

ತವರು ಮನೆಗೆ ಹೋಗಿ ಬರುತ್ತೇನೆ ಎಂದಿದ್ದಕ್ಕೆ ಪತ್ನಿಯನ್ನು ಕೊಂದ 20 ವರ್ಷದ ಗಂಡ.
ಇರಾನ್‌ನಲ್ಲಿ ನಡೆದ ಘಟನೆ, ಕುಟುಂಬ ಕಲಹವೇ ಕೊಲೆಗೆ ಕಾರಣ ಎಂದು ತಪ್ಪೊಪ್ಪಿಕೊಂಡ ಗಂಡ.
ಬಾಲ್ಯ ವಿವಾಹದ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಆಗ್ರಹಿಸಿದ ಇರಾನ್ ಮಾನವ ಹಕ್ಕುಗಳ ಸಂಸ್ಥೆ.
ಟೆಹ್ರಾನ್ (ಇರಾನ್): ಗೆಳತಿಯರ ಜೊತೆಗೆ ಆಡಿ,ಕುಣಿಯಬೇಕಿದ್ದ ವಯಸ್ಸಿನಲ್ಲಿಯೇ ತಾಯಿಯಾಗಿದ್ದ 14 ವರ್ಷದ ಬಾಲಕಿ, ನನ್ನ ತವರು ಮನೆಗೆ ಹೋಗಿ ಬರುತ್ತೇನೆ ಎಂದು ಕೇಳಿದ್ದಕ್ಕೆ ಪತಿಯಿಂದಲೇ ಬರ್ಬರವಾಗಿ ಹತ್ಯೆಯಾಗಿರುವ ಘಟನೆ ಇರಾನ್‌ನಲ್ಲಿ ನಡೆದಿದೆ. ಹರೆಯದ ವಯಸ್ಸಿನಲ್ಲಿಯೇ ದುರಂತ ಅಂತ್ಯ ಕಂಡಿದ್ದಾಳೆ.
ಹೌದು, ಬಾಣಂತಿ ಪತ್ನಿಯನ್ನು 20 ವರ್ಷದ ಪತಿ ಹಿಗ್ಗಾಮುಗ್ಗಾ ಥಳಿಸಿ ಕೊಂದಿರುವ ಮನಕಲಕುವ ಘಟನೆ ಇರಾನ್‌ನಲ್ಲಿ ನಡೆದಿದೆ. ತಾಯ್ತನದ ಸುಖ ಅನುಭವಿಸುವ ಮೊದಲೇ ಪತಿಯ ಕ್ರೌರ್ಯಕ್ಕೆ ಆ ಎಳೆಯ ಜೀವ ಬಲಿಯಾಗಿದೆ.
ಮೃತ 14 ವರ್ಷದ ಸೊಗಂದ್ ಮೊಶ್ತಾರೆಕಿ ಎಂದು ಗುರುತಿಸಲಾಗಿದ್ದು, ತವರು ಮನೆಗೆ ಭೇಟಿ ನೀಡಲು ಅವಕಾಶ ನೀಡುವಂತೆ ತನ್ನ 20 ವರ್ಷದ ಪತಿಯ ಬಳಿ ಕೇಳಿಕೊಂಡಿದ್ದೇ ಈ ಭೀಕರ ಹತ್ಯೆಗೆ ಕಾರಣವಾಗಿದೆ. ಆರೋಪಿ ಪತಿ ತನ್ನ ಪತ್ನಿಯನ್ನು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಕೌಟುಂಬಿಕ ಕಲಹವೇ ಇದಕ್ಕೆ ಕಾರಣ ಎಂದು ಪತಿ ಹೇಳಿರುವುದಾಗಿ ಇರಾನ್ ಮಾನವ ಹಕ್ಕುಗಳ ಸಂಸ್ಥೆ (IHR) ವರದಿ ಮಾಡಿದೆ.
ಇರಾನ್‌ನ ಕೆರ್ಮನ್ ಪ್ರಾಂತ್ಯದ ನಿವಾಸಿಯಾಗಿದ್ದ ಸೊಗಂದ್ ಮೊಶ್ತಾರೆಕಿ, ಇತ್ತೀಚೆಗೆ ತೆರಳುವ ಮಾರ್ಗಮಧ್ಯೆ ಸಂಭವಿಸಿದ ರಸ್ತೆ ಅಪಘಾತವೊಂದರಲ್ಲಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರು. ಆಕೆ ಮಗುವಿಗೆ ಜನ್ಮ ನೀಡಿದ್ದರು.
