ವಾಷಿಂಗ್ಟನ್: ವಿಶ್ವದ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಒಡೆತನದ ಸ್ಪೇಸ್‌ಎಕ್ಸ್‌ನ ಸ್ಟಾರ್‌ಲಿಂಕ್ ಈಗ ಅಂತರರಾಷ್ಟ್ರೀಯ ಸಂಘರ್ಷದ ವಿಚಾರವಾಗಿ ಸುದ್ದಿಯಲ್ಲಿದೆ. ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ದಾಳಿ ನಡೆಸಿದ ಬಳಿಕ, ಇರಾನ್ ಸೇನೆ ಅಮೆರಿಕದ ಪಡೆಗಳ ವಿರುದ್ಧದ ಕಾರ್ಯಾಚರಣೆಯಲ್ಲಿ ಸ್ಟಾರ್‌ಲಿಂಕ್ ಉಪಗ್ರಹ ಇಂಟರ್ನೆಟ್ ಸೇವೆಯನ್ನು ಬಳಸಿಕೊಂಡಿದೆ ಎಂಬ ವರದಿ ಸಂಚಲನ ಮೂಡಿಸಿದೆ. ಈ ಅಕ್ರಮ ಬಳಕೆಯ ವಿಚಾರ ತಿಳಿದು ಎಲಾನ್ ಮಸ್ಕ್ ತೀವ್ರ ಆಕ್ರೋಶಗೊಂಡಿದ್ದಾರೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.
ವಾಷಿಂಗ್ಟನ್ ಪೋಸ್ಟ್‌ಗೆ ಮಾಹಿತಿ ನೀಡಿರುವ ಇಬ್ಬರು ಮೂಲಗಳ ಪ್ರಕಾರ, ಸ್ಟಾರ್‌ಲಿಂಕ್ ಸೇವೆಯನ್ನು ಎರಡು ಬಾರಿ ಅನಧಿಕೃತವಾಗಿ ಬಳಸಿರುವುದು ಸ್ಪೇಸ್‌ಎಕ್ಸ್‌ನ ಗಮನಕ್ಕೆ ಬಂದಿದೆ. ಈ ಬಳಕೆ ಅಮೆರಿಕದ ಪಡೆಗಳ ವಿರುದ್ಧ ಇರಾನ್ ನಡೆಸಿದ ಪ್ರಯತ್ನಗಳಿಗೆ ಸಂಬಂಧಿಸಿದೆ ಎಂದು ಕಂಪನಿಯ ತಂಡ ಅಂದಾಜಿಸಿದೆ. ಈ ವಿಷಯ ತಿಳಿದ ಮಸ್ಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಈ ಪ್ರಕರಣದಲ್ಲಿ ಮತ್ತೊಂದು ಕುತೂಹಲಕಾರಿ ವಿಚಾರ ಬೆಳಕಿಗೆ ಬಂದಿದೆ. ಅಮೆರಿಕದ ಸೇನೆಯೂ ಸ್ಟಾರ್‌ಲಿಂಕ್‌ನ ಮಿಲಿಟರಿ ಆವೃತ್ತಿಯಾದ ಸ್ಟಾರ್‌ಶೀಲ್ಡ್ ಅನ್ನು ಬಳಸಿಕೊಂಡು ಏಕಮುಖ ಡ್ರೋನ್‌ಗಳನ್ನು ಹಾರಿಸಿದೆ ಎಂದು ವರದಿ ಹೇಳಿದೆ. ಆದರೆ, ಭೂ ಕಾರ್ಯಾಚರಣೆಗಳಿಗೆ ಉದ್ದೇಶಿಸಲಾದ ಕಡಿಮೆ ವೆಚ್ಚದ ಯೋಜನೆಯನ್ನು ಈ ಉದ್ದೇಶಕ್ಕೆ ಬಳಸಲಾಗಿದೆ ಎಂದು ಮೂಲವೊಂದು ತಿಳಿಸಿದೆ.
