ಮಳೆ ಹೊಡೆತಕ್ಕೆ ನಲುಗಿದ ಕೊಡೈಕೆನಾಲ್: ಭೂಕುಸಿತಕ್ಕೆ ಸಿಲುಕಿ ಪ್ರವಾಸಿಗರ ಪರದಾಟ | Kodaikanal landslide

ತಮಿಳುನಾಡಿನ ಪ್ರಸಿದ್ಧ ಗಿರಿಧಾಮ ಕೊಡೈಕೆನಾಲ್‌ನಲ್ಲಿ ಸುರಿದ ಭಾರಿ ಮಳೆಗೆ ಭಾರಿ ಭೂಕುಸಿತ ಉಂಟಾಗಿದೆ. ಸಿಲ್ವರ್ ಕ್ಯಾಸ್ಕೇಡ್ ಜಲಪಾತದ ಬಳಿ ಮಣ್ಣು ಕುಸಿದು ಬಿದ್ದಿದ್ದರಿಂದ, ನೂರಾರು ಪ್ರವಾಸಿಗರ ವಾಹನಗಳು ರಸ್ತೆಯಲ್ಲೇ ಸಿಲುಕಿ ಪರದಾಡುವಂತಾಯಿತು.
Kodaikanal Heavy Rain, landslide
ಕೊಡೈಕೆನಾಲ್‌ನಲ್ಲಿ ಮಳೆಯ ಅಬ್ಬರ
Published on: 

Kodaikanal Heavy Rain: ತಮಿಳುನಾಡಿನ ಪ್ರಸಿದ್ಧ ಗಿರಿಧಾಮ ಕೊಡೈಕೆನಾಲ್‌ನಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಭಾರಿ ಪ್ರಮಾಣದ ಮಣ್ಣು ಕುಸಿತ ಸಂಭವಿಸಿದ್ದು, ವಾರಾಂತ್ಯದ ರಜೆಗೆ ತೆರಳಿದ್ದ ನೂರಾರು ಪ್ರವಾಸಿಗರು ತೊಂದರೆಗೊಳಗಾಗಿದ್ದಾರೆ.

ಈಶಾನ್ಯ ಮುಂಗಾರು ಚುರುಕುಗೊಂಡಿರುವುದರಿಂದ ಕೊಡೈಕೆನಾಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುಮಾರು ಎರಡು ಗಂಟೆಗಳಿಗೂ ಹೆಚ್ಚು ಕಾಲ ಧೋ ಎಂದು ಮಳೆ ಸುರಿದಿದೆ. ಇದರಿಂದಾಗಿ ಸಿಲ್ವರ್ ಕ್ಯಾಸ್ಕೇಡ್ ಜಲಪಾತ ಹಾಗೂ ಶೆಂಬಗನೂರು ಜಂಕ್ಷನ್ ಬಳಿಯ ಘಾಟ್ ರಸ್ತೆಯಲ್ಲಿ ಬೆಟ್ಟದ ಮೇಲಿಂದ ಭಾರಿ ಪ್ರಮಾಣದ ಕೆಸರು ನೀರು, ಮಣ್ಣು ಮತ್ತು ದೊಡ್ಡ ಕಲ್ಲುಗಳು ದಿಢೀರನೆ ರಸ್ತೆಗೆ ಹರಿದುಬಂದವು.

ರಸ್ತೆ ಸಂಚಾರ ಸಂಪೂರ್ಣ ಬಂದ್

ಶ್ರೀನಿವಾಸಪುರಂ ಮತ್ತು ಶೆಂಬಗನೂರು ಜಂಕ್ಷನ್ ಸೇರಿದಂತೆ ಮುಖ್ಯ ಘಾಟ್ ರಸ್ತೆಯ ಕನಿಷ್ಠ ಮೂರು ಕಡೆಗಳಲ್ಲಿ ಮಣ್ಣು ಕುಸಿತ ಸಂಭವಿಸಿದೆ. ರಸ್ತೆಯ ಮೇಲೆ ಕಲ್ಲು ಮತ್ತು ಗಿಡಗಂಟಿಗಳು ಬಿದ್ದಿದ್ದರಿಂದ ವಾಹನ ಸಂಚಾರ ಸಂಪೂರ್ಣವಾಗಿ ಕಡಿತಗೊಂಡಿತ್ತು. ರಜೆಯ ಮೋಜಿನಲ್ಲಿದ್ದ ಪ್ರವಾಸಿಗರ ನೂರಾರು ಕಾರುಗಳು ಹಾಗೂ ಬಸ್ಸುಗಳು ಸುಮಾರು 2 ಗಂಟೆಗಳ ಕಾಲ ರಸ್ತೆಯಲ್ಲೇ ಸಾಲಾಗಿ ನಿಂತು ಪರದಾಡುವಂತಾಯಿತು.

ಸುದ್ದಿ ತಿಳಿದ ತಕ್ಷಣ ಹೆದ್ದಾರಿ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಜೆಸಿಬಿ ಯಂತ್ರಗಳ ಸಹಾಯದಿಂದ ರಸ್ತೆಯಲ್ಲಿದ್ದ ಮಣ್ಣು ಹಾಗೂ ಕಲ್ಲುಗಳನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಇದನ್ನೂ ಓದಿ: ದಸರಾದಲ್ಲಿ ಗಮನ ಸೆಳೆದ 'ಮಹಿಳಾ ಸುರಕ್ಷತೆ' ಅಭಿಯಾನ: ಅತ್ಯಾಚಾರಿಗಳಿಗೆ ಮರಣದಂಡನೆಗೆ ಆಗ್ರಹ! | Women safety campaign

ಪ್ರವಾಸಿಗರಿಗೆ ಆಡಳಿತದ ಎಚ್ಚರಿಕೆ

ಕೊಡೈಕೆನಾಲ್ ಹಾಗೂ ತಾಂಡಿಕುಡಿ ಗುಡ್ಡಗಾಡು ಪ್ರದೇಶಗಳಲ್ಲಿ ಇನ್ನು ಸಹ ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣ, ಸಾರ್ವಜನಿಕರು ಮತ್ತು ಪ್ರವಾಸಿಗರು ಸದ್ಯಕ್ಕೆ ಈ ಭಾಗಕ್ಕೆ ಪ್ರಯಾಣ ಬೆಳೆಸದಂತೆ ಸ್ಥಳೀಯ ಆಡಳಿತ ಮತ್ತು ಪೊಲೀಸರು ಮುನ್ನೆಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net