ಧಾರ್ವಿುಕ ಕೇಂದ್ರ ಹಾಗೂ ಜನಸಂದಣಿಯ ಎಲ್ಲ ಕಾರ್ಯಕ್ರಮಗಳ ನಿರ್ಬಂಧ ಅಬಾಧಿತ ಎಂದು ಹೇಳಲಾಗಿದೆ.
ಕೃಷಿಗೆ ವಿನಾಯಿತಿ: ಕೃಷಿ ಉತ್ಪನ್ನಗಳನ್ನು ಗ್ರಾಹಕರಿಗೆ ಯಾವುದೇ ತೊಂದರೆಯಿಲ್ಲದಂತೆ ತಲುಪಿಸುವ ಸರಪಳಿ ಸರಾಗ ನಿರ್ವಹಣೆಗೆ ಕೃಷಿ ಕ್ಷೇತ್ರ, ಸರ್ಕಾರ ಹಾಗೂ ಖಾಸಗಿ ಕ್ಷೇತ್ರದ ಪ್ರತಿನಿಧಿಗಳ ತಂಡ ರಚನೆ ಮಾಡಬೇಕು ಎಂದು ಹೇಳಲಾಗಿದೆ.
ಆಂತರಿಕ ವಿಶೇಷ ಸಮಿತಿ ರಚನೆ: ಕರೊನಾ ಲಾಕ್ಡೌನ್ನಿಂದ ಕೃಷಿ, ಕೈಗಾರಿಕೆ, ಸೇವಾ ವಲಯ ಸೇರಿದಂತೆ ವಿವಿಧ ವಲಯಗಳಲ್ಲಿ ಉಂಟಾಗಿರುವ ನಷ್ಟ ಲೆಕ್ಕ ಮಾಡಲು ಹಾಗೂ ಭರಿಸಲು ಕೈಗೊಳ್ಳಬೇಕಾದ ಮಾಗೋಪಾಯಗಳ ಕುರಿತು ಚಿಂತನೆ ನಡೆಸಲು ಸಿಎಂ, ಆರ್ಥಿಕ ತಜ್ಞರು, ಆರೋಗ್ಯ ತಜ್ಞರು, ಸಂಬಂಧಿತ ಮಂತ್ರಿಗಳು, ಎಂಎಸ್ಎಂಇ ಸಂಘಟನೆಗಳು, ರೈತರು, ಕಾರ್ಪೆರೇಟ್ ಉದ್ಯಮಿಗಳನ್ನೊಳಗೊಂಡ ಆಂತರಿಕ ವಿಶೇಷ ಆರ್ಥಿಕ ಸಮಿತಿ ರಚನೆ ಮಾಡಬೇಕು ಎಂದು ತಿಳಿಸಲಾಗಿದೆ.
ಸರ್ಕಾರದ ಇನ್ನಿತರ ಕ್ರಮಗಳು
* ಎಲ್ಲ ಅಂತಾರಾಷ್ಟ್ರೀಯ, ದೇಶಿ ಪ್ರಯಾಣಿಕ ವಿಮಾನ ಸಂಚಾರ ನಿರ್ಬಂಧ ಮುಂದುವರಿಕೆ. ಸರಕು ಸಾಗಣೆ ಸಂಚಾರಕ್ಕೆ ಹಂತ ಹಂತವಾಗಿ ಚಾಲನೆ
* ನೈಸರ್ಗಿಕವಾಗಿ ರೋಗನಿರೋಧಕ ಶಕ್ತಿ ವೃದ್ಧಿಸಲು ಆಯುಷ್ ವ್ಯವಸ್ಥೆಯ ಸಂಶೋಧನೆಗಳ ಬಳಕೆ, ಡಿಜಿಟಲ್ ಪೇಮೆಂಟ್ ಕೈಗೊಳ್ಳಲು ಸಾರ್ವಜನಿಕರಿಗೆ ಉತ್ತೇಜನ
ಅತ್ಯವಶ್ಯಕ ಸೇವೆಗಳು
* ಆಹಾರ, ಔಷಧದಂತಹ ಅತ್ಯವಶ್ಯಕ ಸೇವೆಗಳ ಮೇಲಿನ ನಿರ್ಬಂಧ ಮತ್ತಷ್ಟು ಸಡಿಲ, ಆದರೆ ಹೋಟೆಲ್ನಲ್ಲೇ ಆಹಾರ ಸೇವಿಸುವುದಕ್ಕೆ ನಿರ್ಬಂಧ ಮುಂದುವರಿಕೆ
್ಞಲ್ಲ ಆರೋಗ್ಯ ಸೇವೆ, ದಿನಸಿ ಉದ್ಯಮದಲ್ಲಿ ಸಾಮಾಜಿಕ ಅಂತರ ಕಟ್ಟುನಿಟ್ಟಾಗಿ ಪಾಲಿಸಬೇಕು
್ಞೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಸೋಂಕು ನಿವಾರಕ ಸುರಂಗಗಳನ್ನು ಸ್ಥಾಪಿಸಬೇಕು ಜತೆಯಲ್ಲೇ ಸಾಮಾಜಿಕ ಅಂತರವನ್ನು ಕಾಪಾಡಬೇಕು.
