ರೇವ್ ಪಾರ್ಟಿಗೆ ತೆಲುಗು ನಟಿ ಬಂದಿದ್ದು ನಿಜ

actress Hema Gives Clarity About Bengaluru Rave Party News
Published on

ಬೆಂಗಳೂರು: ಎಲೆಕ್ಟ್ರಾನಿಕ್ಸ್ ಸಿಟಿ ಸಮೀಪದ ಫಾಮ್೯ ಹೌಸ್‌ನಲ್ಲಿ ನಡೆದಿದ್ದ ರೇವ್ ಪಾರ್ಟಿಯಲ್ಲಿ ತೆಲುಗು ನಟಿ ಹೇಮಾ ಭಾಗವಹಿಸಿದ್ದು ನಿಜ. ಆದರೆ ರಾಜಕಾರಣಿಗಳು ಯಾರು ಇರಲಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ರೇವ್ ಪಾರ್ಟಿ ಮೇಲೆ ದಾಳಿ ನಡೆಸಿದಾಗ ಮಾದಕದ್ರವ್ಯ ಪತ್ತೆಯಾಗಿವೆ. ಈ ಸಂಬಂಧ ವಿ. ರಣಧೀರ್ (43), ಮೊಹಮ್ಮದ್ ಅಬ್ದುಬಕರ್ ಸಿದ್ಧಿಕಿ (29), ಎಲ್. ವಾಸು (35) ಮತ್ತು ವೈ.ಎಂ. ಅರುಣ್ ಕುಮಾರ್ (35) ಎಂಬುವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಬಿ. ದಯಾನಂದ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಖಚಿತ ಮಾಹಿತಿ ಮೇರೆಗೆ ಪೊಲೀಸರು ಫಾಮ್೯ ಹೌಸ್ ಮೇಲೆ ದಾಳಿ ನಡೆಸಿದ್ದಾರೆ. ರೂಮ್‌ವೊಂದರಲ್ಲಿ ತೆಲುಗು ನಟಿ ಹೇಮಾ ಮಲಗಿದ್ದರು. ಅವರನ್ನು ಎಚ್ಚರಗೊಳಿಸಿ ಪೊಲೀಸ್ ಎಂದು ಹೇಳಿದಾಗ ಗಾಬರಿಗೊಂಡರು. ನನ್ನ ಹೆಸರು ಎಲ್ಲಿಯೂ ಹೇಳದಂತೆ ಮನವಿ ಮಾಡಿದರು. ಕೊನೆಗೆ ರೂಮ್‌ನಲ್ಲಿ ಇರಲೆಂದು ಪೊಲೀಸರು ಹೊರಬಂದಾಗ ಹೈದರಾಬಾದ್‌ನ ಫಾಮ್೯ ಹೌಸ್‌ನಲ್ಲಿ ಇರುವುದಾಗಿ ವಿಡಿಯೋ ಮಾಡಿ ಅಲ್ಲಿನ ಸ್ನೇಹಿತರಿಗೆ ವಾಟ್ಸ್‌ಆ್ಯಪ್‌ನಲ್ಲಿ ಕಳುಹಿಸಿ ಮತ್ತೆ ಡಿಲೀಟ್ ಮಾಡಿದ್ದರು. ಜಾಲತಾಣದಲ್ಲಿ ವಿಡಿಯೋ ವೈರಲ್ ಆದ ಮೇಲೆ ಪೊಲೀಸರಿಗೆ ವಿಷಯ ಗೊತ್ತಾಗಿದೆ. ರೇವ್ ಪಾರ್ಟಿಯಲ್ಲಿ ತೆಲುಗು ನಟಿ ಭಾಗವಹಿಸಿದ್ದು ನಿಜ. ಆದರೆ, ಯಾವುದೇ ರಾಜಕಾರಣಿ ಇರಲಿಲ್ಲ. ಆಂಧ್ರಪ್ರದೇಶದ ಶಾಸಕರೊಬ್ಬರ ಕಾರ್ ಪಾಸ್ ಪತ್ತೆಯಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ವಿವರಿಸಿದರು.

ಪಾರ್ಟಿಯಲ್ಲಿ ಭಾಗವಹಿಸಿದ್ದ 101 ಮಂದಿಯ ರಕ್ತದ ಮಾದರಿ ಪಡೆದು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದೆ. ಮಾದಕದ್ರವ್ಯ ಸೇವನೆ ಮಾಡಿರುವುದು ದೃಢವಾದರೆ ಡ್ರಗ್ಸ್ ವ್ಯಸನಿಗಳು ಎಂದು ಪರಿಗಣಿಸಿ ನೋಟಿಸ್ ಕೊಟ್ಟು ವಿಚಾರಣೆಗೆ ಕರೆಯಲಾಗುತ್ತದೆ. ವಿಚಾರಣೆಗೆ ಹಾಜರಾಗದಿದ್ದರೆ ಮುಂದಿನ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಆಯುಕ್ತರು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net