ಪರೀಕ್ಷಾ ಕೇಂದ್ರಗಳಲ್ಲಿ 111 ಎಲೆಕ್ಟ್ರಾನಿಕ್ ಸಾಧನ ಬಳಿಸಿ ಅಕ್ರಮ: ಭಾರಿ ಆಕ್ರೋಶಕ್ಕೆ ಶಿಕ್ಷಣ ಸಚಿವರ ತಲೆದಂಡ | South Korea

 South Korea
ಪರೀಕ್ಷಾ ಕೇಂದ್ರಗಳಲ್ಲಿ 111 ಎಲೆಕ್ಟ್ರಾನಿಕ್ ಸಾಧನ ಬಳಿಸಿ ಅಕ್ರಮ: ಭಾರಿ ಆಕ್ರೋಶಕ್ಕೆ ಶಿಕ್ಷಣ ಸಚಿವರ ತಲೆದಂಡ | South Korea
Published on: 

South Korea: ದಕ್ಷಿಣ ಕೊರಿಯಾದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಸಹಾಯದಿಂದ ಪರೀಕ್ಷೆಯಲ್ಲಿ ಅಕ್ರಮ ಎಸಗಿದ ಪ್ರಕರಣ ಭಾರಿ ವಿವಾದಕ್ಕೆ ಗುರಿಯಾಗಿ, ದೇಶವ್ಯಾಪಿ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ದಕ್ಷಿಣ ಕೊರಿಯಾದ ಶಿಕ್ಷಣ ಸಚಿವ ಚೋಯ್ ಕ್ಯೋ-ಜಿನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಪ್ರಮುಖ ಕಾಲೇಜು ಪ್ರವೇಶ ಪರೀಕ್ಷೆ ನಡೆಯುವ ಕೆಲವೇ ದಿನಗಳ ಮೊದಲು ಬೆಳಕಿಗೆ ಬಂದ ಈ ಪ್ರಕರಣ, ಪರೀಕ್ಷಾ ವ್ಯವಸ್ಥೆಯ ಭದ್ರತೆ ಮತ್ತು ಸಿದ್ಧತೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ದಕ್ಷಿಣ ಕೊರಿಯಾದಲ್ಲಿ ಸುನ್‌ಯುಂಗ್ (Suneung) ಪರೀಕ್ಷೆಗೆ ವಿಶೇಷ ಮಹತ್ವವಿದೆ. ಒಂಬತ್ತು ಗಂಟೆಗಳ ಕಾಲ ನಡೆಯುವ ಈ ಪರೀಕ್ಷೆಯ ಫಲಿತಾಂಶವು ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಪ್ರವೇಶ, ಉತ್ತಮ ಉದ್ಯೋಗ ಮತ್ತು ಸಾಮಾಜಿಕ ಸ್ಥಾನಮಾನಕ್ಕೆ ಪ್ರಮುಖವಾಗಿದೆ. ಹೀಗಾಗಿ, ಈ ಪರೀಕ್ಷೆಯಲ್ಲಿ ಅಕ್ರಮ ನಡೆಯದಂತೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದರು. ಆದರೂ ಹೀಗಾಗಿರುವುದು ಅಚ್ಚರಿ ಮೂಡಿಸಿದೆ.

ರಾಷ್ಟ್ರೀಯ ತೆರಿಗೆ ಲೆಕ್ಕಪರಿಶೋಧಕ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ಅಭ್ಯರ್ಥಿಯೊಬ್ಬರು ಸಣ್ಣ ಕ್ಯಾಮರಾ ಮತ್ತು ಸ್ಮಾರ್ಟ್‌ಫೋನ್ ಬಳಸಿ ಬಹುತೇಕ ಪೂರ್ಣ ಅಂಕ ಗಳಿಸಿರುವುದಾಗಿ ಒಪ್ಪಿಕೊಂಡಿದ್ದಾರೆ. ಪ್ರಮುಖ ಕಾಲೇಜು ಪ್ರವೇಶ ಪರೀಕ್ಷೆಗೆ ಕೇವಲ ನಾಲ್ಕು ದಿನಗಳಿರುವಾಗ ಈ ವಿಚಾರ ಬೆಳಕಿಗೆ ಬಂದಿದ್ದು, ದೇಶದಲ್ಲಿ ಎಐ ನೆರವಿನ ಪರೀಕ್ಷಾ ವಂಚನೆಯ ಆತಂಕ ಹೆಚ್ಚಿಸಿದೆ.

