ತೇಜಸ್ವಿ ಯಾದವ್‌ಗೆ ಆಹ್ವಾನವಿಲ್ಲ, ಮೋದಿ ಪೋಸ್ಟರ್‌ ಹರಿದು ಆರ್‌ಜೆಡಿ ಕಾರ್ಯಕರ್ತರ ಆಕ್ರೋಶ! | Tejashwi Yadav

Tejashwi Yadav
ನಿತೀಶ್ ಸೇತುವೆ ಉದ್ಘಾಟನೆಗೆ ತೇಜಸ್ವಿ ಯಾದವ್‌ಗೆ ಆಹ್ವಾನ ನೀಡಿಲ್ಲ ಎಂಬ ಆರೋಪ
Published on: 

Tejashwi Yadav: ಬಿಹಾರದ ವೈಶಾಲಿ ಜಿಲ್ಲೆಯ ಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ನೂತನ ನಿತೀಶ್ ಸೇತುವೆ ಉದ್ಘಾಟನೆ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಕಾರ್ಯಕ್ರಮಕ್ಕೆ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ಗೆ ಆಹ್ವಾನ ನೀಡದಿರುವುದನ್ನು ಖಂಡಿಸಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಪ್ರಧಾನಿ ಮೋದಿ ಹಾಗೂ ಸಿಎಂ ಸಮ್ರಾಟ್ ಚೌಧರಿ ಅವರ ಪೋಸ್ಟರ್‌ಗಳನ್ನು ಹರಿದು ಹಾಕಿ, ಬಿಜೆಪಿ ಧ್ವಜಗಳಿಗೆ ಒದ್ದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು 4,280 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಕೇಬಲ್ ಸ್ಟೇಡ್ ಸೇತುವೆಯನ್ನು ಬಿಹಾರ ಸಿಎಂ ಸಮ್ರಾಟ್ ಚೌಧರಿ ಮತ್ತು ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಸಮ್ಮುಖದಲ್ಲಿ ಉದ್ಘಾಟಿಸಿದರು. ಆದರೆ, ರಾಘೋಪುರ ಕ್ಷೇತ್ರದ ಶಾಸಕ ಹಾಗೂ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಅವರಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಿರಲಿಲ್ಲ ಎನ್ನಲಾಗಿದೆ. ಯೋಜನೆಗೆ ಅಡಿಗಲ್ಲು ಹಾಕುವಾಗ ರಾಜ್ಯ ಸರ್ಕಾರದಲ್ಲಿದ್ದರೂ ಆಹ್ವಾನಿಸದಿರುವುದು ಆರ್‌ಜೆಡಿ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಬಿಜೆಪಿ ಧ್ವಜ ಹರಿದ ಆರ್‌ಜೆಡಿ ಕಾರ್ಯಕರ್ತರು

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಆರ್‌ಜೆಡಿ ಧ್ವಜ ಹಿಡಿದ ಕಾರ್ಯಕರ್ತರು ಸೇತುವೆಯ ಮೇಲೆ ಮೆರವಣಿಗೆ ನಡೆಸುತ್ತಾ ತೇಜಸ್ವಿ ಯಾದವ್ ಮತ್ತು ಲಾಲು ಪ್ರಸಾದ್ ಯಾದವ್ ಪರ ಘೋಷಣೆ ಕೂಗುತ್ತಿರುವುದು ಕಂಡುಬಂದಿದೆ. ಈ ವೇಳೆ ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಸಮ್ರಾಟ್ ಚೌಧರಿ ಅವರ ಬ್ಯಾನರ್‌ಗಳನ್ನು ಹರಿದು ಹಾಕಿದ್ದಾರೆ. ಬಿಜೆಪಿ ಧ್ವಜಗಳಿಗೂ ಹಾನಿ ಮಾಡಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಪ್ರತಿಭಟನೆ ಸುಮಾರು 40 ನಿಮಿಷಗಳ ಕಾಲ ನಡೆದಿದೆ.

