ನವದೆಹಲಿ: ಕ್ಷೇತ್ರ ಮರುವಿಂಗಡಣೆ ವಿಚಾರದಲ್ಲಿ ದಶಕಗಳಿಂದ ಕೇಂದ್ರ ಸರ್ಕಾರದ ಪ್ರಸ್ತಾವನೆಗಳನ್ನು ವಿರೋಧಿಸುತ್ತಿದ್ದ ದಕ್ಷಿಣ ಭಾರತದ ರಾಜ್ಯಗಳ ರಾಜಕೀಯ ನಿಲುವಿನಲ್ಲಿ ಇದೀಗ ಮಹತ್ವದ ಬದಲಾವಣೆ ಕಂಡುಬಂದಿದೆ. ಜನಸಂಖ್ಯೆ ನಿಯಂತ್ರಣದಲ್ಲಿ ಯಶಸ್ವಿಯಾದ ರಾಜ್ಯಗಳಿಗೆ ಲೋಕಸಭೆಯಲ್ಲಿ ಪ್ರಾತಿನಿಧ್ಯ ಕಡಿಮೆಯಾಗಬಹುದು ಎಂಬ ಆತಂಕದಿಂದ ವಿರೋಧ ವ್ಯಕ್ತಪಡಿಸುತ್ತಿದ್ದ ದಕ್ಷಿಣ ಭಾರತದ ಕೆಲವು ಪ್ರಮುಖ ಪಕ್ಷಗಳು ಈಗ ಕೇಂದ್ರದ ಹೊಸ ಪ್ರಸ್ತಾವನೆಗೆ ಬೆಂಬಲ ಸೂಚಿಸಿವೆ. ವಿಶೇಷವಾಗಿ, ದಶಕಗಳಿಂದ ಈ ಹೋರಾಟದ ಮುಂಚೂಣಿಯಲ್ಲಿದ್ದ ತಮಿಳುನಾಡಿನ ಡಿಎಂಕೆ ಪಕ್ಷದ ನಿಲುವು ಬದಲಿಸಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ಕ್ಷೇತ್ರ ಮರುವಿಂಗಡಣೆ ವಿಚಾರದಲ್ಲಿ ದಶಕಗಳಿಂದ ಕೆಂದ್ರ ಸರ್ಕಾರದ ಪ್ರಸ್ತಾವಣೆಯನ್ನು ವಿರೋಧಿಸುತ್ತಿದ್ದ ದಕ್ಷಿಣ ಭಾರತದ ರಾಜ್ಯಗಳ ರಾಜಕೀಯ ನಿಲುವಿಲ್ಲಿ ಇದೀಗ ಮಹತ್ವದ ಬದಲಾವಣೆ ಕಂಡುಬಂದಿದೆ, ಜನಸಂಖ್ಯೆ ನಿಯಂತ್ರಣದಲ್ಲಿ ಯಶಸ್ವಿಯಾಗಿ ರಾಜ್ಯಗಳಿಗೆ ಲೋಕಸಭೆಯಲ್ಲಿ ಪ್ರಾತಿನಿಧ್ಯ ಕಡಿಮೆಯಾಗಬಹುದು ಎಂಬ ಆತಂಕದಿಂದ ಜನಸಂಖ್ಯೆ ನಿಯಂತ್ರಣದಲ್ಲಿ
ಕ್ಷೇತ್ರ ಮರುವಿಂಗಡಣೆ ವಿಚಾರವಾಗಿ ದಕ್ಷಿಣ ಭಾರತದ ರಾಜ್ಯಗಳ ಆತಂಕ ಇಂದಿನದಲ್ಲ. 1972ರಲ್ಲಿ ತಮಿಳುನಾಡಿನ ಸೇಲಂ ಕ್ಷೇತ್ರದ ಡಿಎಂಕೆ ಸಂಸದ ಇ.ಆರ್. ಕೃಷ್ಣನ್ ಸಂಸತ್ತಿನಲ್ಲಿ ಲೋಕಸಭಾ ಸ್ಥಾನಗಳ ಹೆಚ್ಚಳದ ಪ್ರಸ್ತಾವನೆಯನ್ನು ವಿರೋಧಿಸಿದ್ದರು. ಕೇಂದ್ರ ಸರ್ಕಾರದ ಜನಸಂಖ್ಯೆ ನಿಯಂತ್ರಣದ ಸಲಹೆಯನ್ನು ಪಾಲಿಸಿ ಜನನ ಪ್ರಮಾಣ ಕಡಿಮೆ ಮಾಡಿದ ರಾಜ್ಯಗಳಿಗೆ ಅದೇ ಕಾರಣಕ್ಕೆ ಸಂಸತ್ತಿನಲ್ಲಿ ಪ್ರಾತಿನಿಧ್ಯ ಕಡಿಮೆಯಾಗುವುದು ನ್ಯಾಯವೇ ಎಂಬ ಪ್ರಶ್ನೆಯನ್ನು ಅವರು ಎತ್ತಿದ್ದರು.
