Jodhpur Hospital: ಕ್ಷುಲ್ಲಕ ವಿಚಾರಕ್ಕೆ ನಡೆದ ಜಗಳದಲ್ಲಿ ಯುವಕನೊಬ್ಬನಿಗೆ ಗಂಭೀರ ಹಲ್ಲೆ ನಡೆದಿರುವ ಘಟನೆ ರಾಜಸ್ಥಾನದ ಜೋಧಪುರದಲ್ಲಿ ನಡೆದಿದೆ. ಕೆಲ ಯುವಕರು ಸುಮಾರು 4 ಅಡಿ ಉದ್ದದ ಶವರ್ ಪೈಪ್ ಅನ್ನು ಯುವಕನ ಖಾಸಗಿ ಅಂಗದ ಮೂಲಕ ಒಳಸೇರಿಸಿದ್ದು, ಅದು ದೊಡ್ಡ ಕರುಳಿಗೆ ಹಾನಿ ಮಾಡಿ ಹೊಟ್ಟೆಯೊಳಗೆ ಸಿಲುಕಿಕೊಂಡಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಯುವಕನಿಗೆ ಜೋಧಪುರದ ಮಥುರಾದಾಸ್ ಮಾಥುರ್ (MDM) ಆಸ್ಪತ್ರೆಯಲ್ಲಿ ವೈದ್ಯರು ಸಂಕೀರ್ಣ ಶಸ್ತ್ರಚಿಕಿತ್ಸೆ ನಡೆಸಿ ಜೀವ ಉಳಿಸಿದ್ದಾರೆ.
ಶೌಚಾಲಯಕ್ಕೆ ಹೋಗುವ ವಿಚಾರಕ್ಕೆ ಯುವಕನಿಗೂ ಇತರ ಯುವಕರಿಗೂ ಜಗಳ ನಡೆದಿತ್ತು ಎನ್ನಲಾಗಿದೆ. ಈ ವೇಳೆ ಆತನ ಮೇಲೆ ಹಲ್ಲೆ ನಡೆಸಿ ಪೈಪ್ ಒಳಸೇರಿಸಿದ್ದಾರೆ ಎಂದು ವರದಿಯಾಗಿದೆ. ನವೆಂಬರ್ 12ರಂದು ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪರೀಕ್ಷೆ ನಡೆಸಿದ ವೈದ್ಯರು ತುರ್ತು ಶಸ್ತ್ರಚಿಕಿತ್ಸೆಗೆ ನಿರ್ಧರಿಸಿದ್ದರು. ನವೆಂಬರ್ 13ರಂದು ಶಸ್ತ್ರಚಿಕಿತ್ಸೆ ನಡೆಸಿ ಪೈಪ್ ಹೊರತೆಗೆದಿದ್ದಾರೆ.
ಪೈಪ್ನಿಂದ ದೊಡ್ಡ ಕರುಳಿಗೆ ಹಾನಿಯಾಗಿತ್ತು. ಹೊಟ್ಟೆಯೊಳಗಿನ ಪ್ರಮುಖ ರಕ್ತನಾಳಗಳು, ಮೂತ್ರನಾಳ ಮತ್ತು ಇತರ ಅಂಗಗಳಿಗೆ ಗಾಯವಾಗುವ ಅಪಾಯವೂ ಇತ್ತು. ವೈದ್ಯರು ಕರುಳಿನ ಗಾಯವನ್ನು ಸರಿಪಡಿಸಿ, ಇತರ ಅಂಗಗಳಿಗೆ ಹಾನಿಯಾಗದಂತೆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಪ್ರಸ್ತುತ ಯುವಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಎಂಡಿಎಂ ಆಸ್ಪತ್ರೆಯ ಅಧೀಕ್ಷಕ ಡಾ. ವಿಕಾಸ್ ರಾಜಪುರೋಹಿತ್, ತಜ್ಞ ವೈದ್ಯರು ಮತ್ತು ಸಿಬ್ಬಂದಿಯ ಸಂಘಟಿತ ಪ್ರಯತ್ನದಿಂದ ಯುವಕನ ಜೀವ ಉಳಿಸಲು ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ. ಡಾ. ದಿನೇಶ್ ದತ್ ಶರ್ಮಾ ನೇತೃತ್ವದಲ್ಲಿ ಡಾ. ಪರಂಗ್ ಅಸೇರಿ, ಡಾ. ಪ್ರಗೇಶ್, ಡಾ. ಸುಚಿ ತಾಂಬಿ ಮತ್ತು ಡಾ. ಉಮೇಶ್ ಕುಮಾರ್ ಅವರ ತಂಡ ಶಸ್ತ್ರಚಿಕಿತ್ಸೆಯಲ್ಲಿ ಭಾಗವಹಿಸಿತ್ತು.
ವಿಶೇಷವೆಂದರೆ, ಮುಖ್ಯಮಂತ್ರಿ ಆಯುಷ್ಮಾನ್ ಆರೋಗ್ಯ (MAA) ಯೋಜನೆಯಡಿ ಯುವಕನಿಗೆ ಸಂಪೂರ್ಣ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಯುವಕ ಈವರೆಗೆ ಪೊಲೀಸರಿಗೆ ದೂರು ನೀಡಿಲ್ಲ ಎನ್ನಲಾಗಿದೆ.