ಮಗಳ ಕಣ್ಣೆದುರೇ ಅಪ್ಪನ ಬರ್ಬರ ಹತ್ಯೆ; SC/ST ಕಾಯ್ದೆಯಡಿ ದೂರು ನೀಡಿದ್ದೇ ಕೊಲೆಗೆ ಕಾರಣವೇ? | Dalit man murder

ಉತ್ತರ ಪ್ರದೇಶದಲ್ಲಿ 10 ವರ್ಷದ ಮಗಳ ಎದುರೇ ದಲಿತ ವ್ಯಕ್ತಿ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ. ಹಳೆಯ ವೈಷಮ್ಯದಿಂದ ಕೃತ್ಯ ನಡೆದಿದದೆ ಎನ್ನಲಾಗಿದೆ. ದೂರಿನ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ
Dalit Man Killed in Uttar Pradesh
ಸಾಂದರ್ಭಿಕ ಚಿತ್ರ
Published on: 
Summary

• ಉತ್ತರ ಪ್ರದೇಶದದಲ್ಲಿ 10 ವರ್ಷದ ಮಗಳ ಎದುರೇ ದಲಿತ ವ್ಯಕ್ತಿಯ ಹತ್ಯೆ

• ಮಾರುಕಟ್ಟೆಯಿಂದ ಮನೆಗೆ ಮರಳುತ್ತಿದ್ದವನ ಮೇಲೆ ಲಾಠಿ ಮತ್ತು ಕಲ್ಲುಗಳಿಂದ ಹಲ್ಲೆ

• ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಕೊಲೆ ನಡೆದಿರುವ ಶಂಕೆ

Dalit Man Killed in Uttar Pradesh: ಉತ್ತರ ಪ್ರದೇಶದಲ್ಲಿ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ದೂರು ನೀಡಿದ್ದ ಕಾರಣಕ್ಕೆ ದಲಿತ ವ್ಯಕ್ತಿಯನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. 10 ವರ್ಷದ ಮಗಳ ಕಣ್ಣೆದುರೇ ವ್ಯಕ್ತಿಯ ಮೇಲೆ ಬರ್ಬರವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದೆ.

ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯ ಲುಧೌರಾ ಗ್ರಾಮದ ಮನೋಜ್ ಗೌತಮ್ (35) ಅವರು ತಮ್ಮ 10 ವರ್ಷದ ಮಗಳೊಂದಿಗೆ ಸ್ಥಳೀಯ ಮಾರುಕಟ್ಟೆಯಿಂದ ಮನೆಗೆ ಹಿಂದಿರುಗುತ್ತಿದ್ದರು. ಈ ವೇಳೆ ರಾಷ್ಟ್ರೀಯ ಹೆದ್ದಾರಿ 30ರ ಬಳಿ ದುಷ್ಕರ್ಮಿಗಳ ಗುಂಪೊಂದು ಅವರನ್ನು ತಡೆದು ಲಾಠಿ ಮತ್ತು ಕಲ್ಲುಗಳಿಂದ ಹಲ್ಲೆ ನಡೆಸಿದೆ ಎಂದು ವರದಿಯಾಗಿದೆ.

‘ಅಪ್ಪನನ್ನು ಬಿಟ್ಟುಬಿಡಿ’ ಎಂದು ಅಂಗಲಾಚಿದ ಮಗಳು

ಮನೋಜ್ ಮೇಲೆ ಹಲ್ಲೆ ನಡೆಯುತ್ತಿದ್ದಾಗ, ಅವರ 10 ವರ್ಷದ ಮಗಳು ಅಪ್ಪನನ್ನು ಬಿಟ್ಟುಬಿಡುವಂತೆ ಹಲ್ಲೆಕೋರರ ಬಳಿ ಬೇಡಿಕೊಂಡಿದ್ದಾಳೆ. ಕುಟುಂಬದವರೂ ಹಲ್ಲೆ ನಿಲ್ಲಿಸುವಂತೆ ಮನವಿ ಮಾಡಿದ್ದಾರೆ. ಆದರೂ ಆರೋಪಿಗಳು ಹಲ್ಲೆ ಮುಂದುವರಿಸಿದ್ದಾರೆ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡ ಮನೋಜ್ ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ದೂರು ನೀಡಿದ್ದೇ ಕೊಲೆಗೆ ಕಾರಣವೇ?

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಮನೋಜ್ ಗೌತಮ್ ಮತ್ತು ಆರೋಪಿಗಳ ಕುಟುಂಬದ ನಡುವೆ ಹಳೆಯ ವೈಷಮ್ಯವಿತ್ತು. ಮನೋಜ್ ಈ ಹಿಂದೆ ಆರೋಪಿಗಳ ವಿರುದ್ಧ ಎಸ್‌ಸಿ/ಎಸ್‌ಟಿ (SC/ST) ಕಾಯ್ದೆಯಡಿ ದೂರು ನೀಡಿದ್ದರು ಎನ್ನಲಾಗಿದೆ. ಈ ದ್ವೇಷವೇ ಕೊಲೆಗೆ ಕಾರಣವಾಗಿರಬಹುದು ಎಂಬ ಶಂಕೆಯಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಆರು ಜನರ ವಿರುದ್ಧ ಪ್ರಕರಣ; ನಾಲ್ವರ ಬಂಧನ

ಮನೋಜ್ ಗೌತಮ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರು ಸೇರಿದಂತೆ ಆರು ಜನರ ವಿರುದ್ಧ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಮತ್ತು ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಪ್ರಮುಖ ಆರೋಪಿಗಳಾದ ಶುಭಂ ಸಿಂಗ್, ಧೀರೇಂದ್ರ ಸಿಂಗ್ ಮತ್ತು ನರೇಂದ್ರ ಸಿಂಗ್ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳಿಗಾಗಿ ಪೊಲೀಸರು ನಾಲ್ಕು ತಂಡಗಳನ್ನು ರಚಿಸಿ ಹುಡುಕಾಟ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಪೊಲೀಸರನ್ನು ಕಂಡು ಪರಾರಿಯಾಗಲು ಯತ್ನಿಸಿದ ಬೈಕ್ ಸವಾರ; ರಸ್ತೆಗೆ ಬಿದ್ದ ಮಹಿಳೆಯನ್ನು ಬಿಟ್ಟು ಎಸ್ಕೇಪ್! | Bike rider escapes

ಈ ಘಟನೆಗೆ ಸ್ಥಳೀಯವಾಗಿ ಆಕ್ರೋಶ ವ್ಯಕ್ತವಾಗಿದ್ದು, ಮನೋಜ್ ಗೌತಮ್ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ. ಪ್ರಕರಣದ ಬಗ್ಗೆ ಕಮಲಾಪುರ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net