1963ರ ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಯಲ್ಲಿ ತಮಿಳುನಾಡು ಈಗಾಗಲೇ ಎರಡು ಲೋಕಸಭಾ ಸ್ಥಾನಗಳನ್ನು ಕಳೆದುಕೊಂಡಿತ್ತು. ರಾಜ್ಯದ ಸ್ಥಾನಗಳ ಸಂಖ್ಯೆ 41ರಿಂದ 39ಕ್ಕೆ ಇಳಿದಿತ್ತು. ಕುಟುಂಬ ಯೋಜನೆ ಮತ್ತು ಜನಸಂಖ್ಯೆ ನಿಯಂತ್ರಣ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದರೆ ಭವಿಷ್ಯದಲ್ಲಿ ರಾಜಕೀಯ ಪ್ರಾತಿನಿಧ್ಯಕ್ಕೆ ಹೊಡೆತ ಬೀಳಬಹುದು ಎಂಬ ಆತಂಕ ದಕ್ಷಿಣದ ರಾಜ್ಯಗಳಲ್ಲಿ ಬೇರೂರಿತ್ತು.
ಆದರೆ, 2026ರ ವೇಳೆಗೆ ಪರಿಸ್ಥಿತಿ ಬದಲಾಗಿದೆ. ಕೇಂದ್ರದ ಹೊಸ ಕ್ಷೇತ್ರ ಮರುವಿಂಗಡಣೆ ಪ್ರಸ್ತಾವನೆಗೆ ಡಿಎಂಕೆ ಬೆಂಬಲ ಘೋಷಿಸಿರುವುದು ಪ್ರಮುಖ ಬೆಳವಣಿಗೆಯಾಗಿದೆ. ಇದರೊಂದಿಗೆ ಭಾರತ ರಾಷ್ಟ್ರ ಸಮಿತಿ (ಬಿಆರ್ಎಸ್), ವೈಎಸ್ಆರ್ ಕಾಂಗ್ರೆಸ್, ತೆಲುಗು ದೇಶಂ ಪಕ್ಷ (ಟಿಡಿಪಿ), ಜನಸೇನಾ ಮತ್ತು ಜನತಾ ದಳ (ಜಾತ್ಯತೀತ) ಸೇರಿದಂತೆ ಹಲವು ಪಕ್ಷಗಳು ಪ್ರಸ್ತಾವನೆಗೆ ಬೆಂಬಲ ಸೂಚಿಸಿವೆ.
ಕರ್ನಾಟಕ, ತಮಿಳುನಾಡು, ತೆಲಂಗಾಣ, ಕೇರಳ ಮತ್ತು ಆಂಧ್ರಪ್ರದೇಶದ ಒಟ್ಟು 129 ಸಂಸದರಲ್ಲಿ 75 ಮಂದಿ ಈಗ ಕೇಂದ್ರದ ಪ್ರಸ್ತಾವನೆಗೆ ಬೆಂಬಲ ನೀಡುತ್ತಿದ್ದಾರೆ. ಅಂದರೆ ದಕ್ಷಿಣ ಭಾರತದ ಐದು ರಾಜ್ಯಗಳ ಚುನಾಯಿತ ಸಂಸದರಲ್ಲಿ ಸುಮಾರು ಶೇ.60ರಷ್ಟು ಮಂದಿ ಈ ಪ್ರಸ್ತಾವನೆಯ ಪರವಾಗಿದ್ದಾರೆ.
ಕೇಂದ್ರ ಸರ್ಕಾರದ ಪ್ರಸ್ತಾವನೆಯ ಪ್ರಕಾರ ಸಂಸತ್ತಿನ ಸದಸ್ಯರ ಸಂಖ್ಯೆಯನ್ನು ಶೇ.50ರಷ್ಟು ಹೆಚ್ಚಿಸುವುದರ ಜೊತೆಗೆ ರಾಜ್ಯಗಳ ನಡುವಿನ ಪ್ರಸ್ತುತ ಅನುಪಾತದ ಸ್ಥಾನ ಹಂಚಿಕೆಯನ್ನು ಉಳಿಸಿಕೊಳ್ಳುವ ಉದ್ದೇಶವಿದೆ. ಈ ವ್ಯವಸ್ಥೆಯನ್ನು 2051ರವರೆಗೆ ಮುಂದುವರಿಸುವ ಪ್ರಸ್ತಾವನೆಯೂ ಇದೆ.
