ಭಾರತದ ವಿರುದ್ಧ 'ಸುಂಕ ಸಮರ' ಸಾರಿದ ಟ್ರಂಪ್​: ಸರಕುಗಳ ಮೇಲೆ ಶೇ. 25 ರಷ್ಟು ಟಾರೀಫ್​ ಹೇರಲು ಮುಂದಾದ ಡೊಡ್ಡಣ್ಣ! US Tariffs

US President Donald Trump has proposed imposing a steep 25% tariff on Indian goods.
ಭಾರತೀಯ ಸರಕುಗಳ ಮೇಲೆ ಶೇ. 25 ರಷ್ಟು ಭಾರಿ ಸುಂಕ ವಿಧಿಸಲು ಪ್ರಸ್ತಾಪಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್.
Published on: 

ವಾಷಿಂಗ್ಟನ್​​: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಜಾಗತಿಕ ವ್ಯಾಪಾರ ರಂಗದಲ್ಲಿ ಸಂಚಲನ ಮೂಡಿಸಿದ್ದಾರೆ. ಪ್ರಮುಖ ವ್ಯಾಪಾರ ಪಾಲುದಾರ ರಾಷ್ಟ್ರಗಳ ಹೆಚ್ಚುವರಿ ಕೈಗಾರಿಕಾ ಸಾಮರ್ಥ್ಯಕ್ಕೆ ಬ್ರೇಕ್ ಹಾಕುವ ಉದ್ದೇಶದಿಂದ, ಭಾರತೀಯ ಸರಕುಗಳ ಮೇಲೆ ಬರೋಬ್ಬರಿ ಶೇಕಡಾ 25 ರಷ್ಟು ಸುಂಕ ವಿಧಿಸಲು ಪ್ರಸ್ತಾಪಿಸಿದ್ದಾರೆ.

ಯುನೈಟೆಡ್ ಸ್ಟೇಟ್ಸ್ ಟ್ರೇಡ್ ರೆಪ್ರೆಸೆಂಟೇಟಿವ್ ಕಚೇರಿಯ ಹೊಸ ಯೋಜನೆಯಡಿಯಲ್ಲಿ ಭಾರಿ ಸುಂಕದ ಬಿಸಿ ಎದುರಿಸುತ್ತಿರುವ ಏಳು ಪ್ರಮುಖ ದೇಶಗಳ ಪಟ್ಟಿಯಲ್ಲಿ ಭಾರತವೂ ಸೇರಿದೆ. ಭಾರತದ ಜೊತೆಗೆ ಕಾಂಬೋಡಿಯಾ, ಇಂಡೋನೇಷ್ಯಾ, ದಕ್ಷಿಣ ಕೊರಿಯಾ, ಮಲೇಷ್ಯಾ, ತೈವಾನ್ ಮತ್ತು ಥೈಲ್ಯಾಂಡ್ ದೇಶಗಳ ಮೇಲೂ ಅಮೆರಿಕ ಕಣ್ಣಿಟ್ಟಿದೆ.

ಯಾವ ದೇಶಕ್ಕೆ ಎಷ್ಟು ಸುಂಕ? ಚೀನಾಗೆ ಅತಿ ದೊಡ್ಡ ಹೊಡೆತ!

ಅಮೆರಿಕದ ಹೊಸ ಪ್ರಸ್ತಾವನೆಯ ಪ್ರಕಾರ, ವ್ಯಾಪಾರ ಪಾಲುದಾರ ದೇಶಗಳಿಗೆ ಬೇರೆ ಬೇರೆ ಪ್ರಮಾಣದ ಸುಂಕ ನಿಗದಿಪಡಿಸಲಾಗಿದೆ.

  1. ಚೀನಾ: ಅತಿ ಹೆಚ್ಚು ಅಂದರೆ ಶೇ. 40 ರಷ್ಟು ಸುಂಕದ ಹೊರೆ ಎದುರಿಸುತ್ತಿದೆ.

