ಗುಂಡಿಮಯವಾದ ಕುಡುವನಹಳ್ಳಿ ರಸ್ತೆ

Kuduvanahlli road
Published on

ಕೋಲಾರ ತಾಲೂಕು-ಶ್ರೀನಿವಾಸಪುರ ಕ್ಷೇತ್ರಕ್ಕೆ ಒಳಪಡುವ ಮಾರ್ಗಕ್ಕಿಲ್ಲ ಕಾಯಕಲ್ಪ

ಎನ್.ಮುನಿವೆಂಕಟೇಗೌಡ ಕೋಲಾರ

ಕೋಲಾರ ಕ್ಷೇತ್ರದಿಂದ 4 ಬಾರಿ ಶಾಸಕರಾಗಿ ಒಂದು ಬಾರಿ ಕೃಷಿ ಮಂತ್ರಿಯು ಆಗಿದ್ದ ವಾಜಿ ಸಚಿವ ಕೆ.ಶ್ರೀನಿವಾಸಗೌಡ ಅವರ ತವರು ಕುಡುವನಹಳ್ಳಿ ರಸ್ತೆಯು ಅಭಿವೃದ್ಧಿ ಕಾಣದೆ ಕೊರಗುತ್ತಿದ್ದು, ಸಾರ್ವಜನಿಕರೇ ರಸ್ತೆಯಲ್ಲಿ ಬಿದ್ದಿರುವ ಹಳ್ಳಗಳನ್ನು ಮುಚ್ಚಿ ಓಡಾಡುವಂತಹ ದುಸ್ಥಿತಿ ನಿರ್ಮಾಣವಾಗಿದೆ.

ಕೋಲಾರ-ಶ್ರೀನಿವಾಸಪುರ ರಸ್ತೆಯ ಮಲ್ಲಸಂದ್ರದಿಂದ ಅಣ್ಣಿಹಳ್ಳಿಗೆ ಹೋಗುವ ರಸ್ತೆಯಲ್ಲಿ ಬರುವ ಕುಡುವನಹಳ್ಳಿ ರಸ್ತೆಯು ಮುಂದೆ ಹತ್ತಾರು ಊರುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯು ಇದಾಗಿದೆ.

ಮಲ್ಲಸಂದ್ರದಿಂದ ಅಣ್ಣಿಹಳ್ಳಿಗೆ ಹೋಗುವ ರಸ್ತೆಯಲ್ಲಿ ಬೆಳ್ಳಂಬರಿ ಸಮೀಪ ಕಾರ್ಖಾನೆ ಇದ್ದು, ಪ್ರತಿದಿನ ಸಾವಿರಾರು ಮಹಿಳೆಯರು ಇದೇ ರಸ್ತೆಯಲ್ಲೇ ಸಂಚರಿಸಬೇಕಿದೆ. ಇವರನ್ನು ಕಾರ್ಖಾನೆಗೆ ಕರೆದುಕೊಂಡು ಹೋಗುವ ನೂರಾರು ವಾಹನಗಳು, ಆಟೋಗಳು ಪ್ರತಿದಿನ ಹಳ್ಳ-ಗುಂಡಿಗಳಲ್ಲೇ ಸಂಚರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಮಳೆ ಬಂದು ರಸ್ತೆ ಕೆಸರು ಗದ್ದೆಯಾಗುತ್ತಿದೆ. ಮಳೆ ನಿಂತು ಒಂದು ತಿಂಗಳಾದರೂ ರಸ್ತೆಯಲ್ಲಿಯೇ ನೀರು ನಿಲ್ಲುವಂತಾಗಿದೆ. ನುಕ್ಕನಹಳ್ಳಿ, ಬೆಳ್ಳಂಬರಿ ಮಧ್ಯೆ ರಸ್ತೆಯಲ್ಲಿ ಬಿದ್ದಿರುವ ಹಳ್ಳಗಳು ಮೊಣಕಾಲುದ್ದದಷ್ಟು ಬಿದ್ದಿದ್ದು, ಅಂಗೈಯಲ್ಲಿ ಪ್ರಾಣ ಹಿಡಿದು ಹೋಗಬೇಕಾದ ದುಸ್ಥಿತಿ ಉಂಟಾಗಿದೆ.