ಇದರಿಂದ ಜನಸಂಖ್ಯೆ ನಿಯಂತ್ರಣದಲ್ಲಿ ಯಶಸ್ವಿಯಾದ ದಕ್ಷಿಣದ ರಾಜ್ಯಗಳ ಪ್ರಸ್ತುತ ರಾಜಕೀಯ ಪ್ರಾತಿನಿಧ್ಯಕ್ಕೆ ಧಕ್ಕೆಯಾಗುವುದಿಲ್ಲ ಎಂಬುದು ಪ್ರಸ್ತಾವನೆಯ ಬೆಂಬಲಿಗರ ವಾದ. ದಕ್ಷಿಣದ ರಾಜ್ಯಗಳ ಹಿತಾಸಕ್ತಿಯನ್ನು ರಕ್ಷಿಸಲು ಇದೇ ಸೂಕ್ತ ಮಾರ್ಗ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ಮತದಾರನಿಗೂ ಸಮಾನ ಪ್ರಾತಿನಿಧ್ಯ ಸಿಗಬೇಕು ಎಂಬುದು ಮೂಲ ಆಶಯ. ಅಂದರೆ, ಪ್ರತಿ ಸಂಸದರು ಪ್ರತಿನಿಧಿಸುವ ಜನಸಂಖ್ಯೆ ಸಾಧ್ಯವಾದಷ್ಟು ಸಮಾನವಾಗಿರಬೇಕು. ಆದರೆ ದೇಶದ ಎಲ್ಲ ರಾಜ್ಯಗಳಲ್ಲೂ ಜನಸಂಖ್ಯೆ ಒಂದೇ ಪ್ರಮಾಣದಲ್ಲಿ ಹೆಚ್ಚಾಗಿಲ್ಲ.
ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಜನಸಂಖ್ಯೆ ವೇಗವಾಗಿ ಹೆಚ್ಚಾಗಿದ್ದರೆ, ದಕ್ಷಿಣದ ರಾಜ್ಯಗಳಲ್ಲಿ ಜನಸಂಖ್ಯೆ ಬೆಳವಣಿಗೆಯ ಪ್ರಮಾಣ ಕಡಿಮೆಯಾಗಿದೆ. ಹೀಗಾಗಿ ಜನಸಂಖ್ಯೆ ಆಧಾರದಲ್ಲಿ ಕ್ಷೇತ್ರಗಳ ಮರುವಿಂಗಡಣೆ ನಡೆದರೆ ದಕ್ಷಿಣದ ರಾಜ್ಯಗಳ ಲೋಕಸಭಾ ಸ್ಥಾನಗಳ ಪಾಲು ಕಡಿಮೆಯಾಗಬಹುದು ಎಂಬ ಆತಂಕ ಹಿಂದಿನಿಂದಲೂ ಇದೆ.
ಈ ಹಿನ್ನೆಲೆಯಲ್ಲಿ ಲೋಕಸಭಾ ಸ್ಥಾನಗಳ ಹಂಚಿಕೆಯನ್ನು ಹಲವು ದಶಕಗಳ ಕಾಲ ಸ್ಥಗಿತಗೊಳಿಸಿದ ನಿರ್ಧಾರವೇ ಇದೀಗ ರಾಜಕೀಯ ಸಂಘರ್ಷಕ್ಕೆ ಪ್ರಮುಖ ಕಾರಣವಾಗಿದೆ. ಆದರೆ ಹೊಸ ಪ್ರಸ್ತಾವನೆಯಿಂದ ದಕ್ಷಿಣದ ರಾಜ್ಯಗಳ ನಿಲುವಿನಲ್ಲಿ ಬದಲಾವಣೆ ಕಂಡುಬಂದಿರುವುದು ರಾಷ್ಟ್ರ ರಾಜಕಾರಣದ ಮುಂದಿನ ಬೆಳವಣಿಗೆಗಳ ಬಗ್ಗೆ ಕುತೂಹಲ ಹೆಚ್ಚಿಸಿದೆ.