

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಅಪರಿಚಿತ ಬಂದೂಕುಧಾರಿಗಳ ಬೇಟೆ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಇತ್ತೀಚೆಗೆ ಪಾಕಿಸ್ತಾನದ ಪಂಜಾಬ್ ಪ್ರದೇಶದಲ್ಲಿ ಮಧ್ಯಾಹ್ನದ ಸುಡು ಬಿಸಿಲಿನಲ್ಲಿ ವ್ಯಕ್ತಿಯೋರ್ವನ ಮೇಲೆ ಅಪರಿಚಿತ ಬಂದೂಕುಧಾರಿಗಳು ಗುಂಡಿನ ಮಳೆಗೆರೆದಿದ್ದು, ಮೃತ ವ್ಯಕ್ತಿಯನ್ನು ಕುಖ್ಯಾತ ಭಯೋತ್ಪಾದನಾ ಗುಂಪಾದ ಲಷ್ಕರ್-ಎ-ತೊಯ್ಬಾದ ಕಮಾಂಡರ್ ಇಮ್ರಾನ್ ಖಾನ್ ಎಂದು ಹೇಳಲಾಗುತ್ತಿದೆ.
ಈ ಇಮ್ರಾನ್ ಖಾನ್, ಒಬ್ಬ ಉಗ್ರಗಾಮಿಯಾಗಿದ್ದು, ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಜತೆಗೆ ನಿಕಟ ಸಂಪರ್ಕ ಹೊಂದಿದ್ದನೆಂದು ಹೇಳಲಾಗುತ್ತಿದೆ. ಆದರೆ, ಈ ಶೂಟೌಟ್ನಲ್ಲಿ ಸತ್ತವನು ಇದೇ ಇಮ್ರಾನ್ ಖಾನ್ ಎಂದು ಇದುವರೆಗೆ ಸ್ಪಷ್ಟವಾಗಿ ತಿಳಿದು ಬಂದಿಲ್ಲ.
ಈ ಘಟನೆ ಕುರಿತು ಸೋಷಿಯಲ್ ಮೀಡಿಯಾನಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಈ ಘಟನೆ ಮಂಗಳವಾರ (ಅ.14) ಮಧ್ಯಾಹ್ನ 11.30 ಸುಮಾರಿಗೆ ನಡೆದಿದೆ. ಈ ವಿಡಿಯೋನಲ್ಲಿ ವ್ಯಕ್ತಿಯೊಬ್ಬ ತನ್ನ ಬೈಕ್ ಏರಿ ಹೊರಡುತ್ತಿದ್ದಾಗ, ಬಿಳಿ ಬಣ್ಣದ ಬಟ್ಟೆ ಧರಿಸಿರುವ ಬಂದೂಕುಧಾರಿ ಇತನ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾನೆ. ಗುಂಡು ತಗಲುತ್ತಿದ್ದಂತೆ ಬೈಕ್ನಿಂದ ನೆಲಕ್ಕೆ ಬಿದ್ದ ವ್ಯಕ್ತಿ, ಬಂದೂರುಧಾರಿಯನ್ನು ತಡೆಯಲು ವಿಫಲ ಯತ್ನ ನಡೆಸಿದ್ದಾನೆ. ಆದರೆ, ಭರ್ತಿ ಎರಡು ಮ್ಯಾಗಜೀನ್ ಗುಂಡು ತಗುಲಿದ ಹಿನ್ನಲೆ ಆ ವ್ಯಕ್ತಿ ಸ್ಥಳದಲ್ಲೇ ಕುಸಿದು ಬಿದ್ದು, ಸಾವನ್ನಪ್ಪಿದ್ದಾನೆ. ಇನ್ನು ಗುಂಡಿನ ದಾಳಿ ನಡೆಸಿದ ವ್ಯಕ್ತಿ ದಾಳಿ ಬಳಿಕ ಪರಾರಿಯಾಗಿದ್ದಾನೆ.
ಆದರೆ, ಈ ವಿಡಿಯೋ ಹಾಗೂ ಘಟನೆಯಲ್ಲಿ ಸತ್ತವನು ಲಷ್ಕರ್ ಕಮಾಂಡರ್, ಇಮ್ರಾನ್ ಖಾನ್ ಎಂದು ಇಲ್ಲಿವರೆಗೆ ತಿಳಿದುಬಂದಿಲ್ಲ. ಹಾಗೆಯೇ ಈ ಕುರಿತು ಪಾಕ್ ಪೊಲೀಸರಾಗಲೀ, ಅಲ್ಲಿಯ ಮಾಧ್ಯಮಗಳಾಗಲೀ ಸತ್ತವನ ಮಾಹಿತಿಯನ್ನು ಇಲ್ಲಿವರೆಗೆ ಹಂಚಿಕೊಂಡಿಲ್ಲ. ಹೀಗಾಗಿ ಅಧಿಕೃತ ಮಾಹಿತಿ ದೊರೆಯುವವರೆಗೆ ಇಲ್ಲಿ ಸತ್ತವನು ಪಾಕ್ ಮೂಲದವನು ಎಂದಷ್ಟೇ ನಾವು ಊಹಿಸ ಬಹುದಾಗಿದ್ದು, ಇದು ಉಗ್ರ ಇಮ್ರಾನ್ ಖಾನ್ ಎಂದು ಹೇಳಲಾಗುವುದಿಲ್ಲ.
ಆದರೆ, ಕಳೆದ ಏಳೆಂಟು ತಿಂಗಳಲ್ಲಿ ಪಾಕಿಸ್ತಾನ, ಅದರಲ್ಲೂ ಪಂಜಾಬ್, ಗಿಲ್ಟಿಟ್, ಬಾಲ್ಟಿಸ್ತಾನ ಪ್ರದೇಶದಲ್ಲಿ ಅಪರಿಚಿತ ಬಂದೂಕುಧಾರಿಗಳ ಮೂಲಕ ಲಷ್ಕರ್, ಹಿಂದೂಸ್ತಾನ್ ಮುಜಾಹಿದ್ದೀನ್ ಸಂಘಟನೆ ಜೊತೆ ಗುರುತಿಸಿಕೊಂಡಿದ್ದ ಭಯೋತ್ಪಾದರ ಸಂಹಾರ ನಡೆಯುತ್ತಿರುವುದಂತು ನಿಜವಾಗಿದೆ, (ಏಜೆನ್ಸೀಸ್).