ಹಿಮದ ಶಿಖರದಲ್ಲಿ ನರಕ ದರ್ಶನ: ಚಾರಣಿಗರ ಊಟಕ್ಕೆ ವಿಷ ಬೆರೆಸಿ ಕೋಟಿ ಕೋಟಿ ಲೂಟಿ ಮಾಡಿದ ಮಾಫಿಯಾ! Mount Everest

ಹಿಮದ ಶಿಖರದಲ್ಲಿ ನರಕ ದರ್ಶನ: ಚಾರಣಿಗರ ಊಟಕ್ಕೆ ವಿಷ ಬೆರೆಸಿ ಕೋಟಿ ಕೋಟಿ ಲೂಟಿ ಮಾಡಿದ ಮಾಫಿಯಾ! Mount Everest
ಹಿಮದ ಶಿಖರದಲ್ಲಿ ನರಕ ದರ್ಶನ: ಚಾರಣಿಗರ ಊಟಕ್ಕೆ ವಿಷ ಬೆರೆಸಿ ಕೋಟಿ ಕೋಟಿ ಲೂಟಿ ಮಾಡಿದ ಮಾಫಿಯಾ! Mount Everest
Published on

ಪ್ರಮುಖ ಮುಖ್ಯಾಂಶಗಳು

  • ವಿಶ್ವದ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್ ಅನ್ನೋದು ನಿಮಗೆಲ್ಲರಿಗೂ ಗೊತ್ತೇ ಇದೆ
  • ಪ್ರತಿ ವರ್ಷ ಈ ಭವ್ಯ ಶಿಖರವನ್ನು ಏರಲು ಸಾವಿರಾರು ಚಾರಣ ಪ್ರಿಯರು ನೇಪಾಳಕ್ಕೆ ಆಗಮಿಸುತ್ತಾರೆ
  • ಇದೀಗ ನೇಪಾಳ ಪೊಲೀಸರು ನಡೆಸಿದ ತನಿಖೆಯಲ್ಲಿ ಮೌಟ್​ ಎವರೆಸ್ಟ್​ ಚಾರಣ ಹಿಂದಿನ ಭಯಾನಕ ಮಾಫಿಯಾ ಬಯಲಾಗಿದೆ
  • ಚಾರಣಿಗರ ಆಹಾರದಲ್ಲಿ ವಿಷ ಬೆರೆಸಿ ಅಸ್ವಸ್ಥಗೊಳಿಸಿ ಕೋಟ್ಯಂತರ ರೂಪಾಯಿ ಲೂಟಿ ಮಾಡಲಾಗಿದೆ
ಕಠ್ಮಂಡು: ವಿಶ್ವದ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್ ( Mount Everest ) ಟ್ರೆಕ್ಕಿಂಗ್​ ವಿಚಾರದಲ್ಲಿ ಲಕ್ಷಾಂತರ ರೂಪಾಯಿ ಇನ್ಶೂರೆನ್ಸ್​ ಹಣ ಕಬಳಿಸಲು ಪೂರ್ವಯೋಜಿತ ತುರ್ತು ಪರಿಸ್ಥಿತಿಯನ್ನು ಸೃಷ್ಟಿಸುತ್ತಿದ್ದ ಖತರ್ನಾಕ್​ ಗ್ಯಾಂಗ್​ ಅನ್ನು ನೇಪಾಳ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಈ ಹಗರಣಕ್ಕೆ ಸಂಬಂಧಿಸಿದಂತೆ ಟ್ರೆಕ್ಕಿಂಗ್ ಏಜೆನ್ಸಿಗಳು, ಹೆಲಿಕಾಪ್ಟರ್ ಕಂಪನಿಗಳು ಮತ್ತು ಆಸ್ಪತ್ರೆ ಸಿಬ್ಬಂದಿಗಳನ್ನು ಒಳಗೊಂಡ 32 ಸದಸ್ಯರ ಗ್ಯಾಂಗ್ ವಿರುದ್ಧ ನೇಪಾಳ ಪೊಲೀಸರು ಕ್ರಮ ಕೈಗೊಂಡಿದ್ದಾರೆ. 20 ಮಿಲಿಯನ್ ಡಾಲರ್ ( 165 ಕೋಟಿ ರೂಪಾಯಿಗೂ ಹೆಚ್ಚು) ಬೃಹತ್ ಹಗರಣ ಇದಾಗಿದ್ದು, ಮೌಂಟ್​ ಎವೆರೆಸ್ಟ್ ಚಾರಣ ಪ್ರಿಯರಿಗೆ ಆಘಾತ ಉಂಟು ಮಾಡಿದೆ ಎಂದು ಕಠ್ಮಂಡು ಪೋಸ್ಟ್ ವರದಿ ಮಾಡಿದೆ.
ಟೂರಿಸ್ಟ್​ ಗೈಡ್ಸ್​ ಚಾರಣಿಗರ ಆಹಾರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಡಿಗೆ ಸೋಡಾವನ್ನು ಬೆರೆಸುತ್ತಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಇದು ಚಾರಣಿಗರಲ್ಲಿ ತೀವ್ರವಾದ ಹೊಟ್ಟೆ ನೋವು ಮತ್ತು ಇತರ ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡುತ್ತಿತ್ತು. ಈ ಅನಾರೋಗ್ಯವನ್ನು ಎತ್ತರದ ಪ್ರದೇಶಗಳಲ್ಲಿ ಕಂಡುಬರುವ 'ಆಲ್ಟಿಟ್ಯೂಡ್ ಸಿಕ್ನೆಸ್' (altitude sickness) ಎಂದು ನಂಬಿಸಿ ಪ್ರವಾಸಿಗರನ್ನು ಹೆದರಿಸುತ್ತಿದ್ದರು. ನಂತರ ಅವರಿಂದ ದೊಡ್ಡ ಮೊತ್ತದ ಹಣವನ್ನು ವಸೂಲಿ ಮಾಡಿ, ಅನಿವಾರ್ಯವಾಗಿ ಹೆಲಿಕಾಪ್ಟರ್ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸುವಂತೆ ಮಾಡಲಾಗುತ್ತದೆ.