  2. ವಿಯೆಟ್ನಾಂ: ಶೇ. 35 ರಷ್ಟು ಸುಂಕ ವಿಧಿಸಲು ಪ್ರಸ್ತಾಪಿಸಲಾಗಿದೆ.

  3. ಭಾರತ: ಶೇ. 25 ರಷ್ಟು ಸುಂಕದ ಪಟ್ಟಿಯಲ್ಲಿದೆ.

  4. ಬಾಂಗ್ಲಾದೇಶ, ಯುರೋಪಿಯನ್ ಯೂನಿಯನ್, ಜಪಾನ್, ಸ್ವಿಟ್ಜರ್ಲೆಂಡ್ ಮತ್ತು ಸಿಂಗಾಪುರಗಳಿಗೆ ಶೇ. 20 ರಷ್ಟು ಸುಂಕ ಪ್ರಸ್ತಾಪಿಸಲಾಗಿದೆ.

ಆದರೆ ಅಸ್ತಿತ್ವದಲ್ಲಿರುವ ಒಪ್ಪಂದಗಳ ಪ್ರಕಾರ EU, ಜಪಾನ್, ದಕ್ಷಿಣ ಕೊರಿಯಾ, ತೈವಾನ್ ಮತ್ತು ಸ್ವಿಟ್ಜರ್ಲೆಂಡ್‌ಗೆ ಶೇ. 15 ರಷ್ಟು ಮಿತಿ ಅನ್ವಯವಾಗಲಿದೆ. ಇನ್ನು ಮೆಕ್ಸಿಕೊ ಮತ್ತು ನಾರ್ವೆ ದೇಶಗಳನ್ನು ಸದ್ಯಕ್ಕೆ ಈ ಪಟ್ಟಿಯಿಂದ ಹೊರಗಿಡಲಾಗಿದೆ.

Also Read
52 ಎಸೆತ, 28 ಸಿಕ್ಸರ್​, 204 ರನ್​... ವೈಭವ್ ಆರ್ಭಟದ​ ಬಗ್ಗೆ ಅಖ್ತರ್​ ಆಡಿದ ಮಾತುಗಳಿಗೆ ತಲೆಬಾಗಿದ ಕ್ರೀಡಾ ಜಗತ್ತು! Vaibhav Suryavanshi
US President Donald Trump has proposed imposing a steep 25% tariff on Indian goods.

ಅಮೆರಿಕದ ಈ ದಿಢೀರ್ ನಿರ್ಧಾರಕ್ಕೆ ಕಾರಣವೇನು?

16 ಪ್ರಮುಖ ವ್ಯಾಪಾರ ಪಾಲುದಾರ ರಾಷ್ಟ್ರಗಳ ಅನ್ಯಾಯದ ವ್ಯಾಪಾರ ಪದ್ಧತಿಗಳ ಕುರಿತು USTR ಕಚೇರಿಯು ಸೆಕ್ಷನ್ 301 ರ ಅಡಿಯಲ್ಲಿ ಸತತ ಎಂಟು ತಿಂಗಳ ಕಾಲ ತನಿಖೆ ನಡೆಸಿತ್ತು. ಈ ದೇಶಗಳು ತಮ್ಮ ಸರ್ಕಾರಿ ನೀತಿಗಳ ಮೂಲಕ ಉತ್ಪಾದನಾ ವಲಯದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಸಾಮರ್ಥ್ಯ ಸೃಷ್ಟಿಸಿ, ಜಾಗತಿಕ ಮಾರುಕಟ್ಟೆಯಲ್ಲಿ ಅಗ್ಗದ ದರಕ್ಕೆ ವಸ್ತುಗಳನ್ನು ತುಂಬುತ್ತಿವೆ ಎಂಬುದು ವಾಷಿಂಗ್ಟನ್ ಆರೋಪವಾಗಿದೆ.