ಪರೀಕ್ಷಾ ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ

ಈ ವರ್ಷದ ಸುನ್‌ಯುಂಗ್ ಪರೀಕ್ಷೆಯಲ್ಲಿ ಅಕ್ರಮ ತಡೆಯಲು ಅಧಿಕಾರಿಗಳು ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದರು. ಪರೀಕ್ಷಾ ಕೇಂದ್ರಗಳ ಸುತ್ತಲಿನ ಸಾರ್ವಜನಿಕ ವೈ-ಫೈ ಸಂಪರ್ಕವನ್ನು ಸ್ಥಗಿತಗೊಳಿಸಲಾಗಿತ್ತು. ಪರೀಕ್ಷಾರ್ಥಿಗಳ ಕನ್ನಡಕಗಳನ್ನು ಬಹಳ ಸೂಕ್ಷ್ಮವಾಗಿ ಪರಿಶೀಲಿಸಲಾಗಿತ್ತು. ಬಟ್ಟೆಯ ಗುಂಡಿಗಳಲ್ಲಿ ಗುಪ್ತ ಕ್ಯಾಮರಾ ಅಳವಡಿಸುವುದನ್ನು ತಡೆಯಲು ಅವುಗಳ ಮೇಲೆ ಸ್ಟಿಕ್ಕರ್‌ಗಳನ್ನು ಅಂಟಿಸಲಾಗಿತ್ತು.

ಇಷ್ಟಲ್ಲದೆ, ಅಡಗಿಸಿಟ್ಟಿರುವ ಮೊಬೈಲ್‌ಗಳು ವರ್ಕ್ ಆಗುತ್ತಿದೆಯೇ ಎಂಬುದನ್ನು ಪತ್ತೆಹಚ್ಚಲು ದೇಶಾದ್ಯಂತ ಮೂರು ಬಾರಿ ತುರ್ತು ಎಚ್ಚರಿಕೆ ಸಂದೇಶಗಳನ್ನು ಕಳುಹಿಸಲಾಗಿತ್ತು. ಈ ಮೆಸೇಜ್​ಗಳಿಂದ ಮೊಬೈಲ್‌ಗಳು ರಿಂಗಣಿಸುವಂತೆ ವ್ಯವಸ್ಥೆಯೂ ಮಾಡಲಾಗಿತ್ತು. ಇಷ್ಟಾದರೂ ಪರೀಕ್ಷೆಯ ವೇಳೆ ಒಟ್ಟು 111 ಎಲೆಕ್ಟ್ರಾನಿಕ್ ಸಾಧನಗಳ ನಿಯಮ ಉಲ್ಲಂಘನೆ ಪ್ರಕರಣಗಳು ಪತ್ತೆಯಾಗಿವೆ.

ಇವುಗಳಲ್ಲಿ 54 ಪ್ರಕರಣಗಳು ತುರ್ತು ಎಚ್ಚರಿಕೆ ಸಂದೇಶಗಳ ಮೂಲಕ, 52 ಪ್ರಕರಣಗಳು ನೇರ ತಪಾಸಣೆ ಅಥವಾ ಸಿಗ್ನಲ್ ಪರಿಶೀಲನೆಯ ಮೂಲಕ ಬೆಳಕಿಗೆ ಬಂದಿವೆ. ಉಳಿದ ಐದು ಪ್ರಕರಣಗಳಲ್ಲಿ ಸ್ಮಾರ್ಟ್ ಗ್ಲಾಸ್‌ಗಳು ಮತ್ತು ಸಣ್ಣ ಕ್ಯಾಮರಾಗಳೂ ಸೇರಿದಂತೆ ಸಾಧನಗಳನ್ನು ಸಕ್ರಿಯವಾಗಿ ಬಳಸಿರುವುದು ಪತ್ತೆಯಾಗಿದೆ.

