

ವಾಷಿಂಗ್ಟನ್: ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈ ಪ್ರತಿಭಟನೆಗಳು ಸಾಮೂಹಿಕ ವಲಸೆಯನ್ನು ಪ್ರತಿಬಿಂಬಿಸುತ್ತವೆ. ಮತ್ತು ದೇಶದ ಮೇಲೆ ಇಸ್ಲಾಂ ತನ್ನ ಹಿಡಿತ ಸಾಧಿಸಲು ಬಯಸುತ್ತಿದೆ ಎಂದು ಹೇಳಿದ್ದಾರೆ.
ಈ ಕುರಿತು ಬುಧವಾರ(ಅ. 07) ತಮ್ಮ ಟ್ರೂತ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿರುವ ಟ್ರಂಪ್, ಫ್ರಾನ್ಸ್‌ನಲ್ಲಿ ನಡೆಯುತ್ತಿರುವುದು ನಿಯಂತ್ರಣ ಮೀరిದ ಸಾಮೂಹಿಕ ವಲಸೆಯ ಹೊರತಾಗಿ ಬೇರೇನೂ ಅಲ್ಲ. ಇದು ಶಾಲೆಗಳ ಬಗ್ಗೆ ಅಲ್ಲ, ಬದಲಾಗಿ, ಒಂದು ಕಾಲದಲ್ಲಿದ್ದ ಶ್ರೇಷ್ಠವಾಗಿದ್ದ ದೇಶವೊಂದರ ಮೇಲೆ ಇಸ್ಲಾಂ ತನ್ನ ಹಿಡಿತ ಸಾಧಿಸಲು ಬಯಸುತ್ತಿರುವ ವಿಷಯವಿದು ಎಂದು ಪ್ರತಿಪಾದಿಸಿದ್ದಾರೆ.
ಮಂಗಳವಾರ(ಅ. 06) ಫ್ರಾನ್ಸ್‌ನ ದೇಶಾದ್ಯಂತ ದೊಡ್ಡ ದೊಡ್ಡ ನಗರಗಳಲ್ಲಿ ಭಾರಿ ಪ್ರತಿಭಟನೆ ನಡೆದಿದ್ದು, 2,66,000 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು, ಇದರಲ್ಲಿ ಪ್ಯಾರಿಸ್‌ನಲ್ಲಿ 56,000 ಜನರು ಭಾಗವಹಿಸಿದ್ದರು ಎಂದು ಫ್ರಾನ್ಸ್‌ನ ಆಂತರಿಕ ಸಚಿವಾಲಯ ತಿಳಿಸಿದೆ.
ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚಿನ ಹಣವನ್ನು ನೀಡುವಂತೆ ಒತ್ತಾಯಿಸಿ ಕಳೆದ ತಿಂಗಳಿನಿಂದ ಪ್ರೌಢಶಾಲೆಯಲ್ಲಿ ಪ್ರಾರಂಭವಾದ ವಿದ್ಯಾರ್ಥಿಗಳ ಪ್ರತಿಭಟನೆಗಳು, ದೇಶಾದ್ಯಂತ ಹರಡಿವೆ. ಮತ್ತು ಅಲ್ಲಲ್ಲಿ ಪೊಲೀಸರು ಅಶ್ರುವಾಯು ಸಿಡಿಸಿ ಪ್ರತಿಭಟನಾಕಾರರನ್ನು ಚದುರಿಸಲು ಪ್ರಯತ್ನಿಸಿದ್ದು, ಘರ್ಷಣೆ ನಡೆದಿದೆ.
ಇನ್ನೂ ಪ್ರತಿಭಟನೆಗಳು ಪ್ರಾರಂಭವಾದಾಗಿನಿಂದ ಪೊಲೀಸರು 6,500 ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ. ಇದರಲ್ಲಿ ಹೆಚ್ಚಿನವರು ಅಪ್ರಾಪ್ತ ವಯಸ್ಕರು ಸೇರಿದ್ದಾರೆ. ಹಾಗೂ ಹದಿಹರೆಯದವರ ವಿರುದ್ಧ ಅಶ್ರುವಾಯು, ಲಾಠಿ ಪ್ರಹಾರ ಮತ್ತು ಇತರ ಗಲಭೆ ನಿಯಂತ್ರಣ ಶಸ್ತ್ರಾಸ್ತ್ರಗಳನ್ನು ಬಳಸಿದ್ದಕ್ಕೆ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರಿಂದ ಟೀಕೆ ವ್ಯಕ್ತವಾಗಿದೆ (ಏಜೆನ್ಸೀಸ್).