

ಟೆಕ್ಸಾಸ್: ಎಟಿಎಂ ಯಂತ್ರದ ಮೇಲಿಟ್ಟು ಮರೆತು ಹೋಗಿದ್ದ ಸುಮಾರು ಒಂದು ಕೋಟಿ ರೂಪಾಯಿಗೂ ಅಧಿಕ ಹಣವನ್ನು ಸಂಬಂಧಪಟ್ಟ ವ್ಯಕ್ತಿಗೆ ಹಿಂದಿರುಗಿಸುವ ಮೂಲಕ ಕ್ಷೌರಿಕನೊಬ್ಬ ( Barber ) ಪ್ರಾಮಾಣಿಕತೆ ಮೆರೆದ ಘಟನೆ ಅಮೆರಿಕದ ಟೆಕ್ಸಾಸ್‌ನಲ್ಲಿ ನಡೆದಿದೆ. ಈ ಅಪರೂಪದ ಘಟನೆ ಭಾರಿ ಮೆಚ್ಚುಗೆಗೆ ಪಾತ್ರವಾಗಿದ್ದು, ಮನುಷ್ಯತ್ವ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.
ಉತ್ತರ ಟೆಕ್ಸಾಸ್‌ನಲ್ಲಿ ನಡೆದ ಘಟನೆಯ ವಿವರಗಳ ಪ್ರಕಾರ, 37 ವರ್ಷದ ಕ್ಷೌರಿಕ ಹಾಗೂ ಮತ್ತೊಬ್ಬ ಮಹಿಳೆ ಬ್ಯಾಂಕ್ ಎಟಿಎಂ ಬಳಿಗೆ ಹಣ ಡ್ರಾ ಮಾಡಲು ತೆರಳಿದ್ದರು. ಆ ಸಂದರ್ಭದಲ್ಲಿ ಎಟಿಎಂ ಮೇಲ್ಭಾಗದಲ್ಲಿ ರಾಶಿ ರಾಶಿ ನಗದು ತುಂಬಿದ ಬ್ಯಾಗ್‌ಗಳು ಮತ್ತು 19 ಚೆಕ್‌ಗಳಿದ್ದ ಸಣ್ಣ ಚೀಲವಿರುವುದನ್ನು ಕಂಡು ದಂಗಾಗಿ ಹೋದರು.
ಯಾರೂ ಇಲ್ಲದ ಸಮಯದಲ್ಲಿ ಬೃಹತ್ ಮೊತ್ತದ ಹಣ ಕೈಗೆ ಸಿಕ್ಕರೂ ದುರಾಸೆಗೆ ಒಳಗಾಗದ ಆ ಇಬ್ಬರು, ಕೂಡಲೇ ತುರ್ತು ಸೇವೆಗೆ (911) ಕರೆ ಮಾಡಿ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಧಾವಿಸಿ ಬಂದ ಪೊಲೀಸ್ ಅಧಿಕಾರಿಗಳು ಹಣವನ್ನು ಪರಿಶೀಲಿಸಿ ಎಣಿಕೆ ಮಾಡಿದಾಗ ಬರೋಬ್ಬರಿ ಒಂದು ಕೋಟಿ ರೂಪಾಯಿಗೂ ಅಧಿಕ (ಸುಮಾರು $128,510) ನಗದು ಇರುವುದು ದೃಢಪಟ್ಟಿದೆ.
ಪೊಲೀಸರ ತನಿಖೆಯಿಂದ ತಿಳಿದುಬಂದ ಸಂಗತಿಯೆಂದರೆ, ಬ್ಯಾಂಕ್ ಆಫ್ ಅಮೆರಿಕದ ಹಣ ವರ್ಗಾವಣೆ ಜವಾಬ್ದಾರಿ ಹೊತ್ತಿರುವ 'ಬ್ರಿಂಕ್ಸ್' (Brinks) ಕಂಪನಿಯ ಉದ್ಯೋಗಿಯೊಬ್ಬರು ಎಟಿಎಂ ನಿರ್ವಹಣಾ ಕೆಲಸ ಮಾಡುವಾಗ ಆ ಹಣದ ಬ್ಯಾಗ್ ಅನ್ನು ಮರೆತು ಅಲ್ಲಿಯೇ ಬಿಟ್ಟು ತೆರಳಿದ್ದರು. ನಂತರ ಸ್ಥಳಕ್ಕೆ ಆಗಮಿಸಿದ ಬ್ಯಾಂಕ್ ಅಧಿಕಾರಿಗಳು ಅಧಿಕೃತವಾಗಿ ಹಣವನ್ನು ವಾಪಸ್ ಪಡೆದುಕೊಂಡಿದ್ದಾರೆ.
ಈ ಪ್ರಾಮಾಣಿಕ ದಂಪತಿಯ ನಿಸ್ವಾರ್ಥ ಗುಣವನ್ನು ಸ್ಥಳೀಯ ಪೊಲೀಸ್ ಮುಖ್ಯಸ್ಥರು ಕೊಂಡಾಡಿದ್ದು, ಇಂತಹ ಸಂದರ್ಭಗಳಲ್ಲಿ ಸಾರ್ವಜನಿಕರ ಸಹಕಾರ ಎಷ್ಟು ಮುಖ್ಯ ಎಂಬುದಕ್ಕೆ ಈ ಘಟನೆ ಉತ್ತಮ ನಿದರ್ಶನ ಎಂದು ಬಣ್ಣಿಸಿದ್ದಾರೆ. ಕಷ್ಟಪಟ್ಟು ಸಂಪಾದಿಸದ ಹಣಕ್ಕೆ ಆಸೆಪಡದ ಆ ಕ್ಷೌರಿಕನ ಪ್ರಾಮಾಣಿಕತೆ ಇಂದು ಎಲ್ಲೆಡೆ ಪ್ರಶಂಸೆಗೆ ಪಾತ್ರವಾಗಿದೆ, (ಏಜೆನ್ಸೀಸ್).