ಕೆಲವು ಸಂದರ್ಭಗಳಲ್ಲಿ ಪ್ರವಾಸಿಗರು ಅನಾರೋಗ್ಯದಂತೆ ನಟಿಸುವಂತೆ ಮರುಳು ಮಾಡಲಾಗುತ್ತಿತ್ತು. ಇನ್ನು ಕೆಲವು ಬಾರಿ ಅವರ ಅರಿವಿಗೆ ಬಾರದಂತೆ ಆಹಾರ ಅಥವಾ ಔಷಧಗಳಲ್ಲಿ ಬದಲಾವಣೆ ಮಾಡಿ ನಿಜವಾಗಿಯೂ ಕಾಯಿಲೆ ಬರುವಂತೆ ಸಂಚು ರೂಪಿಸಲಾಗುತ್ತಿತ್ತು ಎಂಬ ಆಘಾತಕಾರಿ ವಿಷಯ ನೇಪಾಳ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಈ ವಂಚನೆಯಲ್ಲಿ ಸುಮಾರು 19.69 ಮಿಲಿಯನ್ ಡಾಲರ್​ ( 183.62 ಕೋಟಿ ರೂಪಾಯಿ )​ ಮೊತ್ತದ ನಕಲಿ ವಿಮಾ ಕ್ಲೈಮ್‌ಗಳನ್ನು ಮಾಡಲಾಗಿದೆ. ಇದರಲ್ಲಿ ಭಾಗಿಯಾದ ಒಂದು ಕಂಪನಿಯು ಒಟ್ಟು 1,248 ರಕ್ಷಣಾ ಕಾರ್ಯಾಚರಣೆಗಳ ಪೈಕಿ 171 ಕಾರ್ಯಾಚರಣೆಗಳನ್ನು ಸುಳ್ಳಾಗಿ ಸೃಷ್ಟಿಸಿ, ಅಕ್ರಮವಾಗಿ 10 ಮಿಲಿಯನ್ ಡಾಲರ್​ ( 93.26 ಕೋಟಿ ರೂಪಾಯಿ ) ಗಳಿಸಿದೆ. ಹೆಲಿಕಾಪ್ಟರ್ ಹಾರಾಟ ನಡೆಸಿ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ ಎಂದು ತೋರಿಸಲು ಈ ಕಂಪನಿಯು ನಕಲಿ ಬಿಲ್‌ಗಳು ಮತ್ತು ವೈದ್ಯಕೀಯ ದಾಖಲೆಗಳನ್ನು ಸೃಷ್ಟಿಸಿ ಈ ಭಾರೀ ವಂಚನೆ ಎಸಗಿದೆ.
ಕಳೆದ ಜನವರಿಯಲ್ಲಿ ನಡೆದ ತನಿಖೆಯಲ್ಲಿ ಮೂರು ಪ್ರಮುಖ ಪರ್ವತ ರಕ್ಷಣಾ ಸಂಸ್ಥೆಗಳ ಆರು ಹಿರಿಯ ಅಧಿಕಾರಿಗಳನ್ನು ಬಂಧಿಸಿ, ವಿಚಾರಣೆ ನಡೆಸಿದ ಬಳಿಕ ಈ ಆಘಾತಕಾರಿ ಮಾಹಿತಿಗಳು ಬೆಳಕಿಗೆ ಬಂದಿವೆ. 2022 ಮತ್ತು 2025 ರ ನಡುವೆ 300 ಕ್ಕೂ ಹೆಚ್ಚು ನಕಲಿ ರಕ್ಷಣಾ ಕಾರ್ಯಾಚರಣೆಗಳು ನಡೆದಿವೆ ಎಂದು ನೇಪಾಳ ಪೊಲೀಸರು ದೃಢಪಡಿಸಿದ್ದಾರೆ.
ನಿರಂತರ ವಂಚನೆಗಳಿಂದಾಗಿ ಹಲವಾರು ಪ್ರಮುಖ ಅಂತಾರಾಷ್ಟ್ರೀಯ ವಿಮಾ ಕಂಪನಿಗಳು ನೇಪಾಳದಲ್ಲಿ ಚಾರಣ ಪ್ರವಾಸಿಗರಿಗೆ ವಿಮಾ ರಕ್ಷಣೆ ನೀಡುವುದನ್ನೇ ನಿಲ್ಲಿಸಿವೆ. ಇದರ ಪರಿಣಾಮ ಚಾರಣಿಗರ ಸಂಖ್ಯೆ ಇಳಿಕೆಯಾಗಿ ನೇಪಾಳದ ಪ್ರವಾಸೋದ್ಯಮ ಕ್ಷೇತ್ರವನ್ನು ಗಂಭೀರ ಬಿಕ್ಕಟ್ಟಿಗೆ ಸಿಲುಕಿಸಿದೆ. ಈ ವರ್ಷ ಸುಮಾರು 500 ಜನರು ಎವರೆಸ್ಟ್ ಏರುವ ನಿರೀಕ್ಷೆ ಇರುವುದರಿಂದ, ನೇಪಾಳ ಸರ್ಕಾರ ಭದ್ರತಾ ವ್ಯವಸ್ಥೆಗಳು ಮತ್ತು ತಪಾಸಣೆಗಳನ್ನು ಬಿಗಿಗೊಳಿಸಲು ನಿರ್ಧರಿಸಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net