ಗ್ರಾಮೀಣ ರಸ್ತೆಯಾಗಿರುವ ಕಾರಣ ತರಕಾರಿ ಸಾಗಿಸುವ ವಾಹನಗಳು, ಶಾಲಾ-ಕಾಲೇಜಿಗೆ ವಿದ್ಯಾರ್ಥಿಗಳನ್ನು ಕೊಂಡೊಯ್ಯುವ ವಾಹನಗಳೂ ಸಹ ಗುಂಡಿಗಳಲ್ಲೇ ಸಂಚರಿಸುತ್ತಿದ್ದು, ಸಂಬಂಧಪಟ್ಟ ಇಲಾಖೆಗಳವರು ಗುಂಡಿಗಳನ್ನು ಮುಚ್ಚುವ ಕೆಲಸ ವಾಡಿಲ್ಲ.

ಸದರಿ ರಸ್ತೆಗೆ ಒಳಪಡುವ ಗ್ರಾಮಗಳು ಕೋಲಾರ ತಾಲೂಕಿಗೆ ಸೇರಿದ್ದರೂ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವುದರಿಂದ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಅನುದಾನದಲ್ಲಿ ರಸ್ತೆ ಅಭಿವೃದ್ಧಿಪಡಿಸಬೇಕಾಗುತ್ತದೆ ಎಂಬುದು ಸ್ಥಳೀಯರ ಮಾತಾಗಿದೆ. ಶಾಸಕರ ಬಳಿ ಒತ್ತಡ ತಂದು ರಸ್ತೆ ಅಭಿವೃದ್ಧಿಪಡಿಸಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಲೋಕೋಪಯೋಗಿ ಇಲಾಖೆಯವರು ಈ ರಸ್ತೆ ನಮಗೆ ಸೇರಿಲ್ಲ ಎಂದು ದುರಸ್ತಿ ಕೆಲಸಕ್ಕೆ ಕೈ ಹಾಕಿಲ್ಲ. ಜಿಲ್ಲಾ ಪಂಚಾಯಿತಿ ತಾಂತ್ರಿಕ ಇಲಾಖೆಯವರು ರಸ್ತೆ ಅಭಿವೃದ್ಧಿಗೆ ಹೆಚ್ಚು ಹಣ ಬೇಕು. ಶಾಸಕರ ಅನುದಾನ ಅವಶ್ಯ ಇದೆ. ಜಿಲ್ಲಾ ಪಂಚಾಯಿತಿಯಿಂದ 1-2 ಕಿಮೀ ರಸ್ತೆಯನ್ನು ಅಭಿವೃದ್ಧಿಪಡಿಸಲು ಸಾಧ್ಯ. ಪ್ರಧಾನ ಮಂತ್ರಿ ರೋಜ್‌ಗಾರ್ ಯೋಜನೆಯಡಿ ಅಭಿವೃದ್ಧಿಪಡಿಸಬೇಕಾಗುತ್ತದೆ. ಶಾಸಕರ ಗಮನಕ್ಕೆ ತರುತ್ತೇವೆ ಎಂದು ಅಧಿಕಾರಿಗಳ ವಾತಾಗಿದೆ.