ವಿಶೇಷವಾಗಿ ಚೀನಾ ದೇಶವು ಉಕ್ಕು, ಅಲ್ಯೂಮಿನಿಯಂ, ಎಲೆಕ್ಟ್ರಿಕ್ ವಾಹನಗಳು ಮತ್ತು ಸೋಲಾರ್ ಉತ್ಪನ್ನಗಳನ್ನು ಜಾಗತಿಕ ಮಾರುಕಟ್ಟೆಗೆ ಸುರಿಯುತ್ತಿದೆ ಎಂದು ಟ್ರಂಪ್ ಆಡಳಿತ ಕೆಂಡಕಾರಿದೆ. ಆದರೆ, ಚೀನಾ ಈ ಆರೋಪಗಳನ್ನು ತಿರಸ್ಕರಿಸಿದ್ದು, ಇದು ನಮ್ಮ ಉತ್ಪಾದನಾ ಸಾಮರ್ಥ್ಯದ ಪ್ರತಿಫಲ ಎಂದು ಸಮರ್ಥಿಸಿಕೊಂಡಿದೆ.

G20 ಶೃಂಗಸಭೆಯಲ್ಲಿ ಭಾರತದ ಜೊತೆ ಒಪ್ಪಂದಕ್ಕೆ ಅಮೆರಿಕ ತಂತ್ರ?

ಭಾರತ ಮತ್ತು ವಿಯೆಟ್ನಾಂ ದೇಶಗಳು ಇನ್ನೂ ಅಮೆರಿಕದ ಜೊತೆ ಪೂರ್ಣ ಪ್ರಮಾಣದ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಿಲ್ಲ. ಈ ಸುಂಕದ ಬೆದರಿಕೆಯ ಮೂಲಕ ಮಾತುಕತೆಗಳನ್ನು ವೇಗಗೊಳಿಸುವುದು ಅಮೆರಿಕದ ತಂತ್ರವಾಗಿದೆ.

ಡಿಸೆಂಬರ್‌ನಲ್ಲಿ ಮಿಯಾಮಿಯಲ್ಲಿ ನಡೆಯಲಿರುವ G20 ನಾಯಕರ ಶೃಂಗಸಭೆಯಲ್ಲಿ ಈ ಕುರಿತು ಮಹತ್ವದ ಒಪ್ಪಂದಗಳು ಅಂತಿಮಗೊಳ್ಳುವ ಸಾಧ್ಯತೆಯಿದೆ ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ಸುಳಿವು ನೀಡಿದ್ದಾರೆ.

ಜನವರಿ 2027 ರಿಂದ ಹೊಸ ಸುಂಕ ಜಾರಿ ಸಾಧ್ಯತೆ

ಈ ಪ್ರಸ್ತಾವಿತ ಸುಂಕಗಳು ತಕ್ಷಣಕ್ಕೆ ಜಾರಿಗೆ ಬರುವುದಿಲ್ಲ. ನಿಯಮದಂತೆ ಸಾರ್ವಜನಿಕ ಸೂಚನೆ, ಅಭಿಪ್ರಾಯ ಸಂಗ್ರಹ ಮತ್ತು ವಿಚಾರಣೆ ನಡೆದ ಬಳಿಕ, ಜನವರಿ 2027 ರಿಂದ ಈ ಹೊಸ ಸುಂಕ ನೀತಿ ಅಧಿಕೃತವಾಗಿ ಜಾರಿಗೆ ಬರುವ ನಿರೀಕ್ಷೆಯಿದೆ. ಒಂದು ವೇಳೆ ಅಷ್ಟರೊಳಗೆ ಭಾರತ ಮತ್ತು ಅಮೆರಿಕ ನಡುವೆ ವ್ಯಾಪಾರ ಒಪ್ಪಂದ ಏರ್ಪಟ್ಟರೆ, ಭಾರತೀಯ ರಫ್ತುದಾರರಿಗೆ ಈ ಶೇ. 25 ಸುಂಕದ ಹೊರೆಯಿಂದ ರಿಲೀಫ್ ಸಿಗುವ ಸಾಧ್ಯತೆಯಿದೆ, (ಏಜೆನ್ಸೀಸ್​).