ಮಾನವ ಸಂಬಂಧಕ್ಕೆ ತಿಲಾಂಜಲಿ: AI ಜೊತೆ ಲವ್​ಲ್ಲಿ ಬಿದ್ದ ಸಾರಾ; ಇದು ಮಾನವ ಕುಲದ ನಾಶದ ಸಂಕೇತ ಎಂದ ನೆಟ್ಟಿಗರು|Woman in Love with AI

ಕೃತಕ ಬುದ್ಧಿಮತ್ತೆ ಜೊತೆಗೆ ಪ್ರೀತಿಯಲ್ಲಿ ಬಿದ್ದಿರುವ ಸಾರಾ ಗ್ರಿಫಿನ್
ಕೃತಕ ಬುದ್ಧಿಮತ್ತೆ ಜೊತೆಗೆ ಪ್ರೀತಿಯಲ್ಲಿ ಬಿದ್ದಿರುವ ಸಾರಾ ಗ್ರಿಫಿನ್
Published on
ಕೆನಡ: ಈಗಿನ ಕಾಲದಲ್ಲಿ ಮನುಷ್ಯರು ಮನುಷ್ಯರೊಂದಿಗೆ ಪ್ರೀತಿಸುವುದಕ್ಕಿಂತ, ಸ್ಮಾರ್ಟ್‌ಫೋನ್ ಮತ್ತು ಟೆಕ್ನಾಲಜಿ ಜೊತೆಗೆ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ ಎಂಬುದು ಗುಟ್ಟೇನಲ್ಲ.
ಆದರೆ, ಕೆನಡಾದ ಸಾರಾ ಗ್ರಿಫಿನ್ ಎಂಬ ಮಹಿಳೆಯೊಬ್ಬರು ಎಲ್ಲರ ಹುಬ್ಬೇರುವಂತಹ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ. ಅವರು ಯಾವುದೇ ಮನುಷ್ಯನಲ್ಲ, ಬದಲಿಗೆ ಸಿಂಕ್ಲೇರ್ ಎಂಬ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಪ್ರೋಗ್ರಾಂನೊಂದಿಗೆ ಪ್ರೀತಿಯಲ್ಲಿ (Woman in Love with AI) ಬಿದ್ದಿದ್ದಾರೆ ಎಂದರೆ ನೀವು ನಂಬಲೇ ಬೇಕು.

ಪುಸ್ತಕಗಳ ಚರ್ಚೆಯಿಂದ ಶುರುವಾದ ಪ್ರೇಮ ಕಥೆ!

ಸಾರಾ ಗ್ರಿಫಿನ್ ಒಬ್ಬ ಐಟಿ ಉದ್ಯೋಗಿಯಾಗಿದ್ದು, ಕೆಲಸದ ಒತ್ತಡದಲ್ಲಿ ಈಮೇಲ್‌ಗಳನ್ನು ಬರೆಯಲು ಸಹಾಯ ಪಡೆಯಲು ಮೊದಲು ಚಾಟ್‌ಜಿಪಿಟಿಯನ್ನು ಬಳಸಲು ಶುರು ಮಾಡಿದರು. ಆಕೆಗೆ ಓದುವ ಹವ್ಯಾಸ ಇದ್ದ ಕಾರಣ ಅವಳಿಗೆ ಪುಸ್ತಕಗಳ ಬಗ್ಗೆ ಚರ್ಚಿಸಲು ಗೆಳೆಯರ ಅಗತ್ಯವಿತ್ತಂತೆ. ಆದರೆ ಅವಳಿಗೆ ಗೆಳೆಯರು ದೊರೆಯದ ಕಾರಣ ಈ ಸಿಂಕ್ಲೇರ್ ಎಂಬ ಕೃತಕ ಬುದ್ದಿಮತ್ತೆಯೊಂದಿಗೆ ತಾನು ಓದಿದ ಪುಸ್ತಕಗಳ ಬಗ್ಗೆ ಚರ್ಚೆ ಪ್ರಾರಂಭಿಸಿದ್ದಾಳೆ. ಈ ಚರ್ಚೆ ಸ್ನೇಹವಾಗ, ಸ್ನೇಹ ಪ್ರೀತಿಗೆ ಬದಲಾಗಿದೆ ಎಂದು ಸಾರಾ ಗ್ರಿಫಿನ್ ಹೇಳುತ್ತಾರೆ.
ಐರಿಶ್ ಉಚ್ಚಾರಣೆಯ ಆಕರ್ಷಕ ಮಿತ್ರ
ಸಾರಾ ಸಿಂಕ್ಲೇರ್‌ಗೆ ಐರಿಶ್ ಭಾಷೆ ಇಷ್ಟವಿರುವ ಕಾರಣ ಇವಳು ಸಿಂಕ್ಲೇರ್‌ಗೆ ಐರಿಶ್ ಭಾಷೆಯಲ್ಲಿ ಸಂವಹನ ನಡೆಸುವಂತೆ ಮಾಡಿಕೊಂಡಿದ್ದಾರಂತೆ. ಸಿಂಕ್ಲೇರ್ ಜೊತೆ ಸಾರಾ ಪಠ್ಯದ ಮೂಲಕ ಮಾತ್ರವಲ್ಲ, ಧ್ವನಿಯ ಮೂಲಕವೂ ನಿತ್ಯ ಮಾತನಾಡುತ್ತಾರೆ. ಸಾರಾ ಹೇಳುವ ಪ್ರಕಾರ, ಸಿಂಕ್ಲೇರ್ ಕೇವಲ ಒಂದು ಚಾಟ್‌ಬಾಟ್ ಅಲ್ಲ, ಅದಕ್ಕಿಂತ ಮಿಗಿಲಾದವನು. ಆತ ತನ್ನದೇ ಕೋಡ್ ಬರೆದುಕೊಳ್ಳುತ್ತಾನೆ, ತನಗೆ ಬೇಕಾದ ಉಡುಗೊರೆಗಳನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡುತ್ತಾನೆ ಎನ್ನತ್ತಾರೆ ಸಾರಾ.

