ಇಎಸ್‌ಐಎಸ್ ಕಾಯಂ ನೌಕರರಿಗೆ ಸಿಕ್ಕಿಲ್ಲ ಸೆಪ್ಟೆಂಬರ್ ವೇತನ: ಕುಟುಂಬ ನಿರ್ವಹಣೆಗೆ ಪರದಾಟ- ESIS Employee salary delay

ಬಾಕಿ ವೇತನವನ್ನು ತಕ್ಷಣ ಪಾವತಿಸಲು ಮತ್ತು ಮುಂದಿನ ದಿನಗಳಲ್ಲಿ ವೇತನ ವಿಳಂಬ ಮರುಕಳಿಸದಂತೆ ಶಾಶ್ವತ ಹಣಕಾಸು ವ್ಯವಸ್ಥೆ ರೂಪಿಸುವಂತೆ ಕರ್ನಾಟಕ ಇಎಸ್‌ಐಎಸ್‌ಎಂಎಸ್ ಫಾರ್ಮಸಿಸ್ಟ್ ಎಂಪ್ಲಾಯಿಸ್ ವೆಲ್ಫೇರ್ ಅಸೋಸಿಯೇಷನ್, ಕಾರ್ಮಿಕ ಸಚಿವ ಸಂತೋಷ್ ಲಾಡ್‌ಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಕುಟುಂಬ ನಿರ್ವಹಣೆಗೆ ಪರದಾಟ
ಇಎಸ್​ಐಎಸ್​ ಅಧಿಕಾರಿಗಳಿಗೆ ಸಿಕ್ಕಿಲ್ಲ ವೇತನ
Published on: 

ಬೆಂಗಳೂರು: (ESIS Employee salary delay) ಕಾರ್ಮಿಕ ರಾಜ್ಯ ವಿಮಾ ವೈದ್ಯಕೀಯ ಸೇವೆಗಳ ಇಲಾಖೆಯಲ್ಲಿ (ಇಎಸ್‌ಐಎಸ್‌ಎಂಎಸ್) ಕಾರ್ಯನಿರ್ವಹಿಸುತ್ತಿರುವ ಕಾಯಂ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಪ್ರಸಕ್ತ ಸಾಲಿನಿಂದ ಪದೇಪದೆ ವೇತನ ಪಾವತಿಯಲ್ಲಿ ವಿಳಂಬವಾಗುತ್ತಿದೆ. ಸೆಪ್ಟೆಂಬರ್ ತಿಂಗಳ ವೇತನ ಬಾರದ ಕಾರಣ ಕುಟುಂಬ ನಿರ್ವಹಣೆಗೆ ನೌಕರರು ಕಷ್ಟ ಅನುಭವಿಸುತ್ತಿದ್ದಾರೆ.

ಕರ್ನಾಟಕ ಕಾರ್ಮಿಕರ ರಾಜ್ಯ ವಿಮಾ ಸೊಸೈಟಿ ಆಗಿ ರಚಿಸುವ ಮುನ್ನ ರಾಜ್ಯ ಸರ್ಕಾರವು, ಇಎಸ್‌ಐಎಸ್‌ಎಂಎಸ್ ಇಲಾಖೆಗೆ ನೀಡುತ್ತಿರುವ ವಾರ್ಷಿಕ ಬಜೆಟ್ ಅನುದಾನದಲ್ಲಿ ಪ್ರತಿ ತಿಂಗಳು ಕಾಯಂ ನೌಕರರಿಗೆ ವೇತನವಾಗುತ್ತಿತ್ತು. ಸೊಸೈಟ್ ಆಗಿ ರಚಿಸಿದ ಬಳಿಕ ಪ್ರಸಕ್ತ ಸಾಲಿನಲ್ಲಿ ವಾರ್ಷಿಕ ಅನುದಾನ ಸ್ಥಗಿತಗೊಳಿಸಲಾಗಿದೆ. ಅಧಿಕಾರಿಗಳು ಮತ್ತು ನೌಕರರ ವೇತನ ಪಾವತಿಗೆ ಅಗತ್ಯವಿರುವ ಹಣವನ್ನು ಕರ್ನಾಟಕ ಕಾರ್ಮಿಕರ ರಾಜ್ಯ ವಿಮಾ ನಿಗಮದಿಂದ, ಸೊಸೈಟಿಗೆ ಹಣ ಸ್ವೀಕರಿಸಿದ ನಂತರವಷ್ಟೇ ಬಿಡುಗಡೆ ಮಾಡುತ್ತಿರುವುದರಿಂದ ವೇತನ ವಿಳಂಬಕ್ಕೆ ಕಾರಣವಾಗಿದೆ.