ಸೊಗಂದ್ ಮೊಶ್ತಾರೆಕಿ ಪತಿ ಆಕೆಯನ್ನು ತವರು ಮನೆಯವರೊಂದಿಗೆ ಸಂಪರ್ಕದಲ್ಲಿರದಂತೆ ನಿರ್ಬಂಧಿಸಿದ್ದನು ಮತ್ತು ತಾನು ಹೊರಗೆ ಹೋದಾಗಲೆಲ್ಲಾ ಆಕೆಯನ್ನು ಮನೆಯೊಳಗೆ ಕೂಡಿ ಹಾಕುತ್ತಿದ್ದನು. ಇರಾನ್‌ನಲ್ಲಿರುವ ಬಲವಂತದ ಬಾಲ್ಯ ವಿವಾಹಗಳ ಮಾರಣಾಂತಿಕ ಪರಿಣಾಮಗಳಿಗೆ ಈ ಪ್ರಕರಣವೇ ಸಾಕ್ಷಿಯಾಗಿದೆ. ತಾರತಮ್ಯದ ಕಾನೂನುಗಳು, ಪುರುಷ ಪ್ರಧಾನ ವ್ಯವಸ್ಥೆ ಮತ್ತು ಅಪರಾಧಿಗಳಿಗೆ ಸಿಗುತ್ತಿರುವ ರಕ್ಷಣೆಯಿಂದಾಗಿ ಇಂತಹ ಕ್ರೂರ ಅಪರಾಧಗಳು ಹೆಚ್ಚುತ್ತಿವೆ ಎಂದು ಇರಾನ್ ಮಾನವ ಹಕ್ಕುಗಳ ಸಂಸ್ಥೆ ಕಿಡಿಕಾಡಿದೆ
ಸೊಗಂದ್ ಹತ್ಯೆಯಾದ ದಿನವೇ ಫಾರ್ಸ್ ಪ್ರಾಂತ್ಯದ ಸೆಪಿದೆಹ್ ರೈಸಿ ಎಂಬ 21 ವರ್ಷದ ಗರ್ಭಿಣಿಯನ್ನೂ ಆಕೆಯ ಪತಿ ಹತ್ಯೆ ಮಾಡಿದ್ದಾನೆ. ಸೊಗಂದ್ ಅವರಂತೆಯೇ ಸೆಪಿದೆಹ್ ಅವರನ್ನೂ ಬಲವಂತವಾಗಿ ಮದುವೆ ಮಾಡಿಕೊಡಲಾಗಿತ್ತು ಎಂದು ತಿಳಿದುಬಂದಿದೆ.
ಇರಾನ್‌ನ ಪಶ್ಚಿಮ ನಗರವಾದ ಸನಂದಜ್‌ನಲ್ಲಿ 19 ವರ್ಷದ ಗರ್ಭಿಣಿ ಹೆಲಿಯಾ ಫತ್ತಾಹಿ ಅವರನ್ನು ತನ್ನ ಪೋಷಕರೇ ಕೊಂದ ಘಟನೆ ವರದಿಯಾಗಿತ್ತು. ಯುವಕನೊಬ್ಬನೊಂದಿಗಿನ ಸಂಬಂಧದಿಂದ ತಾನು ಎರಡು ತಿಂಗಳ ಗರ್ಭಿಣಿಯಾಗಿರುವ ವಿಷಯವನ್ನು ಆಕೆ ಮನೆಯಲ್ಲಿ ತಿಳಿಸಿದ್ದಳು. ಇದರಿಂದ ಕೋಪಗೊಂಡ ಪೋಷಕರಾದ ವೋರಿಯಾ ಫತ್ತಾಹಿ ಮತ್ತು ಲೈಲಾ ವೀಸ್, ಮಗಳಿಗೆ ಸುಮಾರು 30 ನಿದ್ರೆ ಮಾತ್ರೆಗಳನ್ನು ಬಲವಂತವಾಗಿ ನುಂಗಿಸಿ, ತೀವ್ರವಾಗಿ ಥಳಿಸಿ, ಬಳಿಕ ದಿಂಬಿನಿಂದ ಉಸಿರುಗಟ್ಟಿಸಿ ಕೊಂದಿದ್ದರು, (ಏಜೆನ್ಸೀಸ್).