ಬೆಂಗಳೂರು: ( License cancellation if money is charged for e-KYC) ರೇಷನ್ ಕಾರ್ಡ್ಗೆ ಆಧಾರ್ ಜೋಡಣೆಗೆ(ಇಕೆವೈಸಿ) ಕಾರ್ಡ್ದಾರರಿಂದ ಹಣ ಪಡೆಯುವುದು, ಕಡಿಮೆ ಪಡಿತರ ವಿತರಿಸುವುದು ಮತ್ತು ದಸ್ತಾನು ಫಲಕ ಪ್ರದರ್ಶಿಸದಿರುವುದು ಸೇರಿ ಇತರ ನಿಯಮ ಉಲ್ಲಂಸಿದರೆ ಮುಲ್ಲಾಜಿಲ್ಲದೆ ಪರವಾನಗಿ ರದ್ದುಪಡಿಸುವುದಾಗಿ ಆಹಾರ ಇಲಾಖೆ, ನ್ಯಾಯಬೆಲೆ ಅಂಗಡಿಗಳ ವರ್ತಕರಿಗೆ ಎಚ್ಚರಿಕೆ ಕೊಟ್ಟಿದೆ.
ಬೋಗಸ್ ಕಾರ್ಡ್ ಪತ್ತೆ ಮತ್ತು ಪಡಿತರ ಸೋರಿಕೆ ತಡೆಗೆ ಇಲಾಖೆಯಿಂದ ರಾಜ್ಯಾದ್ಯಂತ ಇಕೆವೈಸಿ ಪ್ರಕ್ರಿಯೆ ನಡೆಸುತ್ತಿದೆ. ಬಿಪಿಎಲ್ ಚೀಟಿದಾರರು ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ಇಕೆವೈಸಿ ಮಾಡಿಸಬೇಕು. ಕೆಲ ನ್ಯಾಯಬೆಲೆ ಅಂಗಡಿಗಳ ಮಾಲೀಕರು, ಇಕೆವೈಸಿಗೆ ಹಣ ಪಡೆಯುತ್ತಿರುವ ಬಗ್ಗೆ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಇಕೆವೈಸಿಗೆ ಹಣ ಪಡೆದಿರುವುದು ಸೇರಿ ಕಡಿಮೆ ರೇಷನ್ ವಿತರಿಸುವುದು ತನಿಖೆಯಲ್ಲಿ ಸಾಬೀತಾದ ಹಿನ್ನೆಲೆಯಲ್ಲಿ 7-8 ನ್ಯಾಯಬೆಲೆ ಅಂಗಡಿಗಳ ಪರವಾನಗಿ ಅಮಾನತುಪಡಿಸಲಾಗಿದೆ ಎಂದು ಆಹಾರ ಇಲಾಖೆಯ ಕಾರ್ಯದರ್ಶಿ ಎಂ.ಕನಗವಲ್ಲಿ ಹೇಳಿದ್ದಾರೆ.
ಇಕೆವೈಸಿ ಮಾಡುವ ನ್ಯಾಯಬೆಲೆ ಅಂಗಡಿಯವರಿಗೆ ಸರ್ಕಾರವೇ ಹಣ ಕೊಡುತ್ತಿದೆ. ಹಾಗಾಗಿ, ಕಾರ್ಡ್ದಾರರು ಹಣ ಕೊಡುವ ಅಗತ್ಯವಿಲ್ಲ. ಹಣಕ್ಕೆ ಬೇಡಿಕೆ ಇಟ್ಟರೆ ಸ್ಥಳೀಯ ಆಹಾರ ಇಲಾಖೆಯ ಅಧಿಕಾರಿಗಳಿಗೆ ಅಥವಾ ಆಯುಕ್ತರ ಕಚೇರಿಗೆ ದೂರು ನೀಡಬಹುದು. ಅ.20ವರೆಗೆ ಇಕೆವೈಸಿ ಅವಧಿ ವಿಸ್ತರಿಸಲಾಗಿದೆ. ಅ.1ರಿಂದ ರಾಜ್ಯದ ಎಲ್ಲ ನ್ಯಾಯಬೆಲೆ ಅಂಗಡಿಗಳು ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ, ಸಂಜೆ 4 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ತೆರೆಯಬೇಕೆಂದು ಆದೇಶ ಹೊರಡಿಸಿದ್ದೇವೆ. ಕಾರ್ಡ್ದಾರರು ಅನುಕೂಲಕರ ಸಮಯದಲ್ಲಿ ಪಡಿತರ ಪಡೆದುಕೊಳ್ಳಬಹುದು ಎಂದರು.
2 ತಿಂಗಳ ಅವಧಿಯಲ್ಲಿ ಅಮಾನತು ಅಂಗಡಿಗಳ ವಿವರ
* ಬೆಂಗಳೂರಿನ ‘ಚಂದ್ರಪ್ಪನಗರ ಆರ್ಸಿಎಚ್ಎಸ್, ಬಸವನನಗರ ಸಿಸಿಎಸ್, ಭುವನೇಶ್ವರಿ ಸಿಸಿಎಸ್ ನ್ಯಾಯಬೆಲೆ ಅಂಗಡಿ, ಹೈಕೋರ್ಟ್ ಆದೇಶ ಹಿನ್ನೆಲೆಯಲ್ಲಿ ರದ್ದುಗೊಳಿಸಿದ ಪುಪ್ಪ ಸ್ಟೋರ್ಸ್ ಪರವಾನಗಿ ತೆರವು, ಬಾಲಕೇಡರರ ಸಹಕಾರ ಸಂಘ ನಿಯಮಿತ,
*ಹುಬ್ಬಳ್ಳಿಯ ದೇವಾಂಗಪೇಟ್ನ ಬಸವೇಶ್ವರ ಪ್ರಗತಿ ಪರ ಸಂಘ
* ಧಾರವಾಡದ ಕಲಘಟಗಿಯಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಮಿಶ್ರಿಕೋಟಿ ಬ್ರಾಂಚ್ ಕಾಡನಕೊಪ್ಪ.