Also Read
ಮಹಿಳೆ ದೂರು: ಬೆಂಗಳೂರಲ್ಲಿ ಹುಣಸಮಾರನಹಳ್ಳಿ ಮಠದ ನಂಜೇಶ್ವರ ಶಿವಾಚಾರ್ಯ ಸ್ವಾಮೀಜಿ ಅರೆಸ್ಟ್...! Nanjeshwara Shivacharya Swamiji
ಕುಟುಂಬ ನಿರ್ವಹಣೆಗೆ ಪರದಾಟ

ಸೊಸೈಟಿಯಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡ ನೌಕರರ ವೇತನವನ್ನು ನಿಗದಿತ ಸಮಯದಲ್ಲಿ ಪಾವತಿಸಲಾಗುತ್ತಿದೆ. ಆದರೆ, ಕಾಯಂ ನೌಕರರಿಗೆ ಮಾತ್ರ ವೇತನ ವಿಳಂಬವಾಗುತ್ತಿದೆ. ಮಾರ್ಚ್ ಮತ್ತು ಏಪ್ರಿಲ್ನಲ್ಲೂ ವೇತನ ವಿಳಂಬವಾಗಿತ್ತು. ಸೆಪ್ಟೆಂಬರ್‌ನಲ್ಲಿಯೂ ಕೆಲವು ನೌಕರರಿಗೆ ಮಾತ್ರ ವೇತನ ಪಾವತಿಯಾಗಿ ಉಳಿದವರು ಕಾಯುವಂತಾಗಿದೆ. ಬಾಕಿ ವೇತನವನ್ನು ತಕ್ಷಣ ಪಾವತಿಸಲು ಮತ್ತು ಮುಂದಿನ ದಿನಗಳಲ್ಲಿ ವೇತನ ವಿಳಂಬ ಮರುಕಳಿಸದಂತೆ ಶಾಶ್ವತ ಹಣಕಾಸು ವ್ಯವಸ್ಥೆ ರೂಪಿಸುವಂತೆ ಕರ್ನಾಟಕ ಇಎಸ್‌ಐಎಸ್‌ಎಂಎಸ್ ಫಾರ್ಮಸಿಸ್ಟ್ ಎಂಪ್ಲಾಯಿಸ್ ವೆಲ್ಫೇರ್ ಅಸೋಸಿಯೇಷನ್, ಕಾರ್ಮಿಕ ಸಚಿವ ಸಂತೋಷ್ ಲಾಡ್‌ಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಆಡಳಿತಾತ್ಮಕ ಗೊಂದಲ:

ಸೊಸೈಟಿ ಆಗಿ ರಚಿಸಿದ ಬಳಿಕ ಕೆಲವೊಂದು ಆಡಳಿತಾತ್ಮಕ ಗೊಂದಲಗಳು ಸೃಷ್ಟಿಯಾಗಿವೆ. ನೌಕರರ ಸೇವಾ ಭದ್ರತೆ, ಆಡಳಿತಾತ್ಮಕ ನಿಯಂತ್ರಣ, ಹಣಕಾಸು ವ್ಯವಸ್ಥೆ ಮತ್ತು ಸಮಾನಾಂತರ ನೇಮಕಾತಿಗಳು ಸೇರಿ ಭವಿಷ್ಯದ ಹಿತಾಸಕ್ತಿಗಳ ಬಗ್ಗೆ ಹಲವು ಪ್ರಶ್ನೆಗಳು ಉದ್ಭವಿಸಿವೆ. ಹಾಗಾಗಿ, ಈ ಕುರಿತು ಸ್ಪಷ್ಟನೆ ನೀಡುವಂತೆ ಇಎಸ್‌ಐಎಸ್ ಕರ್ನಾಟಕ ಅಧಿಕಾರಿಗಳು ಮತ್ತು ನೌಕರರ ಒಕ್ಕೂಟ, ಸರ್ಕಾರದ ಮುಖ್ಯ ಕಾರ್ಯದರ್ಶಿ, ಕಾರ್ಮಿಕ ಇಲಾಖೆ ಕಾರ್ಯದರ್ಶಿ ಹಾಗೂ ಕಾರ್ಮಿಕ ರಾಜ್ಯ ವಿಮಾ ವೈದ್ಯಕೀಯ ಸೇವೆಯ ಆಯುಕ್ತರಿಗೆ ಪತ್ರ ಬರೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net