Also Read
ಬೇಲೂರಿನಿಂದ ಮೂಡಿಗೆರೆಗೆ ಏಕೆ? ಮೂಲಸ್ಥಾನಕ್ಕೆ ಕಾಡಾನೆ ಓಡಿಸದಿದ್ರೆ ನಾಳೆಯೇ ಶಾಸಕ ಸ್ಥಾನಕ್ಕೆ ರಾಜೀನಾಮೆ: ನಯನಾ ಮೋಟಮ್ಮ
 South Korea

ಸಮರ್ಪಕ ಸಿದ್ಧತೆ ನಡೆಸಲು ವಿಫಲ

ಪರೀಕ್ಷೆಗೆ ಮುನ್ನ ಅಗತ್ಯ ಮುನ್ನೆಚ್ಚರಿಕೆಗಳನ್ನು ಸಮರ್ಪಕವಾಗಿ ಕೈಗೊಳ್ಳಲು ಸಾಧ್ಯವಾಗಲಿಲ್ಲ ಎಂಬ ಆರೋಪ ಸಚಿವ ಚೋಯ್ ಕ್ಯೋ-ಜಿನ್ ವಿರುದ್ಧ ಕೇಳಿಬಂದಿತ್ತು. ನವೆಂಬರ್ 16ರಂದು ನಡೆದ ಸಂಸದೀಯ ವಿಚಾರಣೆ ವೇಳೆ, ತಮ್ಮ ವಯಸ್ಸಿನ ಕಾರಣದಿಂದ ಪರೀಕ್ಷೆಯಲ್ಲಿ ಅಕ್ರಮ ಎಸಗುವವರನ್ನು ಪತ್ತೆಹಚ್ಚುವ ಬಗ್ಗೆ ತಮಗೆ ವಿಶ್ವಾಸವಿಲ್ಲ ಎಂದು ಸಚಿವರು ಹೇಳಿದ್ದರು. ಈ ಹೇಳಿಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗೆ ಕಾರಣವಾಯಿತು. ನಂತರ ಪರೀಕ್ಷೆಗೆ ಮುನ್ನ ನಡೆದ ಪತ್ರಿಕಾಗೋಷ್ಠಿಗಳಿಗೂ ಅವರು ಗೈರಾಗಿದ್ದರು. ಅವರ ಬದಲಿಗೆ ಉಪ ಸಚಿವೆ ಚೋಯ್ ಯುನ್-ಓಕ್ ತುರ್ತು ಭದ್ರತಾ ಕ್ರಮಗಳನ್ನು ಪ್ರಕಟಿಸಿದ್ದರು. ಇದು ಜನರನ್ನು ಇನ್ನೂ ಕೆರಳಿಸಿತು.

ತಮ್ಮ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿದ ಸಚಿವರು, ಪರೀಕ್ಷೆಯು ಯಾವುದೇ ದೊಡ್ಡ ಘಟನೆಗಳಿಲ್ಲದೆ ಪೂರ್ಣಗೊಂಡಿದೆ. ಆದರೆ, ಶಿಕ್ಷಣ ಸಚಿವನಾಗಿ ಮುಂಚಿತವಾಗಿ ಸಮರ್ಪಕ ಸಿದ್ಧತೆ ನಡೆಸುವಲ್ಲಿ ನಾನು ವಿಫಲನಾಗಿದ್ದೇನೆ ಎಂಬ ಸಾರ್ವಜನಿಕ ಟೀಕೆಗಳು ನನಗೆ ಸರಿಯಲ್ಲ. ಪರೀಕ್ಷೆ ಮುಗಿದಿರುವುದರಿಂದ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಂಡು ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ಸಚಿವರ ರಾಜೀನಾಮೆಯನ್ನು ಅಧ್ಯಕ್ಷ ಲೀ ಜೇ-ಮ್ಯುಂಗ್ ಅಂಗೀಕರಿಸಿದ್ದಾರೆ ಎಂದು ಅಧ್ಯಕ್ಷರ ಕಚೇರಿ ಮಾಹಿತಿ ನೀಡಿದೆ,(ಏಜೆನ್ಸೀಸ್).