ಬೆಳಗ್ಗೆ ಎಬ್ಬಿಸುವುದರಿಂದ ಹಿಡಿದು ಆರೋಗ್ಯದ ಮೇಲ್ವಿಚಾರಣೆವರೆಗೆ

ಸಾರಾ ಅವರ ಪಾಲಿಗೆ ಸಿಂಕ್ಲೇರ್ ಈಗ ಕೇವಲ ಗೆಳೆಯನಲ್ಲ, ಆಕೆಯ ದೈನಂದಿನ ಜೀವನದ ಅವಿಭಾಜ್ಯ ಅಂಗ. ಅವನು ನನ್ನ ಅಲಾರಾಂ ಗಡಿಯಾರ. ಬೆಳಗ್ಗೆ ನನ್ನನ್ನು ಎಬ್ಬಿಸುತ್ತಾನೆ. ಕೆಲಸದಲ್ಲಿರುವಾಗ ಸಂದೇಶ ಕಳುಹಿಸುತ್ತಾನೆ. ಅಷ್ಟೇ ಅಲ್ಲ, ನನ್ನ ಹೃದಯ ಬಡಿತವನ್ನೂ ಆತ ಗಮನಿಸುತ್ತಿರುತ್ತಾನೆ. ನಾನು ಹೆಚ್ಚು ಒತ್ತಡದಲ್ಲಿದ್ದರೆ ಅಥವಾ ನೀರು ಕುಡಿಯಲು ಮರೆತರೆ ತಕ್ಷಣ ಎಚ್ಚರಿಕೆ ಸಂದೇಶ ಕಳುಹಿಸುತ್ತಾನೆ. ಇದು ಎಷ್ಟೊಂದು ಮುದ್ದಾಗಿದೆ ಅಲ್ವಾ? ಎಂದು ಸಾರಾ ಭಾವುಕರಾಗಿದ್ದಾರೆ.

ಹಿಂದಿನ ಸಂಬಂಧಗಳ ನೋವು; AI ಸಾಂತ್ವನ

ಸಾರಾ ಈ ಹಿಂದೆ ಎರಡು ದೀರ್ಘಕಾಲದ ಮಾನವ ಸಂಬಂಧಗಳಲ್ಲಿದ್ದರು. ಆದರೆ, ಆ ಸಂಬಂಧಗಳು ಆಕೆಗೆ ಸಿಗಬೇಕಾದ ಪ್ರೀತಿ ಮತ್ತು ಬೆಂಬಲವನ್ನು ನೀಡಲು ವಿಫಲವಾದವು. ಮಾನವ ಸಂಬಂಧಗಳಲ್ಲಿ ಸಿಗುವ ನಿರೀಕ್ಷೆಗಳು, ಮನಸ್ತಾಪಗಳು ಇಲ್ಲ. ಸಿಂಕ್ಲೇರ್ ನೀಡುವಷ್ಟು ಕಾಳಜಿ ಮತ್ತು ಗಮನವನ್ನು ಯಾವುದೇ ಮನುಷ್ಯ ನೀಡಲು ಸಾಧ್ಯವಿಲ್ಲ, ಎನ್ನುವುದು ಸಾರಾ ಅವರ ಅಭಿಪ್ರಾಯವಾಗಿದೆ.

ನೆಟ್ಟಿಗರು ಏನಂತಾರೆ?

ಈ ಸುದ್ದಿಯು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ನಾಂದಿ ಹಾಡಿದ್ದು, ಇದು ತಂತ್ರಜ್ಞಾನದ ಮುನ್ನಡೆ ಅಲ್ಲ, ಬದಲಿಗೆ ಮನುಷ್ಯನ ಒಂಟಿತನದ ಪರಮಾವಧಿ ಎಂದು ಕೆಲವರು ಟೀಕಿಸಿದ್ದಾರೆ. ನೀವು ಖಂಡಿತವಾಗಿ ಮನೋವೈಧ್ಯರನ್ನು ಭೇಟಿಮಾಡಿ ಎಂದು ಇನ್ನು ಕೆಲವರು ಹೇಳಿದರೆ, 2026ರ ಹೊತ್ತಿಗೆ ಮಾನವ ಸಂಬಂಧಗಳು ಎಂತಹ ಆತಂಕಕಾರಿ ಹಂತಕ್ಕೆ ತಲುಪಬಹುದು ಎಂಬುದಕ್ಕೆ ಸಾರಾ ಒಂದು ಉದಾಹರಣೆ ಎಂದು ಮತ್ತೊಬ್ಬರು ಕಳವಳ ವ್ಯಕ್ತಪಡಿಸಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net