

ವಾಷಿಂಗ್ಟನ್: ಹಲವು ವಿವಾಹೇತರ ಸಂಬಂಧಗಳು ಮತ್ತು ಅದರಲ್ಲೊಬ್ಬರು ಚೀನಾದ ಸ್ಪೈ ಎಂಬ ಆರೋಪದ ಮೇರೆಗೆ ಕಳೆದ ವಾರವಷ್ಟೇ ಎನ್ವಿಡಿಯಾ ಸಿಇಒ ಹುದ್ದೆಗೆ ರಾಜೀನಾಮೆ ನೀಡಿದ್ದ ಜೆನ್ಸನ್ ಹುವಾಂಗ್, 11 ದಿನಗಳ ಬಳಿಕ ಮತ್ತೆ ಕಂಪನಿಯ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಈ ವೇಳೆ ಎನ್ವಿಡಿಯಾದ ಉದ್ಯೋಗಿಗಳು ಅವರಿಗೆ ಅದ್ದೂರಿ ಸ್ವಾಗತ ಕೋರಿದ್ದಾರೆ.
ಕ್ಯಾಲಿಫೋರ್ನಿಯಾದ ಸಾಂಟಾ ಕ್ಲಾರಾದಲ್ಲಿರುವ ಕಂಪನಿಯ ಪ್ರಧಾನ ಕಚೇರಿಗೆ ಮತ್ತೆ ಸಿಇಒ ಆಗಿ ಬಂದ 63 ವರ್ಷದ ಜೆನ್ಸನ್ ಹುವಾಂಗ್ಗೆ ಎನ್ವಿಡಿಯಾ ಉದ್ಯೋಗಿಗಳು ಹರ್ಷೋದ್ಗಾರ, ಜೆನ್ಸೆನ್! ಜೆನ್ಸೆನ್! ಎಂಬ ಘೋಷಣೆಗಳು ಹಾಗೂ ಚಪ್ಪಾಳೆಗಳ ಮೂಲಕ ಭವ್ಯ ಸ್ವಾಗತ ಕೋರಿದ್ದಾರೆ. ಉದ್ಯೋಗಿಗಳು ತಮ್ಮ ಫೋನ್ಗಳಲ್ಲಿ ಆ ಕ್ಷಣವನ್ನು ರೆಕಾರ್ಡ್ ಮಾಡಿಕೊಂಡಿದ್ದಾರೆ. ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿವೆ.
ಅದ್ದೂರಿ ಸ್ವಾಗತದ ನಡುವೆ ಮಾತನಾಡಿರುವ ಜೆನ್ಸನ್, ಎರಡನೇ ಅವಕಾಶಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ನಾನು ಎರಡನೇ ಬಾರಿಗೆ ಉತ್ತಮ CEO ಆಗಲಿದ್ದೇನೆ. ಇದು ನನ್ನ ಕೆಲಸದ ಮೊದಲ ದಿನ. ನನ್ನ ಬಳಿ ಕಂಪ್ಯೂಟರ್ ಇಲ್ಲ, ಆದ್ದರಿಂದ ಐಟಿ ವಿಭಾಗವು ನನಗೆ ಹೊಸ ಪಿಸಿ ನೀಡಲಿದೆ. ಇದು RTX ಸ್ಪಾರ್ಕ್ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.
ಇದೇ ವೇಳೆ ಉದ್ಯೋಗಿಗಳಿಗೆ ಕ್ಷಮೆ ಕೇಳಿರುವ ಅವರು, ನಿಮ್ಮೆಲ್ಲರಿಗೂ ಧನ್ಯವಾದಗಳು. ನನ್ನಿಂದಾಗಿ ನೀವೆಲ್ಲರೂ ಇಂತಹ ಪರಿಸ್ಥಿತಿ ಎದುರಿಸುವಂತಾದದ್ದಕ್ಕೆ ನಾನು ತೀವ್ರ ವಿಷಾದ ವ್ಯಕ್ತಪಡಿಸುತ್ತೇನೆ. ನಾನು ಕೆಲವು ಘೋರ ತಪ್ಪುಗಳನ್ನು ಮಾಡಿದ್ದೇನೆ, ಅವುಗಳನ್ನು ಸರಿಪಡಿಸಿಕೊಂಡು ಮತ್ತೆ ಮರಳಿ ಬರಲು ಪ್ರಯತ್ನಿಸುತ್ತೇನೆ ಎಂದಿದ್ದಾರೆ.
ಚೀನಾದ ಗೂಢಚರ್ಯೆ ನಂಟು ಹಾಗೂ ವಿವಾಹೇತರ ಸಂಬಂಧಗಳ ವಿವಾದದಿಂದ ಕಳೆದ ವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಜೆನ್ಸನ್ ಹುವಾಂಗ್ ಅವರನ್ನು ಸೋಮವಾರ(ನ. 23) ಎನ್ವಿಡಿಯಾ ಮಂಡಳಿ ಮತ್ತೆ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಪುನಃ ನೇಮಕ ಮಾಡಿಕೊಂಡಿದೆ. ಇದರ ಬೆನ್ನಲ್ಲೆ ಅಮೆರಿಕದ ಷೇರು ಮಾರುಕಟ್ಟೆಯಲ್ಲಿ ಎನ್ವಿಡಿಯಾ ಶೇರುಗಳು ಶೇ. 32ರಷ್ಟು ಏರಿಕೆ ಕಂಡಿವೆ.