ಸ್ಥಳೀಯ ನಿರ್ಬಂಧದ ಕ್ರಮಗಳು
* ಹಿರಿಯ ನಾಗರಿಕರು ಹಾಗೂ ರೋಗನಿರೋಧಕ ಶಕ್ತಿ ಕಡಿಮೆ ಉಳ್ಳವರು ಸದಾ ಮನೆಯಲ್ಲೇ ಇರುವುದು, ಹಾಟ್ಸ್ಪಾಟ್ ಅಲ್ಲದ ಜಿಲ್ಲೆಗಳಲ್ಲಿ ಹವಾನಿಯಂತ್ರಣದ ಅವಶ್ಯಕತೆ ಇಲ್ಲದ ಉದ್ಯಮಗಳಿಗಷ್ಟೇ ಅವಕಾಶ, ಆದರೆ ಜನಜಂಗುಳಿ ಉಂಟಾಗುವಂತಿಲ್ಲ.
* ಸಾರ್ವಜನಿಕ ಸ್ಥಳ, ಸಾರ್ವಜನಿಕ ಸಾರಿಗೆಯಲ್ಲಿ ಫ್ಯೂಮಿಗೇಷನ್ ಮುಂದುವರಿಕೆ
* ಸ್ಥಳೀಯ ಪರಿಸ್ಥಿತಿ ಆಧರಿಸಿ ಹಂತಹಂತವಾಗಿ ಸಾರ್ವಜನಿಕ ಸಾರಿಗೆಗೆ ಚಾಲನೆ, ಆಟೋ ರಿಕ್ಷಾ ಹಾಗೂ ಕ್ಯಾಬ್ ಸೇವೆಗಳಿಗೆ ಅವಕಾಶ
* ಅತ್ಯವಶ್ಯಕ ಸಾಗಣೆ, ಸೇವೆ ಹೊರತುಪಡಿಸಿ ಎಲ್ಲ ಅಂತರ ಜಿಲ್ಲಾ ಮತ್ತು ಅಂತಾರಾಜ್ಯ ಸಾರಿಗೆ ನಿರ್ಬಂಧ ಮುಂದುವರಿಕೆ
ಶಿಕ್ಷಣ ಕ್ಷೇತ್ರ
* ಮುಂದಿನ ಆದೇಶದವರೆಗೆ ಎಲ್ಲ ಶೈಕ್ಷಣಿಕ ಸಂಸ್ಥೆಗಳೂ ಬಂದ್
* ಮೇನಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆ ನಡೆಸುವುದು
* ಉನ್ನತ ಶಿಕ್ಷಣ ದಾಖಲಾತಿಗೆ ತೊಂದರೆ ಆಗದಂತೆ ಶೈಕ್ಷಣಿಕ ಸಂಸ್ಥೆಗಳು ಆನ್ಲೈನ್ ಸಂದರ್ಶನ ನಡೆಸಬೇಕು, ಇ-ಲರ್ನಿಂಗ್ ಮಾಡ್ಯೂಲ್ ಮೂಲಕ ದೂರ ಶಿಕ್ಷಣಕ್ಕೆ ಉತ್ತೇಜನ ನೀಡಬೇಕು
| ಗೋವಿಂದ ಚಿನ್ನಕುರ್ಚಿ