ಗುಂಪು ಕೃಷಿಗೆ ಒತ್ತುಕೊಟ್ಟರೆ ಹೆಚ್ಚಿನ ಲಾಭ

Agricultural Science Center
ಶಿವಮೊಗ್ಗ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಹಣ್ಣು ಮತ್ತು ಆಹಾರ ಮೇಳದ ಎರಡನೇ ದಿನದ ತಾಂತ್ರಿಕ ಸಮಾವೇಶದಲ್ಲಿ ಶಿವಮೊಗ್ಗ ಚೈತನ್ಯ ಗ್ರಾಮೀಣಾಭಿವೃದ್ಧಿ ಸಂಘದ ಅಧ್ಯಕ್ಷ ಬಿ.ಟಿ.ಭದ್ರೀಶ್ ಮಾತನಾಡಿದರು.
Published on

ಶಿವಮೊಗ್ಗ: ಕೃಷಿಯನ್ನು ಒಬ್ಬೊಂಟಿಗರಾಗಿ ಮಾಡಿ ಲಾಭ ಗಳಿಸುವುದು ಅಸಾಧ್ಯ. ಗುಂಪು ಕೃಷಿಗೆ ಒತ್ತುಕೊಟ್ಟರೆ ಹೆಚ್ಚಿನ ಲಾಭ ನಿರೀಕ್ಷಿಸಲು ಸಾಧ್ಯವಿದೆ ಎಂದು ಶಿವಮೊಗ್ಗ ಚೈತನ್ಯ ಗ್ರಾಮೀಣಾಭಿವೃದ್ಧಿ ಸಂಘದ ಅಧ್ಯಕ್ಷ ಬಿ.ಟಿ.ಭದ್ರೀಶ್ ಸಲಹೆ ನೀಡಿದರು.

ನವುಲೆ ಕೃಷಿ ವಿಜ್ಞಾನ ಕೇಂದ್ರದ ರಜತ ಮಹೋತ್ಸವದ ಅಂಗವಾಗಿ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ವೈವಿಧ್ಯಮಯ ಹಣ್ಣುಗಳು ಮತ್ತು ಆಹಾರಮೇಳದಲ್ಲಿ ಭಾನುವಾರ ತಾಂತ್ರಿಕ ಸಮಾವೇಶದಲ್ಲಿ ರೈತ ಉತ್ಪಾದಕ ಕಂಪನಿಗಳ ಒಕ್ಕೂಟದ ಮಹತ್ವ ಕುರಿತು ಮಾತನಾಡಿದರು.

2016ರಲ್ಲಿ ರೈತ ಉತ್ಪಾದಕ ಕಂಪನಿಗಳ ಸ್ಥಾಪನೆ ಆಯಿತು. ಕರೊನಾ ಸಂದರ್ಭ ಎರಡು ವರ್ಷ ಹೊರತುಪಡಿಸಿ ಉಳಿದೆಲ್ಲ ವರ್ಷವೂ ಕಂಪನಿಗಳು ಸಕ್ರಿಯವಾಗಿವೆ. ಶಿವಮೊಗ್ಗ ಜಿಲ್ಲೆಯಲ್ಲೇ 51 ರೈತ ಉತ್ಪಾದಕ ಕಂಪನಿಗಳ ನೋಂದಣಿಯಾಗಿವೆ. ಇದರಲ್ಲಿ ಎರಡು ಮಾತ್ರ ಸಕ್ರಿಯವಾಗಿಲ್ಲ. ಉಳಿದೆಲ್ಲವೂ 30,422 ಷೇರುದಾರರನ್ನು ಒಳಗೊಂಡಿವೆ. ಕಳೆದ ಮೂರು ವರ್ಷಗಳಲ್ಲಿ ಆದಾಯ ಮತ್ತು ವಹಿವಾಟು ದ್ವಿಗುಣವಾಗಿದೆ ಎಂದು ಹೇಳಿದರು.

2022-23ರಲ್ಲಿ 15 ಕೋಟಿ ರೂ. ವಹಿವಾಟು ನಡೆಸಿದರೆ, 25 ಲಕ್ಷ ರೂ. ಆದಾಯ, 2023-24ರಲ್ಲಿ 34ಕೋಟಿ ರೂ. ವಹಿವಾಟು ನಡೆಸಿ 65 ಲಕ್ಷ ರೂ. ಆದಾಯ ಗಳಿಸಿತು. ಕಳೆದ 2024-25ನೇ ಸಾಲಿನಲ್ಲಿ 60 ಕೋಟಿ ರೂ. ವಹಿವಾಟು ನಡೆಸಿ 1.05 ಕೋಟಿ ರೂ. ಆದಾಯ ಗಳಿಸಿವೆ. 2025-26ನೇ ಸಾಲಿಗೆ ಜಿಲ್ಲೆಯ ವಹಿವಾಟು 100 ಕೋಟಿ ರೂ. ದಾಟುವ ವಿಶ್ವಾಸವಿದೆ. ಅದೇ ರೀತಿ ಬಿತ್ತನೆಬೀಜ, ರಸಗೊಬ್ಬರ ಮತ್ತಿತರ ಪರಿಕರಗಳ ಖರೀದಿ ಹಾಗೂ ಮಾರಾಟದಲ್ಲೂ ದಾಖಲೆ ನಿರ್ಮಿಸಲಾಗಿದೆ ಎಂದರು.

ಎರಡನೇ ದಿನವೂ ಜನದಟ್ಟಣೆ

ಹಣ್ಣು ಮತ್ತು ಆಹಾರ ಮೇಳದ ಎರಡನೇ ದಿನವೂ ಜನದಟ್ಟಣೆ ಹೆಚ್ಚಿತ್ತು. ವಾರಾಂತ್ಯ ಭಾನುವಾರ ಆಗಿದ್ದ ಕಾರಣ ಸಾವಿರಾರು ರೈತರು, ವಿದ್ಯಾರ್ಥಿಗಳು, ಗೃಹಿಣಿಯರು, ಉದ್ಯಮಿಗಳು, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ಅಧಿಕಾರಿಗಳು ಮೇಳಕ್ಕೆ ಭೇಟಿ ನೀಡಿದ್ದರು. ಮಾವು, ಹಲವು, ನಿಂಬೆ, ತೆಂಗು, ಸಪೋಟಾ, ಕರಿಬೇವು, ಅಲಂಕಾರಿಕ ಗಿಡಗಳು, ವಿವಿಧ ಬಗೆಯ ಹಣ್ಣುಗಳನ್ನು ಖರೀದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net