ವರ್ಷದಿಂದ ರಸ್ತೆ ಅಭಿವೃದ್ಧಿಯಾಗದೆ ಗುಂಡಿಗಳು ಬಿದ್ದ ರಸ್ತೆಯಲ್ಲಿ ರಾತ್ರಿ ದ್ವಿಚಕ್ರ ವಾಹನಗಳಲ್ಲಿ ಬರಲು ಸಾಧ್ಯವಾಗುತ್ತಿಲ್ಲ. ಟೆಂಪೋ, ಲಾರಿಗಳು ರಸ್ತೆ ಹಾಳಾಗಿರುವುದರಿಂದ ತರಕಾರಿ ಕೊಂಡೊಯ್ಯಲು ಬರುತ್ತಿಲ್ಲ. ಕೋಲಾರದಿಂದ ಮಲ್ಲಸಂದ್ರ ಮೂಲಕ ಅಣ್ಣಿಹಳ್ಳಿಗೆ ಬರುವ ಕೆ.ಎಸ್.ಆರ್.ಟಿ.ಸಿ. ಬಸ್ಸು ಬರಲು ಸಾಧ್ಯವಾಗುತ್ತಿಲ್ಲ. ರಸ್ತೆ ಅಗಲೀಕರಣವೂ ಆಗಬೇಕಾಗಿದೆ. ನವೀನ್ ಕುಡುವನಹಳ್ಳಿ ನಿವಾಸಿ ಮಲ್ಲಸಂದ್ರ ಅಣ್ಣಿಹಳ್ಳಿ ರಸ್ತೆಯ ಬೆಳ್ಳಂಬರಿ ಸಮೀಪ ಗಾರ್ಮೆಂಟ್ ಕಾರ್ಖಾನೆ ಸ್ಥಾಪನೆಯಾಗಿರುವುದರಿಂದ ವಾಹನಗಳ ಸಂಚಾರದ ದಟ್ಟಣೆ ಹೆಚ್ಚಾಗಿದೆ. ಬಿದ್ದಿರುವ ಹಳ್ಳಗಳಿಗೆ ಸಾರ್ವಜನಿಕರೇ ಕಲ್ಲುಗಳನ್ನು ಹಾಕಿ ಮುಚ್ಚಲಾಗಿದೆ. ಬೆಳ್ಳಂಬರಿ ಸಮೀಪ ರಸ್ತೆ ತಗ್ಗಾಗಿರುವುದರಿಂದ ರಸ್ತೆಯ ಮೇಲೆಯೂ ನೀರು ಹರಿಯುತ್ತಿದೆ. ಇದರಿಂದ ಹಳ್ಳಗಳಿಗೆ ಮಣ್ಣು ಹಾಕಿದರೂ ನಿಲ್ಲುತ್ತಿಲ್ಲ. ಸಂಬಂಧಪಟ್ಟ ಇಲಾಖೆಯವರು ಗಮನ ಹರಿಸುತ್ತಿಲ್ಲ. ಕುಡುವನಹಳ್ಳಿ ಮತ್ತು ಬೆಳ್ಳಂಬರಿಗೆ ಬರುವವರು ಜನಟ್ಟ ಮೂಲಕ ಬರುವ ಸಂಪರ್ಕ ರಸ್ತೆಯಲ್ಲಿ ಓಡಾಡುವಂತಾಗಿದೆ. ಸದರಿ ರಸ್ತೆಯು ಹಾಳಾಗಿದೆ. ತುರ್ತಾಗಿ ರಸ್ತೆ ಅಭಿವದ್ಧಿ ಆಗಬೇಕಾಗಿದೆ. ಶಾಸಕರು ಗಮನ ಹರಿಸಿ ಯಾವುದಾದರೂ ಯೋಜನೆಯಿಂದ ರಸ್ತೆ ಅಭಿವೃದ್ಧಿಗೆ ಹಣ ಕೊಡಿಸಬೇಕಾಗಿದೆ. ಅಶ್ವಥ್‌ರೆಡ್ಡಿ ಬೆಳ್ಳಂಬರಿ ನಿವಾಸಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ರಸ್ತೆ ಅಭಿವೃದ್ಧಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶ್ರೀನಿವಾಸಪುರ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಣದೆ ಇರುವ ರಸ್ತೆಗಳ ಅಭಿವೃದ್ಧಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮಲ್ಲಸಂದ್ರದಿಂದ ಕೋಲಾರ ತನಕ ಮುಖ್ಯರಸ್ತೆಯ ಅಭಿವೃದ್ಧಿಗೂ ಹಣ ಮಂಜೂರಾಗಿದೆ. ಸದ್ಯದಲ್ಲಿಯೇ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಜಿ.ಕೆ.ವೆಂಕಟಶಿವಾರೆಡ್ಡಿ ಶ್ರೀನಿವಾಸಪುರ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net