ಹುವಾಂಗ್ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದ ನಿರ್ಧಾರವನ್ನು ಎನ್ವಿಡಿಯಾ ನಿರ್ದೇಶಕರ ಮಂಡಳಿ ದಿಢೀರ್ ರದ್ದುಗೊಳಿಸಿದೆ. ಹುವಾಂಗ್ ಅವರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದ ನಂತರ, ಕಂಪನಿಯನ್ನು ಮುನ್ನಡೆಸಲು ಅವರೇ ಸರಿಯಾದ ವ್ಯಕ್ತಿ ಎಂಬ ತೀರ್ಮಾನಕ್ಕೆ ಮಂಡಳಿ ಬಂದಿದೆ. ಅಷ್ಟೇ ಅಲ್ಲ, ಈ ನಿರ್ಧಾರ ತೆಗೆದುಕೊಳ್ಳುವ ಮುನ್ನ ಅಮೆರಿಕ ಸರ್ಕಾರದ ಹಿರಿಯ ಅಧಿಕಾರಿಗಳ ಅಭಿಪ್ರಾಯವನ್ನೂ ಪಡೆಯಲಾಗಿದೆ ಎಂದು ಕಂಪನಿ ತಿಳಿಸಿದೆ.
ಮಂಡಳಿಯ ಅಧ್ಯಕ್ಷ ಹಾರ್ವೆ ಸಿ ಜೋನ್ಸ್ ಈ ಬಗ್ಗೆ ಪ್ರತಿಕ್ರಿಯಿಸಿ, "ಜೆನ್ಸನ್ ಮೇಲೆ ನಮಗೆ ಸಂಪೂರ್ಣ ವಿಶ್ವಾಸವಿದೆ. ಕಂಪನಿಯ ಷೇರುದಾರರು, ಉದ್ಯೋಗಿಗಳು ಮತ್ತು ಗ್ರಾಹಕರ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಂಡಿದ್ದೇವೆ" ಎಂದಿದ್ದಾರೆ. ಈ ಮೂಲಕ ಮಧ್ಯಂತರ ಸಿಇಒ ಆಗಿ ಕೆಲಸ ಮಾಡುತ್ತಿದ್ದ ಕೊಲೆಟ್ ಕ್ರೆಸ್ ಅವರ ತಾತ್ಕಾಲಿಕ ಅವಧಿ ಮುಗಿದಿದ್ದು, ಅವರು ಮತ್ತೆ ಮುಖ್ಯ ಹಣಕಾಸು ಅಧಿಕಾರಿಯಾಗಿ (CFO) ಮುಂದುವರಿಯಲಿದ್ದಾರೆ.
ಜೆನ್ಸನ್ ಹುವಾಂಗ್ ಮತ್ತೆ ಎನ್ವಿಡಿಯಾ ಸಿಇಒ ಆಗಿ ಮರಳುವುದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲ ನೀಡಿದ್ದಾರೆ. ನ್ಸನ್ ಜಗತ್ತಿನ ಅತ್ಯಂತ ಮೇಧಾವಿ ವ್ಯಕ್ತಿಗಳಲ್ಲಿ ಒಬ್ಬರು, ಅವರಿಗೆ ಎರಡನೇ ಅವಕಾಶ ಸಿಗಬೇಕು" ಎಂದು ಬಹಿರಂಗವಾಗಿ ಬೆಂಬಲ ಸೂಚಿಸಿದ್ದರು.
ಜೆನ್ಸನ್ ಮರುನೇಮಕದ ಬಳಿಕ ತಮ್ಮ ಟ್ರೂತ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿರುವ ಟ್ರಂಪ್, "ಎನ್ವಿಡಿಯಾ ಮಂಡಳಿ ಸರಿಯಾದ ನಿರ್ಧಾರ ತೆಗೆದುಕೊಂಡಿದೆ. ಜೆನ್ಸನ್ ಯಾವುದೇ ಕಾನೂನುಬಾಹಿರ ಕೆಲಸ ಮಾಡಿದ್ದಾರೆ ಎಂಬುದಕ್ಕೆ ಅಮೆರಿಕ ಸರ್ಕಾರದ ಬಳಿ ಯಾವುದೇ ಸಾಕ್ಷ್ಯವಿಲ್ಲ ಎಂದು ಅಟಾರ್ನಿ ಜನರಲ್ ದೃಢಪಡಿಸಿದ್ದಾರೆ. ಅವರು ಒಬ್ಬ ಶ್ರೇಷ್ಠ ದೇಶಭಕ್ತ ಮತ್ತು ರಾಷ್ಟ್ರೀಯ ಸಂಪತ್ತು. ಅಮೆರಿಕದ ಆರ್ಥಿಕತೆಗೆ ಅವರ ನಾಯಕತ್ವದ ಅಗತ್ಯವಿದೆ ಎಂದಿದ್ದಾರೆ (ಏಜೆನ್ಸೀಸ್).