ಸೇತುವೆಗೆ ನಿತೀಶ್ ಕುಮಾರ್ ಹೆಸರಿಗೆ ವಿರೋಧ

6 ಪಥಗಳ ಕಚ್ಚಿ ದರ್ಗಾ-ಬಿದೂಪುರ್ ಸೇತುವೆಗೆ ನಿತೀಶ್ ಕುಮಾರ್ ಹೆಸರು ಇಟ್ಟಿರುವುದಕ್ಕೆ ತೇಜಸ್ವಿ ಯಾದವ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜೀವಂತ ರಾಜಕಾರಣಿಗಳ ಹೆಸರನ್ನು ಸಾರ್ವಜನಿಕ ಯೋಜನೆಗಳಿಗೆ ಇಡುವುದು ಸರಿಯಲ್ಲ ಎಂದಿರುವ ಅವರು, ಸೇತುವೆಯನ್ನು ನಿತೀಶ್ ಕುಮಾರ್ ಮೊದಲೇ ಉದ್ಘಾಟಿಸಿದ್ದರು ಮತ್ತು ಯೋಜನೆಗೆ ಕೇಂದ್ರದ ಅನುದಾನ ಬಂದಿಲ್ಲ ಎಂದು ಆರೋಪಿಸಿದ್ದಾರೆ.

ತೇಜಸ್ವಿ ಯಾದವ್ ಅವರು ಸೇತುವೆಗೆ ವೈಶಾಲಿಯ ಸ್ವಾತಂತ್ರ್ಯ ಹೋರಾಟಗಾರ ಅಕ್ಷಯವತ್ ರೈ ಅವರ ಹೆಸರಿಡುವಂತೆ ಜನವರಿ ಮತ್ತು ಫೆಬ್ರವರಿಯಲ್ಲಿ ಮನವಿ ಸಲ್ಲಿಸಿದ್ದಾಗಿ ಸರ್ಕಾರಿ ದಾಖಲೆಗಳನ್ನು ಹಂಚಿಕೊಂಡಿದ್ದಾರೆ. ಆದರೆ, ಗುರು ಗೋಬಿಂದ್ ಸಿಂಗ್ ಅವರ ಹೆಸರಿಡುವ ಪ್ರಸ್ತಾವನೆ ಪರಿಶೀಲನೆಯಲ್ಲಿದೆ ಎಂದು ರಸ್ತೆ ನಿರ್ಮಾಣ ಇಲಾಖೆ ತಿಳಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಮ್ರಾಟ್ ಚೌಧರಿ, ನಿತೀಶ್ ಕುಮಾರ್ ಅವರ ಎರಡು ದಶಕಗಳ ಸಾರ್ವಜನಿಕ ಸೇವೆಯನ್ನು ಗೌರವಿಸಲು ಸೇತುವೆಗೆ ಅವರ ಹೆಸರಿಡಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಶಾರುಖ್ ಖಾನ್ ವಾಚ್ ಬೆಲೆ 3.49 ಕೋಟಿ ರೂ.! ರಣವೀರ್ ಗಡಿಯಾರದ ಪ್ರೈಸ್​ ಎಷ್ಟು ಗೊತ್ತಾ? | Luxury Watches

ಇನ್ನೊಂದೆಡೆ, ಬಿಜೆಪಿ ಸಂಸದ ಜನಾರ್ದನ್ ಸಿಂಗ್ ಸಿಗ್ರಿವಾಲ್ ಅವರು ತೇಜಸ್ವಿ ಯಾದವ್ ವಿರುದ್ಧ ವಾಗ್ದಾಳಿ ನಡೆಸಿದ್ದು, 15 ವರ್ಷ ಅಧಿಕಾರದಲ್ಲಿದ್ದರೂ ರಾಘೋಪುರ ಕ್ಷೇತ್ರದ ಅಭಿವೃದ್ಧಿಗೆ ಗಮನ ನೀಡಿಲ್ಲ ಎಂದು ಆರೋಪಿಸಿದ್ದಾರೆ. ಇನ್ನು 19.7 ಕಿ.ಮೀ ಉದ್ದದ ಈ ಸೇತುವೆ ಯೋಜನೆಯಲ್ಲಿ 9.7 ಕಿ.ಮೀ ಮುಖ್ಯ ಸೇತುವೆ ಹಾಗೂ 10 ಕಿ.ಮೀ ಸಂಪರ್ಕ ರಸ್ತೆಗಳಿದ್ದು, ಪಾಟ್ನಾದ ಕಚ್ಚಿ ದರ್ಗಾದಿಂದ ವೈಶಾಲಿ ಜಿಲ್ಲೆಯ ಬಿದೂಪುರ್‌ವರೆಗೆ ಸಂಪರ್ಕ ಕಲ್ಪಿಸುತ್ತದೆ.