ಈ ಕುರಿತು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಅವರಿಗೆ ವರ್ಗೀಕೃತ ವರದಿಯನ್ನೂ ಸಲ್ಲಿಸಲಾಗಿದೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ಆದರೆ, ರಕ್ಷಣಾ ಕಾರ್ಯದರ್ಶಿ ಕಚೇರಿಗೆ ಇಂತಹ ವರದಿ ಬಂದಿರುವ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ಅಮೆರಿಕದ ರಕ್ಷಣಾ ಇಲಾಖೆ ರಾಯಿಟರ್ಸ್‌ಗೆ ತಿಳಿಸಿದೆ.
ಸ್ಟಾರ್‌ಲಿಂಕ್ ಸೇವೆಗೆ ಇರಾನ್‌ನಲ್ಲಿ ಅಧಿಕೃತ ಪರವಾನಗಿ ಇಲ್ಲ. ಆದರೂ ಈ ಸೇವೆ ಅಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಎಲಾನ್ ಮಸ್ಕ್ ಈ ಹಿಂದೆ ಹೇಳಿದ್ದರು. ಇರಾನ್ ಸರ್ಕಾರ ಪ್ರತಿಭಟನೆಗಳು ಮತ್ತು ಅಶಾಂತಿಯ ಸಂದರ್ಭಗಳಲ್ಲಿ ಸಾರ್ವಜನಿಕ ಇಂಟರ್ನೆಟ್ ಸಂಪರ್ಕವನ್ನು ಕಡಿತಗೊಳಿಸುತ್ತಾ ಬಂದಿದೆ.
ವಿಶೇಷವಾಗಿ ಜನವರಿಯಲ್ಲಿ ನಡೆದ ದೇಶವ್ಯಾಪಿ ಪ್ರತಿಭಟನೆಗಳ ಸಂದರ್ಭದಲ್ಲಿ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿತ್ತು. ಈ ಬೆಳವಣಿಗೆಯ ನಂತರ ಅಮೆರಿಕ ಸರ್ಕಾರ ಸಾವಿರಾರು ಸ್ಟಾರ್‌ಲಿಂಕ್ ಟರ್ಮಿನಲ್‌ಗಳನ್ನು ಇರಾನ್‌ಗೆ ರಹಸ್ಯವಾಗಿ ಸಾಗಿಸಿತ್ತು ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿತ್ತು.
ಉಕ್ರೇನ್ ಮತ್ತು ಇರಾನ್‌ನಂತಹ ಸಂಘರ್ಷ ಪೀಡಿತ ಪ್ರದೇಶಗಳಲ್ಲಿ ಸ್ಟಾರ್‌ಲಿಂಕ್ ಬಳಕೆ, ಅದರ ಮೇಲಿನ ಅಮೆರಿಕ ಸರ್ಕಾರದ ನಿಯಂತ್ರಣ ಹಾಗೂ ನಿರ್ಬಂಧಿತ ಸಂಸ್ಥೆಗಳ ಅನಧಿಕೃತ ಬಳಕೆ ಈಗಾಗಲೇ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ.
ಈ ಬೆಳವಣಿಗೆಯ ಕುರಿತು ಸ್ಪೇಸ್‌ಎಕ್ಸ್ ಮತ್ತು ಇರಾನ್ ವಿದೇಶಾಂಗ ಸಚಿವಾಲಯ ತಕ್ಷಣ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ರಾಯಿಟರ್ಸ್ ವರದಿ ಮಾಡಿದೆ. ಜಗತ್ತಿಗೆ ಇಂಟರ್ನೆಟ್ ಸಂಪರ್ಕ ಕಲ್ಪಿಸುವ ಉದ್ದೇಶ ಹೊಂದಿರುವ ಉಪಗ್ರಹ ತಂತ್ರಜ್ಞಾನವೇ ಯುದ್ಧ ಮತ್ತು ಮಿಲಿಟರಿ ಕಾರ್ಯಾಚರಣೆಗಳ ವಿವಾದದಲ್ಲಿ ಸಿಲುಕಿರುವುದು ಇದೀಗ ಜಾಗತಿಕ ಗಮನ ಸೆಳೆದಿದೆ.